ಸಾರಾಂಶ
ಲಕ್ಷ್ಮೇಶ್ವರ: ನಾವು ಬೇರೆ ದೇಶಗಳ ಬೆಳವಣಿಗೆಯ ಬಗ್ಗೆ ಚಿಂತನೆ ಮಾಡುತ್ತ ಅದರೊಂದಿಗೆ ಬೆಳವಣಿಗೆ ಹೊಂದುವುದು ಅಗತ್ಯವಾಗಿದೆ. ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡುತ್ತಿದ್ದೇವೆ ಎನ್ನುವುದನ್ನು ಸಮಾಜ ಚಿಂತನೆ ಮಾಡಬೇಕು ಎಂದು ಪ್ರೊ. ಸಿದ್ದು ಯಾಪಲಪರವಿ ಹೇಳಿದರು.
ಭಾನುವಾರ ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜು ಸಭಾಭವನದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಜಗತ್ತು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಆದರೆ ದೊಡ್ಡ ಪ್ರಮಾಣದಲ್ಲಿರುವ ಸಮಾಜದವರು ಇಂದು ಯಾವ ನಿಟ್ಟಿನಲ್ಲಿ ಬೆಳದಿದ್ದೇವೆ ಎನ್ನುವದನ್ನು ಚಿಂತನೆ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ನಮ್ಮ ದೇಶದವರೆ ಇಂದು ಕೋಟ್ಯಾಧಿಪತಿಗಳಾಗಿದ್ದಾರೆ. ಆದರೆ ನಮ್ಮ ಮಕ್ಕಳು ಅಲ್ಪಸ್ವಲ್ಪ ಸಂಬಳಕ್ಕಾಗಿ ಬೇರೊಬ್ಬರನ್ನು ಅವಲಂಬಿಸುವುದು ನೋವಿನ ಸಂಗತಿಯಾಗಿದೆ. ಈ ಕುರಿತು ಪ್ರತಿಯೊಬ್ಬರು ಗಂಭೀರ ಚಿಂತನೆ ಮಾಡಬೇಕಾದ ಅಗತ್ಯವಾಗಿದೆ. ನಾವು ಬೆಳೆಯುವುದರ ಜೊತೆಗೆ ಸಮಾಜದಲ್ಲಿಯೂ ಮತ್ತೊಬ್ಬರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಕಾರ್ಯ ಮಾಡಬೇಕು ಎಂದ ಅವರು ಸಮಾಜದ ವತಿಯಿಂದ ಹೆಚ್ಚು ಅಂಕಗಳಿಸಿದ ಮಕ್ಕಳ ಪುರಸ್ಕಾರ, ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ವಿಚಾರವಾಗಿದೆ. ಮಕ್ಕಳು ದೇಶದ ಆಸ್ತಿ. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ಸಮಾಜ ಉದ್ಧಾರ ಆಗಲಿದೆ. ಜೊತೆಗೆ ಮಕ್ಕಳ ಭವಿಷ್ಯ ಕೂಡ ಉಜ್ವಲವಾಗಲಿದೆ ಎಂದು ಹೇಳಿದರು.ಸಭೆಯ ಸಾನಿಧ್ಯ ವಹಿಸಿದ್ದ ಬನ್ನಿಕೊಪ್ಪದ ಜಪದಕಟ್ಟಿ ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಎಲ್ಲ ಸಮಾಜಗಳು ಶ್ರೇಷ್ಠತೆ ಹೊಂದಿವೆ. ಈ ನಿಟ್ಟಿನಲ್ಲಿ ಬಣಜಿಗ ಸಮಾಜ ವ್ಯಾಪಾರ ವೃತ್ತಿ ಅಳವಡಿಸಿಕೊಂಡಿದ್ದರೂ ಸಹ ಸಾಮಾಜಿಕ, ಶೈಕ್ಷಣಿಕ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಕಾಣುತ್ತಿದ್ದಾರೆ. ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಈ ವೇಳೆ ಚಂದ್ರಶೇಖರ ಮಹಾಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಸಂಘಟನೆಯಾದರೆ ನಾವು ಬೆಳೆಯುತ್ತೇವೆ, ಸಮಾಜವು ಬೆಳೆಯುತ್ತದೆ ಎಂದು ಹೇಳಿದರು.ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಹತ್ತಿಕಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಟ್ರಸ್ಟ್ ಉಪಾಧ್ಯಕ್ಷ ಲೋಹಿತ ನೆಲವಿಗಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಕರ್ಕಿ, ಹಿರಿಯರಾದ ನಿರ್ಮಲಾದೇವಿ ಹತ್ತಿಕಾಳ, ಬಸವರಾಜ ಬೆಂಡಿಗೇರಿ ಉಪಸ್ಥಿತರಿದ್ದರು. ನಂದಿನಿ ಮಾಳವಾಡ ಪ್ರಾರ್ಥಿಸಿದರು. ಅಕ್ಷತಾ ವಡಕಣ್ಣವರ ಸ್ವಾಗತಿಸಿದರು. ಜೆ.ಎಸ್.ರಾಮಶೆಟ್ಟರ ವಂದಿಸಿದರು. ಬಸವರಾಜ ಶೆಟ್ಟರ, ಶೋಭಾ ಗಾಂಜಿ ನಿರೂಪಿಸಿದರು.
ಲಕ್ಷ್ಮೇಶ್ವರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಮಾಜದ ಮಕ್ಕಳನ್ನು ಸನ್ಮಾನಿಸಲಾಯಿತು. ಬನ್ನಿಕೊಪ್ಪದ ಶ್ರೀಗಳು, ಪ್ರೊ. ಸಿದ್ದು ಯಾಪಲಪರವಿ, ವಿಜಯಕುಮಾರ ಹತ್ತಿಕಾಳ, ಲೋಹಿತ ನೆಲವಿಗಿ, ಇದ್ದರು.