ಸಮಾಜದಲ್ಲಿ ಜಾತಿ ವ್ಯವಸ್ಥೆ ಜನ್ಮ ತಾಳಿ ಕಾಲ ಕಾಲಕ್ಕೆ ಸಮಾಜದ ಮೇಲೆ ದುಷ್ಪರಿಣಾಮ ಬೀರಿ ಸಾಮಾಜಿಕ ಪಿಡುಗಾಗಿ ರೂಪುಗೊಂಡಿದೆ. ಇದರ ನಿವಾರಣೆಗಾಗಿ ಬುದ್ದ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳೊಂದಿಗೆ ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ.ಅರ್ಜುನ ಗೋಳಸಂಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಮಾಜದಲ್ಲಿ ಜಾತಿ ವ್ಯವಸ್ಥೆ ಜನ್ಮ ತಾಳಿ ಕಾಲ ಕಾಲಕ್ಕೆ ಸಮಾಜದ ಮೇಲೆ ದುಷ್ಪರಿಣಾಮ ಬೀರಿ ಸಾಮಾಜಿಕ ಪಿಡುಗಾಗಿ ರೂಪುಗೊಂಡಿದೆ. ಇದರ ನಿವಾರಣೆಗಾಗಿ ಬುದ್ದ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳೊಂದಿಗೆ ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ.ಅರ್ಜುನ ಗೋಳಸಂಗಿ ಹೇಳಿದರು.ತಾಲೂಕಿನ ಜಾಲಿಹಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ ಕಲಬುರಗಿ ವಿಭಾಗ, ರಾಯಚೂರು ಜಿಲ್ಲಾ ಘಟಕ ಹಾಗೂ ಸಿಂಧನೂರು ತಾಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾತಿ ವಿನಾಶ ಚಳವಳಿ; ಮುಂದಿನ ಹೆಜ್ಜೆಗಳು ವಿಷಯ ಕುರಿತು ಎರಡು ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಚಳವಳಿ ಅಗತ್ಯವಾಗಿದೆ. ಎಲ್ಲ ಶೋಷಿತ ಜನಾಂಗದವರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಶಿಬಿರದ ನಿರ್ದೇಶಕ ತಾಯಿರಾಜ್ ಮರ್ಚೆಟ್ಹಾಳ ಮಾತನಾಡಿ, ಸಮಾಜದಲ್ಲಿ ನಡೆಯುವ ಜಾತಿ ವ್ಯವಸ್ಥೆಯ ಕರಾಳತೆಯ ವಿರುದ್ಧ ಹೋರಾಟ ರೂಪಿಸಲು ಆಲೋಚನಾ ಕ್ರಮದ ನಿರ್ಮಾಣಕ್ಕಾಗಿ ಇಂತಹ ಶಿಬಿರಗಳು ಅಗತ್ಯ ಎಂದು ಹೇಳಿದರು.ಶಿಬಿರದ ಮೊದಲನೇ ಗೋಷ್ಠಿಯಲ್ಲಿ ವಚನಪೂರ್ವ ಚಿಂತನೆಗಳು ವಿಷಯ ಕುರಿತು ಸಂಪನ್ಮೂಲ ವ್ಯಕ್ತಿ ಡಾ.ವೈ.ಎಂ.ಭಜಂತ್ರಿ, ಎರಡನೇ ಚಿಂತನಾ ಗೋಷ್ಠಿಯಲ್ಲಿ ವಚನ ಸಾಹಿತ್ಯ ಚಳವಳಿ ಕುರಿತು ಬೆಳಗಾವಿಯ ಸಾಹಿತಿ ಡಾ.ಎಚ್.ಬಿ.ಕೋಲ್ಕಾರ್, ಮೂರನೇ ಗೋಷ್ಠಿಯಲ್ಲಿ ಹೋರಾಟದ ಹಾಡುಗಳ ಕುರಿತು ಹೋರಾಟಗಾರ ಅಂಬಣ್ಣ ಆರೋಲಿಕರ್ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ.ಅರುಣಕುಮಾರ ಭೇರಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ವಿಭಾಗ ಸಂಚಾಲಕ ಎಚ್.ಎಫ್.ಮಸ್ಕಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕ ಹನುಮಂತಪ್ಪ ಚಂದಲಾಪೂರ, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಗೊರಬಾಳ, ಡಿ.ಎಚ್.ಕಂಬಳಿ, ಡಾ.ಹುಸೇನಪ್ಪ ಅಮರಾಪುರ, ಮಾಳಪ್ಪ ಬರ್ಸಿ, ತಿಮ್ಮಪ್ಪ ನಾಯಕ ಕಲಮಂಗಿ, ರಾಮಣ್ಣ ಹಿರೇಭೇರಿಗಿ, ಬಸವರಾಜ ಪಿ.ನಾಯಕ, ಶೋಭಾ ತೋರಗಲ್, ಕೆ.ಖಾದರ್ಭಾಷ, ನಿರುಪಾದಿ ಗೋಮರ್ಸಿ, ದುರುಗಪ್ಪ ಗುಡದೂರು, ಮಗದಪ್ಪ, ಎಂ.ಶ್ರೀಶೈಲ, ವೀರೇಶ ಕನ್ನಾರಿ, ಮರಿಲಿಂಗಪ್ಪ, ಶರಣಪ್ಪ ಮಾನವಿ ಉಪಸ್ಥಿತರಿದ್ದರು. ಡಾ.ಮಲ್ಲಿಕಾರ್ಜುನ ಕಮತಗಿ ನಿರೂಪಿಸಿ, ಡಾ.ಶರೀಫ್ ಹಸಮಕಲ್ ಸ್ವಾಗತಿಸಿ, ಜ್ಯೋತಿ ವಂದಿಸಿದರು.