ವಿಕಲಚೇತನರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಂಗ್ವಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ವಿಕಲಚೇತನರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಂಗ್ವಾರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕುಮಟ್ಟದ ವಿಕಲಚೇತನರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ವಿಕಲಚೇತನರ ಸಮಸ್ಯೆಗಳು ಕೇವಲ ವೈಯಕ್ತಿಕ ಸಮಸ್ಯೆಗಳಲ್ಲ. ಅವು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಮಹತ್ವದ ವಿಚಾರಗಳಾಗಿವೆ. ಅವರಿಗೆ ಗೌರವಯುತ ಬದುಕು ಹಾಗೂ ಸಮಾನ ಹಕ್ಕುಗಳನ್ನು ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಭೆಯಲ್ಲಿ ಎಂ.ಆರ್.ಡಬ್ಲ್ಯೂ. ಭೀಮರಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ತಾಲೂಕಿನ ವಿವಿಧ ಗ್ರಾಮಗಳ ವಿಕಲಚೇತನರು ಹಾಗೂ ಅವರ ಪೋಷಕರು ಭಾಗವಹಿಸಿ ತಮ್ಮ ಸಮಸ್ಯೆಗಳು, ಬೇಡಿಕೆಗಳು ಮತ್ತು ಹಕ್ಕುಗಳ ಕುರಿತು ಮುಕ್ತವಾಗಿ ಚರ್ಚಿಸಿದರು.

ಎಪಿಡಿ ಸಂಸ್ಥೆಯ ತಾಲೂಕು ಸಂಯೋಜಕ ವಿರೂಪಾಕ್ಷಿ ಮಾಲಿಪಾಟೀಲ ಮಾತನಾಡಿ, ವಿಕಲಚೇತನರ ಅಭಿವೃದ್ಧಿ ಮತ್ತು ಪುನರ್ವಸತಿಗಾಗಿ ಸಂಸ್ಥೆ ಕೈಗೊಳ್ಳುತ್ತಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಕಲಚೇತನರ ಪುನರ್ವಸತಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ರಚಿಸಬೇಕು. ವಿಕಲಚೇತನರಿಗೆ ಮೀಸಲಿರುವ ಶೇ.5ರಷ್ಟು ಅನುದಾನವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ನಿಯಮಾನುಸಾರ ಸದ್ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.

ಎಪಿಡಿ ಸಂಸ್ಥೆಯ ನೀತಿ ಮತ್ತು ವಕಾಲತ್ತು ವಿಭಾಗದ ಸಂಯೋಜಕ ನಾಗಪ್ಪ ಜಿ. ಮಾತನಾಡಿದರು. ಈ ಸಂದರ್ಭ ಗ್ರೇಡ್ 2 ತಹಸೀಲ್ದಾರ್ ನರಸಿಂಹಸ್ವಾಮಿ, ತಾಲೂಕು ಆರ್ಪಿಡಿ ಟಾಸ್ಕ್ಫೋರ್ಸ್ ಅಧ್ಯಕ್ಷ ಸಿದ್ದನಗೌಡ ನಜರಾಪುರ, ಉಪತಹಶೀಲ್ದಾರ್ ನರಸಿಂಹಸ್ವಾಮಿ, ಸಿಡಿಪಿಒ, ಸಿಆರ್ಪಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ವಿಆರ್‌ಡಬ್ಲ್ಯುಗಳು, ಆರ್ಪಿಡಿ ಟಾಸ್ಕ್‌ಫೋಸ್‌ರ್ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಪ್ರತಿನಿಧಿಗಳು, ವಿಕಲಚೇತನರು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು.

----ಕೋಟ್‌----

ವಿಕಲಚೇತನರ ಅಭಿವೃದ್ಧಿ ಹಾಗೂ ಪುನರ್ವಸತಿಗಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚಿಸಬೇಕು. ವಿಕಲಚೇತನರಿಗೆ ಮೀಸಲಿರುವ ಶೇ.5ರಷ್ಟು ಅನುದಾನವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ನಿಯಮಾನುಸಾರ ಕಡ್ಡಾಯವಾಗಿ ಸದ್ಬಳಕೆ ಮಾಡಬೇಕು. ಈ ಮೂಲಕ ವಿಕಲಚೇತನರಿಗೆ ಅಗತ್ಯ ಸೌಲಭ್ಯ ಹಾಗೂ ಹಕ್ಕುಗಳನ್ನು ತಲುಪಿಸಬೇಕು--

-ವಿರೂಪಾಕ್ಷಿ ಮಾಲಿಪಾಟೀಲ, ಎಪಿಡಿ ಸಂಸ್ಥೆಯ ತಾಲೂಕು ಸಂಯೋಜಕ

-----------------

14ವೈಡಿಆರ್‌8 :

ಗುರುಮಠಕಲ್‌ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕುಮಟ್ಟದ ವಿಕಲಚೇತನರ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು.