ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈಷ್ಣದೇವಿ ಕ್ರಿಯೇಷನ್ಸ್ ವತಿಯಿಂದ 79ನೇ ಸ್ವಾತಂತ್ರೋತ್ಸವ ನಿಮಿತ್ತ ನವನಗರದ ಸೆಕ್ಟರ್ ನಂ. 34ರ ಶ್ರೀ ಜೀವ್ಹೇಶ್ವರ ದೇವಸ್ಥಾನ ಹತ್ತಿರ ಆಗಸ್ಟ್ 14ರಂದು ಮಧ್ಯ ರಾತ್ರಿ 12 ಗಂಟೆಗೆ ಧ್ವಜಾರೋಹಣ ನಡೆಯಿತು.ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಸ್ವಾತಂತ್ರ್ಯ ನಮಗೆ ಸುಲಭಕ್ಕೆ ಸಿಕ್ಕದ್ದಲ್ಲ. ಹಲವು ಮಹನೀಯರ ತ್ಯಾಗ, ಬಲಿದಾನದಿಂದ ದೇಶ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದೆ. ಇಂಥ ಮಹಾನ್ ಸಾಧನೆಯ ಸ್ವಾತಂತ್ರ್ಯವನ್ನು ಉಳಿಸಿ, ರಕ್ಷಿಸಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ತತ್ವದಡಿಯಲ್ಲಿ ಎಲ್ಲರೂ ಸಾಗಬೇಕು. ದೇಶದ ಪ್ರಗತಿಯತ್ತ ದಾಫುಗಾಲಿಡುವತ್ತ ಶ್ರಮಿಸಬೇಕು ಎಂದು ಹೇಳಿದರು.
ಚರಂತಿಮಠದ ಡಾ. ಪ್ರಭು ಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿ ರಾಷ್ಟ್ರ ಧ್ವಜದ ಬಗ್ಗೆ ಕಾಳಜಿ ಇಲ್ಲ. ಎಲ್ಲೆಂದರಲ್ಲಿ ಬಿಸಾಕುತ್ತಿದ್ದೇವೆ. ರಾಷ್ಟ್ರದ ತ್ರಿವರ್ಣಧ್ವಜದ ಮಹತ್ವನ್ನು ಎಲ್ಲರೂ ಅರಿತುಕೊಳ್ಳಬೇಕು. ರಾಷ್ಟ್ರಧ್ವಜ ಎಂದರೆ ನಮ್ಮ ಆತ್ಮ, ಪ್ರಾಣ ಇದ್ದಂತೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಹೋರಾಟಗಾರರ ಬಲಿದಾನದ ಸಂಕೇತ. ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆಂದರು.ಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆ ಪ್ರಸ್ತಾವಿಕವಾಗಿ ಮಾತನಾಡಿ, 32 ವರ್ಷಗಳಿಂದ ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಹೋಲುವ ಹಾಗೂ ವಿದ್ವಾಂಸ ಅಶೋಕ ನಗರೆ ಅವರು ಧ್ವಜಾರೋಹಣ ನೆರವೇರಿಸಿದರು. ಸಂಜೆ 8 ಗಂಟೆಯಿಂದ ವಿವಿಧ ಕಲಾತಂಡಗಳಿಂದ ದೇಶಭಕ್ತಿ, ಸಂಗೀತ, ಗಾಯನ, ನೃತ್ಯ ಕಾರ್ಯಕ್ರಮ ನಡೆದವು.ಪಂಢರಾಪುರದ ಪ್ರಭಾಕರದಾದಾ ಬಜರಂಗ ಬುವಾ ಬೋಧಲೆ ಮಹಾರಾಜರು, ಕುಂದರಗಿ ಸುರಗಿರಿ ಬೆಟ್ಟದ ಲಕ್ಷ್ಮಣ ಶರಣರು, ಅಂಕಲಿಮಠದ ಡಾ.ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪಿ.ಸಿ. ಗದ್ದಿಗೌಡರ , ಪದ್ಮಶ್ರೀ ಪುರಸ್ಕೃತ ಡಾ.ವೆಂಕಪ್ಪ ಸುಗತೇಕರ, ಖ್ಯಾತ ಚಲನಚಿತ್ರ ಹಾಸ್ಯನಟ ಟೆನ್ನಿಸ್ ಕೃಷ್ಣ, ನಟಿ ಯೋಗಿತಾ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾ ರಾವ್, ಕೆಬಿಜೆ ಎನ್.ಎಲ್. ಆಲಮಟ್ಟಿ ಮುಖ್ಯ ಅಭಿಯಂತರ ಬಸವರಾಜ, ಡಿ. ಬೀಳಗಿ ಶುಗರ್ಸ್ ಸಂಸ್ಥೆಯ ಲಕ್ಷ್ಮಣ ನಿರಾಣಿ, ಬಾಗಲಕೋಟೆ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಗದ್ದಿ, ಬೀಳಗಿ ಪಟ್ಟಣ ಸಹಕಾರಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ನಗರದ ಖ್ಯಾತ ವೈದ್ಯ ಡಾ.ಉದಯಕುಮಾರ ಗುಳೇದ ಸೇರಿದಂತೆ ಹಲವರಿದ್ದರು.