ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ವತಿಯಿಂದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ 110ನೇ ಜಯಂತಿ ಮಹೋತ್ಸವ ಹಾಗೂ ಶಿಕ್ಷಕರ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಇಂದು ಅಕ್ಷರ ದಾಸೋಹ, ಆರೋಗ್ಯ ದಾಸೋಹ, ಅನ್ನದಾಸೋಹ ಸೇವೆಯನ್ನು ಸಮಾಜಕ್ಕೆ ಕರುಣಿಸಿದೆ. ರಾಜೇಂದ್ರ ಶ್ರೀಗಳವರ ಮಾತೃ ಹೃದಯದಿಂದಾಗಿ ಹಲವಾರು ದೀನದುರ್ಬಲರು, ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಶ್ರೀಗಳವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೆ ಮಹಾನ್ ತತ್ವಜ್ಞಾನಿ ಶ್ರೇಷ್ಠ ಶಿಕ್ಷಣ ತಜ್ಞರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅವರಲ್ಲಿದ್ದ ಅಪಾರವಾದ ಜ್ಞಾನದಿಂದಾಗಿ ಪ್ರಪಂಚದಲ್ಲೇ ಗೌರವಿತರಾದರು. ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ, ಸಂಗೀತ, ಕಲೆ, ಕ್ರೀಡೆಗಳಲ್ಲಿ ಕೌಶಲಗಳನ್ನು ವೃದ್ಧಿಸಿಕೊಂಡು ಬದಲಾಗುತ್ತಿರುವ ಸಮಾಜದಲ್ಲಿ ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ.ಪ್ರಭುಸ್ವಾಮಿ ಮಾತನಾಡಿ, ಶ್ರೀಮಠ ಸೇವೆಯು ಅನನ್ಯವಾದುದು ಪೂಜ್ಯ ಶ್ರೀಗಳವರ ಆಶೀರ್ವಾದದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ದಿನ ಮಠದ ಕೈಕಂರ್ಯವು ರಾಜ್ಯ, ದೇಶ ವ್ಯಾಪ್ತಿಯನ್ನು ದಾಟಿ ವಿದೇಶದಲ್ಲಿ ವಿಸ್ತರಿಸುವುದು ಇದಕ್ಕೆ ಸಾಕ್ಷಿಯಾಗಿದೆ. ಶಿಕ್ಷಕರು ವಿದ್ಯಾರ್ಥಿ ಜೀವನದ ನಿಜವಾದ ನಾಯಕರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ ಜೀವನ ನಮ್ಮೆಲ್ಲರಿಗು ಮಾದರಿಯಾಗಬೇಕು ಎಂದು ತಿಳಿಸಿದರು.ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ನಾಡಿನಲ್ಲಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾಪುರುಷರು. ಗ್ರಾಮೀಣ ಜನರ ಬದುಕಿಗೆ ಬೆಳಕಾಗಿ, ದಾಸೋಹದ ಪರಿಕಲ್ಪನೆಯನ್ನು, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ವಿಸ್ತರಿಸಿದ ಮಹಾಸಂತರು ಎಂದು ತಿಳಿಸಿದರು.
ಪ್ರಾತಃಕಾಲ ಶ್ರೀಗದ್ದುಗೆಯಲ್ಲಿ ಪೂಜೆ ಕಾರ್ಯ ನೆರವೇರಿಸಿ ರೋಬೋಟಿಕ್ ಆನೆಯಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳವರ ಮೂರ್ತಿಯನ್ನು ಇರಿಸಿ ಶಾಲಾ ಆವರಣದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯನ್ನು ನೆರವೇರಿಸಲಾಯಿತು.ಆಡಳಿತಾಧಿಕಾರಿಗಳು, ಸಂಯೋಜನಾಧಿಕಾರಿಗಳು ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಶ್ರದ್ಧಾಭಕ್ತಿ, ಉತ್ಸಾಹದಿಂದ ಪಾಲ್ಗೊಂಡಿದ್ದರು.
ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಎಸ್. ಚಂದ್ರಮೌಳೇಶ್ವರ ಅವರನ್ನು ಸನ್ಮಾನಿಸಿತು. ಸಂಸ್ಥೆಯ ವತಿಯಿಂದ ಮುಖ್ಯಸ್ಥರಿಗೆ ಹಾಗೂ ನೌಕರರಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಉತ್ತಮ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ದತ್ತಿಗಳ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಎಸ್. ಶಿವಸ್ವಾಮಿ, ಜೆಎಸ್‌ಎಸ್ ಸಂಸ್ಥೆಗಳ ಮುಖ್ಯಸ್ಥರಾದ ವೀರಭದ್ರಯ್ಯ, ಡಾ. ಜ್ಞಾನೇಶ್, ಡಾ. ಎಚ್.ಎಂ. ಮಹೇಶ್, ಎಂ. ರಾಜಶೇಖರಮೂರ್ತಿ, ಜಿ. ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ, ಮಹದೇವಪ್ರಸಾದ್, ಸುಶೀಲ ಇದ್ದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಜಿ.ಎನ್. ಮಂಜುನಾಥ್ ಸ್ವಾಗತಿಸಿದರು. ಎಂ. ರಾಜಶೇಖರಮೂರ್ತಿ ಪ್ರತಿಜ್ಞಾವಿಧಿ ಬೋಧಿಸಿದರು, ಕೆ.ಎಸ್. ಮಮತ ವಂದಿಸಿದರು. ಡಿ.ಎಸ್. ಅಂಬಿಕಾ ನಿರೂಪಿಸಿದರು.