ಸಾರಾಂಶ
ಕನ್ನಡಕ್ಕೆ ಧಕ್ಕೆ ಬಂದಾಗ ನಾವು ಕೆರಳಬೇಕಿದೆ ಅಂದಾಗ ಮಾತ್ರ ಕನ್ನಡದ ಅಸ್ಮಿತೆ ಉಳಿಯಲು ಸಾಧ್ಯ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಜ್ಯದಲ್ಲಿ ಕನ್ನಡದ, ಕನ್ನಡಿಗರ ಸ್ಥಿತಿ ಶೋಚನಿಯ ಸ್ಥಿತಿಯಲ್ಲಿದೆ. ನಮ್ಮಲ್ಲಿ ಭಾಷಾಭಿಮಾನ ಕಡಿಮೆಯಾಗಿದೆ. ಇದೇ ಪ್ರವೃತ್ತಿ ಮುಂದುವರೆದಲ್ಲಿ ಕನ್ನಡಕ್ಕೆ ಅತ್ಯಂತ ಕೆಟ್ಟ ದಿನಗಳು ಬಂದರೂ ಆಶ್ಚರ್ಯವಿಲ್ಲ. ಹಾಗಾಗಿ ಕನ್ನಡಕ್ಕಾಗಿ ಕನ್ನಡಿಗರ ಮನಸ್ಸು ಅರಳಬೇಕಿದೆ. ಕನ್ನಡಕ್ಕೆ ಧಕ್ಕೆ ಬಂದಾಗ ನಾವು ಕೆರಳಬೇಕಿದೆ ಅಂದಾಗ ಮಾತ್ರ ಕನ್ನಡದ ಅಸ್ಮಿತೆ ಉಳಿಯಲು ಸಾಧ್ಯ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಮ್ಮೇಳನಗಳು ಕನ್ನಡದ ಪ್ರಜ್ಞೆಯನ್ನು ವಿಸ್ತರಿಸುವ ಕೆಲಸ ಮಾಡಬೇಕು. ಕನ್ನಡವನ್ನು, ಬಳಸುವ, ಉಳಿಸುವ, ಬೆಳೆಸುವ ಆಂತರಿಕ ಪ್ರಜ್ಞೆ ಮೂಡಬೇಕು. ಕನ್ನಡಿಗರನ್ನು ಉಳಿಸಿದರೆ, ಜನ ಸಮುದಾಯ ಕನ್ನಡ ಭಾಷೆಯನ್ನು ಉಳಿಸುತ್ತಾರೆ. ಕನ್ನಡವನ್ನು ಓದುವ ಕಾರಣಕ್ಕಾಗಿ ಅವರು ನಿರುದ್ಯೋಗಿಗಳಾಗದಂತೆ, ನಮ್ಮನ್ನಾಳುವ ಮಂದಿ ನೋಡಿಕೊಳ್ಳಬೇಕು.
ಸಮ್ಮೇಳನಾಧ್ಯಕ್ಷರಾದ ಪ್ರೊ.ಸಂಪಿಗೆ ತೋಂಟಾದಾರ್ಯ ಮಾತನಾಡಿ, ಸಹೃದಯ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ, ಕೃಷಿ, ಕಲೆ, ರಂಗಭೂಮಿ ಮತ್ತು ವಾಸ್ತು ಶಿಲ್ಪಕ್ಕೆ ಶಿಕ್ಷಣ ಪ್ರಾಮುಖ್ಯತೆ ವಹಿಸುತ್ತವೆ. ಅಸತ್ಯದಿಂದ ಬೆಳಕಿನೆಡೆಗೆ ಸಾಗಬೇಕು. ಪರಸ್ಪರ ದ್ವೇಷ, ಅಸೂಯೆ, ಕ್ರೌರ್ಯ ಅಳಿಯ ಬೇಕು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಶಿಕ್ಷಣ ನೀಡಬೇಕು ಎಂದರು. ಶಾಸಕ ಎಂ.ಟಿ.ಕೃಷ್ಣಪ್ಪ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು, ‘ಕಲ್ಪವಿಜಯ’ ಸ್ಮರಣ ಸಂಚಿಕೆಯನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು ಸ್ವಾಗತಿಸಿದರು.ವಿವಿಧ ಹಂತದಲ್ಲಿ ಮೂರು ಗೋಷ್ಠಿಗಳು ಜರುಗಿದವು. ಪಟ್ಟಣದ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಐದಾರು ಲೇಖಕರ ಕೃತಿ ಬಿಡುಗಡೆ ಮಾಡಲಾಯಿತು. ಸಮ್ಮೇಳನಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಜಿಲ್ಲಾ ಕಸಾಪ ಕಾರ್ಯದರ್ಶಿ ಎ.ಎನ್.ಯೋಗೀಶ್ವರಪ್ಪ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೀಲಾ ಶಿವಪ್ಪನಾಯಕ, ಸದಸ್ಯರಾದ ಎನ್. ಆರ್..ಸುರೇಶ್, ಮಧು, ಚಿದಾನಂದ್, ಜಯ್ಯಮ್ಮ, ಆಶಾ ರಾಜಶೇಖರ್, ಕಸಾಪ ಗೌರವಾಧ್ಯಕ್ಷ ಬೋರೇಗೌಡ, ಕೆಂಪರಾಜು, ಪರಮೇಶ್ವರ ಸ್ವಾಮಿ, ದಿನೇಶ್, ನಂ.ರಾಜು ಮುನಿಯೂರು, ಮುಖಂಡರಾದ ದೊಡ್ಡಾಘಟ್ಟ ಚಂದ್ರೇಶ್, ಎನ್.ಆರ್.ಜಯರಾಮ್, ಸುಬ್ರಹ್ಮಣಿ ಶ್ರೀಕಂಠೇಗೌಡ ಸೇರಿದಂತೆ ಹಲವರು ಇದ್ದರು. ಬೆಳಗ್ಗೆ ತಹಶೀಲ್ದಾರ್ ಎನ್. ಎ. ಕುಂಞಅಹಮದ್ ರವರು ರಾಷ್ಟ್ರ ದ್ವಜಾರೋಹಣವನ್ನು, ನಾಡ ದ್ವಜಾರೋಹಣವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಎಚ್.ಸಿ.ಶೀಲಾ ಶಿವಪ್ಪ ನಾಯಕ ನೆರವೇರಿಸಿದರು.ಸಮ್ಮೇಳನಾಧ್ಯಕ್ಷರಾದ ಸಂಪಿಗೆ ತೋಂಟದಾರ್ಯರವರನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ವಿವಿಧ ಜಾನಪದ ಕಲಾ ಮೇಳಗಳ ನೃತ್ಯ, ಕುಣಿತ ಹಾಗು ಪೂರ್ಣಕುಂಭ ಸಹಿತ ವೇದಿಕೆಯವರೆವಿಗೂ ಭವ್ಯ ಮೆರವಣಿಗೆ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎನ್.ಸಿದ್ದಲಿಂಗಪ್ಪನವರು ಆಶಯ ನುಡಿ ನುಡಿಗಳನ್ನಾಡಿದರು. ದಸರಾ ಆರಂಭದ ದಿನವಾಗಿದ್ದರಿಂದ ಬೃಹದಾಕಾರದ ಆನೆಯ ಅಂಬಾರಿ ಯ ಮಾದರಿಯನ್ನೂ ಸಹ ಮೆರವಣಿಗೆ ಮಾಡಲಾಯಿತು. ಇದು ಆಕರ್ಷಣೀಯವಾಗಿತ್ತು.ಖಾಲಿ ಕುರ್ಚಿ – 6 ನೇ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕ್ರಮಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ನವರು ಮಾತನಾಡಿದ ವೇಳೆ ಖಾಲಿ ಕುರ್ಚಿಗಳು ಇರುವ ಬಗ್ಗೆ ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದರು.