ಸಾರಾಂಶ
- ಸೈದ್ಧಾಂತಿಕ ಸಂಕುಚಿತತೆ ಮೀರಲು ಹಸಿರು, ನೀಲಿ, ಕೆಂಪು ಒಂದಾಗಿ ಬರಬೇಕು - - -
ಕನ್ನಡಪ್ರಭ ವಾರ್ತೆ ದಾವಣಗೆರೆಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಅಮಾನವೀಯ ಘಟನೆ ನಂತರ ರಾಜ್ಯದ ಹೆಣ್ಣು ಮಗಳು ಪತಿಯನ್ನು ಕಳೆದುಕೊಂಡರೂ, ಮೂವರು ಮುಸ್ಲಿಮರು ತನಗೆ ಹಾಗೂ ತನ್ನ ಮಗನನ್ನು ಒಂದು ಗಂಟೆ ಕಾಲ ರಕ್ಷಣೆ ಮಾಡಿ, ಸುರಕ್ಷಿತವಾಗಿ ಬಿಟ್ಟರು ಎಂಬುದಾಗಿ ಹೇಳಿದ್ದಾರೆ. ಇದು ನಮ್ಮ ಭಾರತದ ಸಂಕೇತ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಶನಿವಾರ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಅವರು ಮಾತನಾಡಿ, ಅಮಾನವೀಯ ಘಟನೆ ನಡೆಯುವ ಸಂದರ್ಭ ಮಾನವೀಯವಾಗಿ ವರ್ತಿಸುವ ಮನಸ್ಸುಗಳು ಈಗ ಭಾರತದಲ್ಲಿದ್ದಾರೆ. ಜಾತಿ, ಧರ್ಮಗಳನ್ನು ಮೀರಿ ಮಾಡಿದ ಕೆಲಸಗಳನ್ನು, ಮನಸ್ಸುಗಳನ್ನು ವಿಸ್ತರಿಸಬೇಕಾಗಿದೆ ಎಂದರು.ಇಂದು ಜಾತಿಯಲ್ಲಿದ್ದೂ ಜಾತಿಯನ್ನು ಮೀರಿದ ನಾಯಕತ್ವ ಬೇಕಾಗಿದೆ. ಧರ್ಮದೊಳಗಿದ್ದೂ ಧರ್ಮವನ್ನೂ ಮೀರಿದ ಧಾರ್ಮಿಕ ನಾಯಕತ್ವ ಬೇಕು, ಪಕ್ಷದಲ್ಲಿದ್ದೂ ಪಕ್ಷವನ್ನು ಮೀರುವ ನಾಯಕತ್ವವು ಬೇಕು. ಆಗ ಮಾತ್ರ ದೇಶದಲ್ಲಿ ಸಮಾನತೆ, ಸೌಹಾರ್ದತೆ ಬರುವುದಕ್ಕೆ ಸಾಧ್ಯ. ಸಮಾಜದಲ್ಲಿ ನಾವೇನಾದರೂ ಬದಲಾವಣೆ ಮಾಡಬೇಕಾದರೆ, ಸೈದ್ಧಾಂತಿಕ ಬದ್ಧತೆ ಬಿಟ್ಟುಕೊಡದೆ, ಸೈದ್ಧಾಂತಿಕ ಸಂಕುಚಿತತೆಯನ್ನು ಮೀರಬೇಕು. ಅದನ್ನು ಮೀರಬೇಕೆಂದರೆ, ಹಸಿರು, ನೀಲಿ, ಕೆಂಪು ಎಲ್ಲವೂ ಒಂದಾಗಿ ಬರಬೇಕು ಎಂದು ಪ್ರೊ.ರಾಮಚಂದ್ರಪ್ಪ ತಿಳಿಸಿದರು.
ಕರ್ನಾಟಕ ಜನಶಕ್ತಿ ಅಧ್ಯಕ್ಷ, ಎದ್ದೇಳು ಕರ್ನಾಟಕ ಕೇಂದ್ರ ಸಮಿತಿ ಸದಸ್ಯ ನೂರ್ ಶ್ರೀಧರ್ ಮಾತನಾಡಿ, ಸಮಾಜದ ಎಲ್ಲ ಕಡೆ ವಿಷ ಹರಡಿದೆ. ಒಂದು ಕಡೆ ಕೇಂದ್ರದ ಜೊತೆಗೆ, ರಾಜ್ಯ ಸರ್ಕಾರದ ವಿರುದ್ಧವೂ ಗುದ್ದಾಟ ನಡೆಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ನಿಮ್ಮೆಲ್ಲರ ಆಸೆಯನ್ನು ನಿರಾಶೆಗೊಳಿಸಿದೆ ಎಂದರು.ಮೇ 20ರಂದು ರೈತ, ಕಾರ್ಮಿಕ ಸಂಘಟನೆಗಳು ರಾಷ್ಟ್ರೀಯ ಮುಷ್ಕರಕ್ಕೆ ಕರೆ ಕೊಟ್ಟಿವೆ. ಆ ಮುಷ್ಕರದಲ್ಲಿ ನಾವೆಲ್ಲರೂ ಸಕ್ರಿಯವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಭಾಗವಹಿಸಬೇಕಾಗಿದೆ. ಅದಕ್ಕಾಗಿ ಸಂಯುಕ್ತ ಹೋರಾಟದಿಂದ ರಾಜ್ಯದ ಆಯ್ದ 100 ಆಯಕಟ್ಟಿನ ಪ್ರದೇಶಗಳಲ್ಲಿ ಸರ್ಕಾರವನ್ನು ನಡುಗಿಸುವ ಹೋರಾಟ ಕಟ್ಟಬೇಕಾಗಿದೆ. ಅದರಲ್ಲಿ ಏದ್ದೇಳು ಕರ್ನಾಟಕ ಪಡೆ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
- - -(ಫೋಟೋ:)