ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಗತ್ತು ಕಂಡ ಶ್ರೇಷ್ಠ ಸಮಾಜ ಸುಧಾರಕರಾದ ಗುರು ಬಸವಣ್ಣನವರು ತೋರಿದ ವೈಚಾರಿಕ ಜ್ಞಾನ, ತತ್ವದ ಆದರ್ಶದ ಹಾದಿಯಲ್ಲಿ ಜಗತ್ತು ಸಾಗಿದಾಗ ಮಾತ್ರ ಜಗತ್ತು ನಿಜ ಅರ್ಥದಲ್ಲಿ ಕಲ್ಯಾಣ ವಿಶ್ವ ನಿರ್ಮಾಣಗೊಳ್ಳಲು ಸಾಧ್ಯ. ಗುರು ಬಸವಣ್ಣನವರು ಹಾಕಿಕೊಟ್ಟ ತತ್ವ ಸಂದೇಶದ ಮಾರ್ಗದಲ್ಲಿ ಸಾಗುವುದೇ ನಿಜ ಅರ್ಥದಲ್ಲಿ ಬಸವ ಜಯಂತ್ಯುತ್ಸವ ಎನ್ನಿಸಿಕೊಂಡಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ತಿಳಿಸಿದರು.

ರಾಷ್ಟ್ರೀಯ ಬಸವ ದಳ ಟ್ರಸ್ಟ್ ಆಶ್ರಯದಲ್ಲಿ ವಿನೋಬ ನಗರದ ಬಸವ ಮಂಟಪದಲ್ಲಿ ಆಯೋಜಿಸಿದ್ದ 893ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಗುರು ಬಸವಣ್ಣನವರು ಇಡೀ ವಿಶ್ವಕ್ಕೆ ತಿಳಿಸಿದ ಕಾಯಕ ಮತ್ತು ದಾಸೋಹ ತತ್ವಗಳು ಅತ್ಯಂತ ಆದರ್ಶ ಎನಿಸಿದ್ದು, ಅವುಗಳ ಮಾರ್ಗದಲ್ಲಿ ವಿಶ್ವ ಸಾಗುವ ಅನಿವಾರ್ಯತೆ ಇದ್ದು ಆ ಮಾರ್ಗದಲ್ಲಿ ಸಾಗುವ ಪ್ರಯತ್ನ ಅತ್ಯಂತ ಅವಶ್ಯಕ ಎಂದು ತಿಳಿಸಿದರು.

ಜಯಂತ್ಯುತ್ಸವ ಸಮಾರಂಭದಲ್ಲಿ ಶರಣರಾದ ಶಿವಮೊಗ್ಗ ವೇಣುಗೋಪಾಲ್ ವಿಶ್ರಾಂತ ಆಕಾಶವಾಣಿ ಕಲಾವಿದರು. ಶರಣ ಪಂ. ಹುಮಾಯುನ್ ಹರ್ಲಾಪುರ್ ಮತ್ತು ವಿಶ್ರಾಂತ ಮುಖ್ಯ ಶಿಕ್ಷಕ ಶರಣ ಬಾಬುಜಾನ್ ಶಿಕಾರಿಪುರ ಇವರುಗಳ ಪ್ರಾಮಾಣಿಕ ಕಾಯಕ ಸೇವೆಯನ್ನು ಗುರುತಿಸಿ ಅವರಿಗೆ ಭಕ್ತಿ ಸಮರ್ಪಣೆ ಸಲ್ಲಿಸಲಾಯಿತು.

ಇಬ್ಬರೂ ಗಾಯಕರು ಸಹ ವಚನ ಗಾಯನದ ಮೂಲಕ ಗುರು ಬಸವಣ್ಣನವರಿಗೆ ಭಕ್ತಿ ಸಮರ್ಪಣೆ ಸಲ್ಲಿಸಿದರು. ಗುರು ಬಸವಣ್ಣನವರು ಕಲ್ಯಾಣದಲ್ಲಿ ಕಟ್ಟಿದ ಕಲ್ಯಾಣ ಸಾಮ್ರಾಜ್ಯ ವಿಶ್ವಕ್ಕೆ ಸದಾ ದಾರಿದೀಪ. ಅವರ ವಚನಗಳು ಅನುಭಾವ ಲೋಕದತ್ತ ಕರೆದುಕೊಂಡು ಹೋಗುವುದು. ಅವರ ವಚನಗಳು ನಮಗೆ ಸಾರ್ಥಕತೆಯ ಪಾಠ ಬೋಧನೆ ಮಾಡಿರುವುದನ್ನು ಕಾಣಬಹುದು. ವಿಶ್ವಶಾಂತಿಯ ಮಂದ ಮಂತ್ರವನ್ನು ಅವರ ವಚನಗಳಲ್ಲಿ ಕಾಣಬಹುದು. ಆ ದಿಕ್ಕಿನಲ್ಲಿ ಸಾಗುವ ಪ್ರಯತ್ನ ಮಾಡೋಣ ಎಂದು ಶರಣೆ ನೀಲಲೋಚನ ಹಾಲಪ್ಪನವರು ತಮ್ಮ ಅನುಭಾವ ಸಂದೇಶದಲ್ಲಿ ತಿಳಿಸಿದರು.


ಷಟ್ಟಲ ಧ್ವಜಾರೋಹಣವನ್ನು ರಾಷ್ಟ್ರೀಯ ಬಸವದಳ ಟ್ರಸ್ಟ್ ಅಧ್ಯಕ್ಷರಾದ ಶರಣ ರಾಮಪ್ಪ ನೆರೆವೇರಿಸಿದರು. ಟ್ರಸ್ಟ್ ಗೌರವಾಧ್ಯಕ್ಷ ಶರಣರಾದ ಹಾಲಪ್ಪರವರು ಅಧ್ಯಕ್ಷತೆ ವಹಿಸಿದ್ದರು. ಶರಣ ಬಾಳಾನಂದರವರು ಪ್ರಾರ್ಥನೆ ಸಲ್ಲಿಸಿದರು. ಶರಣ ಯೋಗೀಶ್ ನಿರ್ವಿಕಲ್ಪರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶರಣ ಜ್ಞಾನೇಶ್ವರ, ಮೂಲಿಮನಿ, ಶಿವರುದ್ರಪ್ಪ, ಶಾಂತಮ್ಮ, ಶಿವಗಂಗಮ್ಮ ಮುಂತಾದವರು ಉಪಸ್ಥಿತರಿದ್ದರು.