ನಾವು ಹುಟ್ಟಿದ ನೆಲವನ್ನು ಭೂ ತಾಯಿವೆಂದು ಒಪ್ಪಿಕೊಳ್ಳಬೇಕು: ತಮ್ಮಯ್ಯ
KannadaprabhaNewsNetwork | Published : Oct 22 2023, 01:00 AM IST
ನಾವು ಹುಟ್ಟಿದ ನೆಲವನ್ನು ಭೂ ತಾಯಿವೆಂದು ಒಪ್ಪಿಕೊಳ್ಳಬೇಕು: ತಮ್ಮಯ್ಯ
ಸಾರಾಂಶ
ನಾವು ಹುಟ್ಟಿದ ನೆಲವನ್ನು ಭೂ ತಾಯಿವೆಂದು ಒಪ್ಪಿಕೊಳ್ಳಬೇಕು: ತಮ್ಮಯ್ಯ
ನನ್ನ ಮಣ್ಣು ನನ್ನ ದೇಶ ಅಮೃತ ಕಳಶಯಾತ್ರೆ, ಮಣ್ಣಿಗೆ ನಮನ ವೀರರಿಗೆ ವಂದನೆ ಕಾರ್ಯಕ್ರಮ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಯಾವುದೇ ಪಕ್ಷ, ಧರ್ಮ, ಜನಾಂಗ, ವ್ಯಕ್ತಿ ತಾನು ಹುಟ್ಟಿದ ನೆಲವನ್ನು ಭೂ ತಾಯಿ ಎಂದು ಒಪ್ಪಿಕೊಂಡಾಗ ಮಾತ್ರ ನೆಚ್ಚಿನ ಮಗನಾಗುತ್ತಾನೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಎನ್‌ಎಸ್‌ಎಸ್, ಎನ್‌ಸಿಸಿ, ಭಾರತೀಯ ಅಂಚೆ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಂಯುಕ್ತಾ ಶ್ರಯದಲ್ಲಿ ಶನಿವಾರ ನಡೆದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆ, ಮಣ್ಣಿಗೆ ನಮನ.....ವೀರರಿಗೆ ವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನವರಾತ್ರಿ ದಸರಾ ಮಹೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ದುಷ್ಟಶಕ್ತಿಗಳ ಸಂಹಾರಕ್ಕೆ ಶ್ರೀ ಚಾಮುಂಡೇಶ್ವರಿ 9 ಅವತಾರ ತಾಳಿ ಸಂಹಾರ ಮಾಡಿದ ಪ್ರತೀಕವಾಗಿ ವಿದ್ಯಾರ್ಥಿನಿಯರನ್ನು ವೇದಿಕೆಗೆ ಆಹ್ವಾನಿಸಿ, ಉದ್ಘಾಟಿಸಿದ್ದನ್ನು ವಿವರಿಸಿದರು. ನನ್ನ ಮಣ್ಣು ನನ್ನ ದೇಶ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಪಂಚದಲ್ಲಿ ಯಾವುದೇ ದೇಶಕ್ಕೆ ಹೋದರೂ ನಮ್ಮ ನೆಲ, ಮಣ್ಣನ್ನು ಭೂಮಿತಾಯಿ ಎಂದು ಪೂಜಿಸಿರುವ ದೇಶ ವಿಶ್ವದಲ್ಲೇ ಭಾರತ ಮೊದಲು ಎಂದರು. ನೆಲ ಜಲ, ಭಾಷೆಯ ಗೌರವ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮ ಆಯೋಜಿಸಿದ್ದು, ಜಾತಿ,ಬೇಧ ಮರೆತು ಹೋರಾಟ ಮಾಡಿದಾಗ ಮಾತ್ರ ಇವುಗಳನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು. ಬೇರೆ ಬೇರೆ ದೇಶಗಳು ಯುದ್ಧ ಮಾಡುತ್ತ ಅಮಾನುಷವಾಗಿ ವರ್ತಿಸುತ್ತಿದ್ದಾರೆ ಎಂದ ಅವರು, ಮಾನವ ಇನ್ನೊಬ್ಬನನ್ನು ಗೌರವದಿಂದ ಕಾಣಬೇಕು ಆಗಲೇ ಹುಟ್ಟಿದ್ದಕ್ಕೆ ಸಾರ್ಥಕ. ಮಣಿಪುರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಘಟನೆ ನೀಚ ಕೃತ್ಯ ಎಂದರು. ನಗರ ಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಅಮೃತ ಮಹೋತ್ಸವ ಅಂಗವಾಗಿ ಕಳೆದ ಒಂದೂವರೆ ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕಾರ್ಯಕ್ರಮದ ಮೂಲಕ ನನ್ನ ಮಣ್ಣು ನನ್ನ ದೇಶ ಶೀರ್ಷಿಕೆಯಡಿ ದೇಶದ ಎಲ್ಲಾ ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಿ ದೆಹಲಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಕೇಂದ್ರ ಸರ್ಕಾರದ ಈ ಕಾರ್ಯಕ್ರಮ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ದೇಶದಲ್ಲೇ ಕಬ್ಬಿಣ ಸಂಗ್ರಹ ಮಾಡಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡಿದ್ದು, ಮಣ್ಣು ಸಂಗ್ರಹಿಸಿ ಬೃಹತ್ ಪಾರ್ಕ್ ನಿರ್ಮಾಣದ ಗುರಿ ಹೊಂದಿದೆ ಎಂದು ಶ್ಲಾಘಿಸಿದರು. ಭಾರತದ ಸಂಸ್ಕೃತಿ, ಪರಂಪರೆ, ಇತಿಹಾಸ, ಧಾರ್ಮಿಕತೆ ಉಳಿಸಿ ಬೆಳೆಸುವ ಮೂಲಕ ವಿಶ್ವಕ್ಕೆ ಪರಿಚಯಿಸುವ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ತಿಳಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಸುವರ್ಣ ಮಹೋತ್ಸವದ ಅಂಗವಾಗಿ ಕಳೆದ ಒಂದೂವರೆ ವರ್ಷದಿಂದ ಹಲವಾರು ಕಾರ್ಯಕ್ರಮ ಆಯೋಜಿಸಿದ್ದು, ಈಗ ನನ್ನ ಮಣ್ಣು ನನ್ನ ದೇಶ ಎಂಬ ವಿನೂತನ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿಯಿಂದ ಹೊರಟ ಜಾಥಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡಿದರು. ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ನೆಹರು ಯುವ ಕೇಂದ್ರ ಅಭಿಷೇಕ್ ಚೌವಾರೆ, ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ್, ಚಂದ್ರಶೇಖರ್, ಶಿವಕುಮಾರ್ ತಾಪಂ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್ ಹಾಜರಿದ್ದರು. 21 ಕೆಸಿಕೆಎಂ 4 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ನನ್ನ ಮಣ್ಣು ನನ್ನ ದೇಶ ಅಮೃತ ಕಳಶಯಾತ್ರೆ, ಮಣ್ಣಿಗೆ ನಮನ ವೀರರಿಗೆ ವಂದನೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.