ಸಾರಾಂಶ
ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ರೋಚಕ ಹಾಗೂ ರಂಜನಾತ್ಮಕ ಸುದ್ದಿಗಳಿಗೆ ಆದ್ಯತೆ ಕೊಡದೆ ರಚನಾತ್ಮಕತೆಯ ಬಗ್ಗೆ ಗಮನ ನೀಡಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ರೋಚಕ ಹಾಗೂ ರಂಜನಾತ್ಮಕ ಸುದ್ದಿಗಳಿಗೆ ಆದ್ಯತೆ ಕೊಡದೆ ರಚನಾತ್ಮಕತೆಯ ಬಗ್ಗೆ ಗಮನ ನೀಡಬೇಕಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ಹಿರಿಯ ಪತ್ರಕರ್ತ ದಿ.ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಎಷ್ಟೇ ವ್ಯಾಪಕವಾದರೂ ಭಾರತದಲ್ಲಿ ಮುದ್ರಣ ಮಾಧ್ಯಮದ ಬೇಡಿಕೆಗೆ ಕುಂದು ಉಂಟಾಗಿಲ್ಲ. ಏಕೆಂದರೆ ಮುದ್ರಣ ಮಾಧ್ಯಮದ ಬಗ್ಗೆ ಜನರಲ್ಲಿ ಇನ್ನೂ ವಿಶ್ವಾಸ ಉಳಿದುಕೊಂಡಿದೆ. ದೃಶ್ಯ ಮಾಧ್ಯಮಗಳು ಹಾಗೂ ಜಾಲತಾಣಗಳು ಅವಸರದ ಸರಕಾದರೆ ಮುದ್ರಣ ಮಾಧ್ಯಮವು ದಿನಪೂರ್ತಿ ಕೂಲಂಕಷ ಪರಿಶೀಲಿಸಿ ಮರುದಿನ ಸತ್ಯವಾಗಿದ್ದನ್ನು ಕೊಡುತ್ತವೆ ಎಂಬ ವಿಶ್ವಾಸ ಓದುಗರಲ್ಲಿ ಈಗಲೂ ಇದ್ದು ಇದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.1884ರ ಜುಲೈ 1 ರಂದು ಮಂಗಳೂರಿನಲ್ಲಿ ಹರ್ಮಿನ್ ಮೋಗ್ಲಿಂಗ್ ರವರು ಮಂಗಳೂರು ಸಮಾಚಾರ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ್ದು ಇಂದಿನ ಪತ್ರಿಕಾ ದಿನಾಚರಣೆಗೆ ಕಾರಣವಾದರೂ ಅದು ಮತಪ್ರಚಾರದ ಪತ್ರಿಕೆಯಾಗಿತ್ತು. ನಿಜವಾಗಿಯೂ ಕರ್ನಾಟಕದಲ್ಲಿ 1888 ರಲ್ಲಿ ಬಿ.ನರಸಿಂಗರಾಯರು ಮಂಗಳೂರಿನಲ್ಲಿ ಕನ್ನಡದ ಮೊಟ್ಟ ಮೊದಲ ದಿನಪತ್ರಿಕೆ ಸೂರ್ಯೋದಯ ಪ್ರಕಾಶಿಕವನ್ನು ಆರಂಭಿಸಿದ್ದೇ ನಿಜವಾದ ಕನ್ನಡ ಪತ್ರಿಕೋದ್ಯಮದ ಆರಂಭ ಎನ್ನಬಹುದು ಎಂದರು.
ಭಾರತ ಪತ್ರಿಕಾ ರಂಗದ ಪಿತಾಮಹ ಬಂಗಾಳದ ರಮಾನಂದ ಚಟರ್ಜಿ ಯವರು 1907ರಲ್ಲಿ ಮಾಡ್ರನ್ ರಿವ್ಯೂ ಆಂಗ್ಲಪತ್ರಿಕೆಯನ್ನು ಪ್ರಾರಂಭಿಸಿದ್ದು ಇತಿಹಾಸವಾಗಿದೆ, ಕರ್ನಾಟಕದ ಗಾಂಧಿ ಎಂದೆ ಜನಪ್ರಿಯರಾಗಿದ್ದ ಹರ್ಡೇಕರ್ ಮಂಜಪ್ಪನವರು ದಾವಣಗೆರೆಯಲ್ಲಿ 1906 ರಲ್ಲಿ ಧನುರ್ಧಾರಿ ಎಂಬ ಕನ್ನಡ ಪತ್ರಿಕೆಯನ್ನು ಆರಂಭಿಸಿದರು. ಲೋಕಮಾನ್ಯ ಬಾಲಗಂಗಾಧರ ತಿಲಕರು ಕೇಸರಿ ಪತ್ರಿಕೆಯಲ್ಲಿ ಮರಾಠಿಯಲ್ಲಿ ಪ್ರಕಟಿಸುತ್ತಿದ್ದ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ವರದಿಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹರ್ಡೆಕರ್ ಮಂಜಪ್ಪನವರು ಧನುರ್ದಾರಿಯಲ್ಲಿ ಪ್ರಕಟಿಸುತ್ತಿದ್ದರು. 1908ರಲ್ಲಿ ದಾವಣಗೆರೆಯಲ್ಲಿ ತಮ್ಮ ಸ್ವಂತ ಮುದ್ರಣಾಲಯವನ್ನು ಸಹ ಮಂಜಪ್ಪನವರು ಆರಂಭಿಸಿದರು ಎಂದು ಮಾಹಿತಿ ನೀಡಿದರು.ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮಾಜಿ ಮಹಾಪೌರ ಕೆ.ಚಮನ್ ಸಾಬ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕ್ರುದ್ದೀನ್, ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಕೆ.ಏಕಾಂತಪ್ಪ, ಚಂದ್ರಣ್ಣ. ಖಜಾಂಚಿ ಬದ್ರಿನಾಥ್. ಕೆ.ಜಿ.ಶಿವಕುಮಾರ್, ಕಾಡಜ್ಜಿ ಮಂಜುನಾಥ, ಉಪಾಧ್ಯಕ್ಷರಾದ ಜೆ.ಎಸ್.ತಿಪ್ಪೇಸ್ವಾಮಿ, ಜೆ.ಎಸ್.ವೀರೇಶ್, ಕೃಷ್ಣಾಜಿರಾವ್, ವೇದಮೂರ್ತಿ, ಬಿ.ಚನ್ನವೀರಯ್ಯ. ಇಂದುಧರ ನಿಶಾನಿಮಠ, ಬಿ.ಎಸ್.ಮುದ್ದಯ್ಯ, ಕೆ.ಸಿ.ನಿಂಗರಾಜು, ಮಂಜುನಾಥ್, ಕೃಷ್ಣ ಪಿ.ರಾಜೋಳಿ, ಮಂಜುನಾಥ್ ಬಿ ರಾಜೋಳಿ, ಅನಿಲ್ ಕುಮಾರ್ ಭಾವಿ, ಚನ್ನಬಸವ ಶೀಲವಂತ್, ಗೋವಿಂದ ರಾಜ್, ಕೆ.ಜೈಮುನಿ, ಹನುಮಂತಪ್ಪ, ಚಂದ್ರು, ಎ.ಬಿ.ರುದ್ರಮ್ಮ, ಸುಜಾತ ಬೂಸನೂರು ಮತ್ತಿತರರು ಹಾಜರಿದ್ದರು.