ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ವಧರ್ಮಗಳು, ಭಾಷೆ ಹೊಂದಿರುವ ಭಾರತದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.ಪಟ್ಟಣದ ಶ್ರೀಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಹನಿ ನೀರು ಜೀವಜಲ ಎನ್ನುವುದನ್ನು ಅರಿತು ನೀರನ್ನು ಉಳಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದರು.
ಸಂಪತ್ತು ಸಂಮೃದ್ಧಿ ಹೊಂದಿರುವ ಭಾರತ ಮಾತೆಯ ಹಿರಿಮೆ ಕಳಸಪ್ರಾಯವಾಗಿರಲು ನಾವೆಲ್ಲಾರೂ ಕೈ ಜೋಡಿಸೋಣ. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿ ದೇಶದ ಜನರು ನೆಮ್ಮದಿ ಜೀವನ ನಡೆಸಲು ಕಾರಣರಾದ ಮಹತ್ಮಾ ಗಾಂಧಿ ಸೇರಿದಂತೆ ಹಲವು ಹೋರಾಟಗಾರರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದರು.ಸ್ವತಂತ್ರ ನಂತರ ಬದುಕು, ಜೀವನ, ದೇಶ, ಆಡಳಿತ ಹಾಗೂ ನಮ್ಮ ಪ್ರತಿಯೊಂದು ಕಾನೂನುಗಳು ಹೇಗೆ ಇರಬೇಕು ಎಂದು ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಬೃಹತ್ ಸಂವಿಧಾನವನ್ನು ನೀಡಿದ್ದಾರೆ. ಇದರಿಂದ ಇಲ್ಲಿರುವ ಹಲವು ಧರ್ಮ, ಜಾತಿ, ಭಾಷೆಗಳ ಜನರು ನಡುವೆ ಭಾರತಮಾತೆ ಮಕ್ಕಳಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು.
ತಹಸೀಲ್ದಾರ್ ಕೆ.ಎನ್.ಲೋಕೇಶ್ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ಜೊತೆಗೆ ಅವರ ಅದರ್ಶಗುಣ ಅಳವಡಿಸಿಕೊಂಡು ದೇಶಪ್ರೇಮ ಮೆರೆಯಬೇಕು ಎಂದು ಕರೆ ನೀಡಿದರು.ಇದೇ ವೇಳೆ ಕೃಷಿ, ಶಿಕ್ಷಣ, ಆರೋಗ್ಯ, ಪೊಲೀಸ್ ಮಾಧ್ಯಮ, ಸಮಾಜ ಸೇವಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಬಹುಮಾನ ವಿತರಿಸಿದರು.
ಪೊಲೀಸ್ ಹಾಗೂ ವಿದ್ಯಾರ್ಥಿಗಳು ಪಥ ಸಂಚಾಲನ ನಡೆಸಿ ಧ್ವಜ ವಂಧನೆ ಸಲ್ಲಿಸಿದರು. ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಕಾರ್ಯಕ್ರಮಕ್ಕೂ ಮುನ್ನಾ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ತಹಸೀಲ್ದಾರ್ ಲೋಕೇಶ್ ಸೇರಿದಂತೆ ಅನೇಕ ಗಣ್ಯರು ಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಇರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ಕೃಷ್ಣಪ್ಪ, ಬಿಇಒ ಚಂದ್ರಪಾಟೀಲ್, ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.