ತುಂಡಾದ ಶವಗಳನ್ನು ಹೆಕ್ಕಿ ರಾಶಿಮಾಡಿದೆವು: ವಯನಾಡ ದುರಂತದ ಚಿತ್ರಣ ನೀಡಿದ ಕೊಡಗಿನ ತಂಡ

| Published : Aug 02 2024, 12:50 AM IST / Updated: Aug 02 2024, 12:51 AM IST

ತುಂಡಾದ ಶವಗಳನ್ನು ಹೆಕ್ಕಿ ರಾಶಿಮಾಡಿದೆವು: ವಯನಾಡ ದುರಂತದ ಚಿತ್ರಣ ನೀಡಿದ ಕೊಡಗಿನ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಿ ನೋಡಿದರೂ ಬಂಡೆ ಕಲ್ಲುಗಳ ರಾಶಿಯೇ ಕಾಣುತ್ತಿತ್ತು. ಸುಮಾರು 18 ಮೃತದೇಹಗಳನ್ನು ಹೊರ ತೆಗೆದಿದ್ದೆವು. ಅಲ್ಲಿನ ವಾತಾವರಣ ಕಂಡು ಈಗಲೂ ನಮಗೆ ಮೈ ಜುಮ್ ಎನ್ನುತ್ತಿದೆ ಎಂದು ವಯನಾಡಿನಲ್ಲಿ ಕಾರ್ಯಾಚರಣೆ ನಡೆಸಿದ ಕೊಡಗು ಜಿಲ್ಲೆಯ ತಂಡ ದುರಂತದ ಚಿತ್ರಣ ನೀಡಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಲ್ಲಿ ಎಲ್ಲಿ ನೋಡಿದರೂ ಬಂಡೆ ಕಲ್ಲುಗಳ ರಾಶಿಯೇ ಕಾಣುತ್ತಿತ್ತು. ಘಟನೆ ನಡೆದ ಪ್ರದೇಶದ ತುತ್ತ ತುದಿಗೆ ನಾವು ನಾಲ್ಕು ಮಂದಿ ಸ್ಥಳೀಯರೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದೆವು. ಸುಮಾರು 18 ಮೃತದೇಹಗಳನ್ನು ಹೊರ ತೆಗೆದಿದ್ದೆವು. ಕೆಲವೊಂದು ಮೃತದೇಹಗಳು ತುಂಡಾಗಿದ್ದವು. ಅಲ್ಲಿನ ವಾತಾವರಣ ಕಂಡು ಈಗಲೂ ನಮಗೆ ಮೈ ಜುಮ್ ಎನ್ನುತ್ತಿದೆ!

ಕೊಡಗು ಜಿಲ್ಲೆಯಿಂದ ವಯನಾಡಿನ ಮುಂಡಕೈ ಪ್ರಕೃತಿ ವಿಕೋಪ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಕೊಡಗಿನ ಯುವಕರ ತಂಡ ತಮ್ಮ ಕಣ್ಣಿಗೆ ಕಂಡದ್ದನ್ನು ವಿವರಿಸಿದ್ದು ಹೀಗೆ.

10.30ಗೆ ಅಲ್ಲಿದ್ದೆವು: ಮಂಗಳವಾರ ಬೆಳಗ್ಗೆ 8 ಗಂಟೆಗೆ ಟೀವಿಯಲ್ಲಿ ಸುದ್ದಿ ನೋಡಿದ ಕೂಡಲೇ ಆಂಬ್ಯುಲೆನ್ಸ್‌ ಜತೆಗೆ ಹೊರಟ ನಾವು 8 ಮಂದಿ 10.30ಕ್ಕೆ ವಯನಾಡಿನ ಮುಂಡಕೈಗೆ ತಲುಪಿದೆವು. ಬೆಟ್ಟದಲ್ಲಿದ್ದ ಬಂಡೆಕಲ್ಲುಗಳು ಮುಂಡಕೈ ಗ್ರಾಮದ ಮನೆಗಳನ್ನೆಲ್ಲ ನೆಲಸಮ ಮಾಡಿತ್ತು. 400ಕ್ಕೂ ಹೆಚ್ಚು ಮನೆಗಳಿದ್ದ ಗ್ರಾಮ ಇದೀಗ ಕಸದಿಂದ ತುಂಬಿದ್ದ ಮೈದಾನದಂತಾಗಿತ್ತು. ನಮ್ಮ ಜೀವನದಲ್ಲಿ ಇಂತಹ ಭೀಕರ ದೃಶ್ಯ ನೋಡಿದ್ದು ಇದೇ ಮೊದಲು.

ಊರಿಡೀ ಬಂಡೆಕಲ್ಲುಗಳ ರಾಶಿಯೇ ಇತ್ತು. ಭಾರೀ ಪ್ರಮಾಣದಲ್ಲಿ ನೀರು ಕೂಡ ಹರಿಯುತ್ತಿತ್ತು. ಅಲ್ಲಿನ ಸ್ಥಳೀಯರೊಂದಿಗೆ ಸೇರಿ ಬಂಡೆ ಕಲ್ಲುಗಳ ಮೇಲೆ ಹೆಜ್ಜೆಯಿಟ್ಟು, ಸುಮಾರು ನಾಲ್ಕು ಕಿ.ಮೀ. ಕ್ರಮಿಸಿ ಚೂರಲ್ ಮಲೆ ತಲುಪಿದೆವು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಸ್ಕರ್ ವಿವರಿಸಿದರು.

ನಮ್ಮ ಬಳಿ ಗ್ಲೌಸ್‌ಗಳಾಗಲಿ. ಮಾಸ್ಕ್‌ಗಳಾಗಲಿ ಯಾವುದೂ ಇರಲಿಲ್ಲ. ಶವಗಳನ್ನು ಬರಿಗೈನಲ್ಲೇ ತೆಗೆದಿದ್ದೇವೆ. ಅಲ್ಲಿನ ಗ್ರಾಮಸ್ಥರ ಜೊತೆ ಸೇರಿ 18 ಮೃತದೇಹಗಳನ್ನು ಅವಶೇಷಗಳಿಂದ ಹೊರ ತೆಗೆದಿದ್ದೇವೆ. ಕೆಲ ದೇಹಗಳು ತುಂಡಾದ ಸ್ಥಿತಿಯಲ್ಲಿದ್ದುದನ್ನು ನೋಡಿ ಮನಸ್ಸಿಗೆ ತೀವ್ರ ಸಂಕಟವಾಯಿತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನೆಲ್ಲ ಅಲ್ಲಿದ್ದ ಮನೆಯೊಂದರಲ್ಲಿ ರಾಶಿ ಮಾಡಿದೆವು. ಅಲ್ಲಿನ ಸ್ಥಿತಿ ನೋಡಿ ಅಂದು ಊಟ ಕೂಡ ಮಾಡಲಿಲ್ಲ ಎಂದು ಆಸ್ಕರ್ ಭಾವುಕರಾಗಿ ಹೇಳಿದರು.

ಕೊಡಗಿನವರೂ ನಾಪತ್ತೆ: ಕೊಡಗು ಜಿಲ್ಲೆಯ ಸಿದ್ದಾಪುರದಿಂದ ವಯನಾಡುವಿನ ಮುಂಡಕ್ಕೈಗೆ ವಿವಾಹವಾಗಿ ಹೋಗಿರುವ ದಿವ್ಯಾ ಹಾಗೂ ಅವರ ಪತಿ ಸಿದ್ದರಾಜು, ಮಗ ಯದುಕೃಷ್ಣ ಎಂಬವರು ಕೂಡ ಈ ದುರಂತದಲ್ಲಿ ನಾಪತ್ತೆಯಾಗಿರುವ ಬಗ್ಗೆ ನಮಗೆ ಸ್ಥಳೀಯರಿಂದ ಮಾಹಿತಿ ದೊರೆಯಿತು. ಅಲ್ಲಿ 9 ವರ್ಷದ ಮಗುವೊಂದರ ಮೃತದೇಹ ಪತ್ತೆಯಾಗಿದ್ದು, ಆದರೆ ಮಗುವಿನ ಚಹರೆ ಗೋಚರಿಸುತ್ತಿಲ್ಲ. ಇದರಿಂದ ಇದು ಯಾರ ಮೃತದೇಹ ಎಂದು ಗುರುತು ಹಿಡಿಯಲೂ ಸಾಧ್ಯವಾಗಿಲ್ಲ. ಸುಮಾರು 6 ಕುಟುಂಬಗಳವರೂ ಇದು ನಮ್ಮ ಮಗು ಎಂದು ಹೇಳುತ್ತಿದ್ದರು, ಈ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ ಎಂದು ತಿಳಿಯಿತು ಎಂದು ಅಲ್ಲಿನ ವಸ್ತುಸ್ಥಿತಿಯನ್ನು ವಿವರಿಸಿದರು.

ಆಸ್ಪತ್ರೆಯಲ್ಲಿ ಮೃತದೇಹಗಳ ರಾಶಿ: ಮುಂಡಕೈನ ಆಸ್ಪತ್ರೆಯಲ್ಲಿ ರಾಶಿ ರಾಶಿ ಮೃತ ದೇಹಗಳನ್ನು ಐಸ್ ಬಾಕ್ಸ್‌ಗಳಲ್ಲಿ ಹಾಕಿಡಲಾಗಿದೆ. ಇದೀಗ ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳದ ಮೇಲ್ಭಾಗದಲ್ಲಿ ಹಿಟಾಚಿಗಳು ಬಂದಿವೆ. ಸೇನೆ ಸೇರಿ ವಿವಿಧ ರಕ್ಷಣಾ ತಂಡದಿಂದ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ನಾವೀಗ ಅಲ್ಲಿಂದ ಹಿಂತಿರುಗಿದ್ದೇವೆ ಎಂದು ಹೇಳಿದರು.

ಮೇಪಾಡಿಯಲ್ಲಿ ತಂಡ: ''''''''ನಾವು ಗುರುವಾರ ಬೆಳಗ್ಗೆ ವಯನಾಡುವಿನ ಮೇಪಾಡಿ ತಲುಪಿದ್ದೇವೆ. ಇಲ್ಲಿ ಒಂದೇ ದಿನ 25 ಮೃತದೇಹಗಳು ಬಂದಿವೆ. ಮೃತದೇಹಗಳ ಗುರುತು ಸಿಗದ ಕಾರಣ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ನಮ್ಮ ಕಡೆಯಿಂದ ಸಂತ್ರಸ್ತರಿಗೆ ಸಾಧ್ಯವಾದ ಸೇವೆ ಮಾಡುತ್ತಿದ್ದೇವೆ'''''''' ಎಂದು ಕೊಡಗಿನ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಸದಸ್ಯ ಅಬ್ದುಲ್ಲಾ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4 ಮಂದಿ ಹೋಗಿ ನೆರೆ ಸಂತ್ರಸ್ತರಿಗೆ ರು.1 ಲಕ್ಷ ಮೌಲ್ಯದ ಬಟ್ಟೆಯನ್ನು ಮೇಪಾಡಿಯಲ್ಲಿ ಹಸ್ತಾಂತರ ಮಾಡಲಾಗಿದೆ.