ಚಿಕ್ಕಮಗಳೂರುದೇವಾಲಯದ ಒಳಗೆ ಹೋಗಿ ಪ್ರಾರ್ಥನೆ ಮಾಡಿ ಹೊರಗೆ ಬರುವಾಗ ಮನುಷ್ಯತ್ವದ ಮಾನವತಾವಾದಿಗಳಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಬಾಳೆಹಳ್ಳಿಯ ಶ್ರೀ ಸಿದ್ದೇಶ್ವರ, ಶ್ರೀ ಬಸವೇಶ್ವರ ದೇಗುಲಗಳ ನೂತನ ರಾಜಗೋಪುರ- ಕಳಸಾರೋಹಣ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇವಾಲಯದ ಒಳಗೆ ಹೋಗಿ ಪ್ರಾರ್ಥನೆ ಮಾಡಿ ಹೊರಗೆ ಬರುವಾಗ ಮನುಷ್ಯತ್ವದ ಮಾನವತಾವಾದಿಗಳಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಸಮೀಪದ ಬಾಳೆಹಳ್ಳಯಲ್ಲಿ ಗುರುವಾರ ನಡೆದ ಶ್ರೀ ಸಿದ್ದೇಶ್ವರ, ಶ್ರೀ ಬಸವೇಶ್ವರ ದೇವಾಲಯಗಳ ನೂತನ ರಾಜಗೋಪುರ ಹಾಗೂ ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.

ಹಿಂದೆ ಜನರಲ್ಲಿ ದೇವರು, ಸ್ವಾಮೀಜಿಗಳ ಬಗ್ಗೆ ಇದ್ದಂತಹ ಸದಾ ಭಕ್ತಿ ಮತ್ತೆ ಬರುತ್ತಿದೆ. ಪ್ರತಿಯೊಂದು ಊರಲ್ಲೂ ಒಂದಲ್ಲ ಒಂದು ದೇವಸ್ಥಾನ ಜೀರ್ಣೋದ್ಧಾರ ಹಾಗೂ ಉದ್ಘಾಟನೆ ಮಾಡುತ್ತಿರುವುದು ಸಂತೋಷದಾಯಕ. ನಮ್ಮ ದೇಶದಲ್ಲಿ ಇರುವಂತಹ ಧರ್ಮ, ಜಾತಿ, ದೇವರುಗಳು, ಬೇರೆ ಯಾವ ದೇಶದಲ್ಲಿ ಇಲ್ಲ. ದೇವನೊಬ್ಬ ನಾಮ ಹಲವು, ಶಿವ ಒಬ್ಬನೇ, ಆದರೆ ಹೆಸರು ಬೇರೆ ಬೇರೆ. ಬಾಳೆಹಳ್ಳಿ, ಕರ್ಕಿಪೇಟೆ, ಬೀಕನಹಳ್ಳಿ, ಐನಳ್ಳಿ, ಇಂದಾವರ ಹೇಗೆ ಸುತ್ತಮುತ್ತ ಇರುವ ನಮ್ಮ ಸಮಾಜ ಅತಿ ಹೆಚ್ಚು ಬಸವಣ್ಣನವರ ಅನುಯಾಯಿಗಳು ಹಾಗೂ ಬಸವಣ್ಣನವರೇ ಹೇಳುವಂತೆ ಕಾಯಕ ಯೋಗಿಗಳು ಇಲ್ಲಿ ಹೆಚ್ಚಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ತಾಲೂಕಿಗೆ ಸೀಮಿತವಾದ ಬಸವ ತತ್ವಪೀಠ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದೆ ಎಂದ ಶಾಸಕರು, ಈ ರೀತಿಯ ಹಬ್ಬ ಜಾತ್ರೆಗಳನ್ನು ಮಾಡುವ ಮೂಲಕ ಬಂಧುಗಳು ಒಟ್ಟಿಗೆ ಸೇರುವುದು ಈ ಒಂದು ಅವಕಾಶ ಎಂದರು.

ಬಸವ ತತ್ತ್ವ ಪೀಠದ ಅಧ್ಯಕ್ಷ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿ ಎಂದರೆ ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಕೊರಳಿನಲ್ಲಿ ರುದ್ರಾಕ್ಷಿ ಧರಿಸಿ ನಿತ್ಯ ಪೂಜೆ ಮಾಡುವುದು ಭಕ್ತಿಯೆಂದು ಭಾವಿಸುತ್ತೇವೆ. ಶರಣರ ದೃಷ್ಟಿಯಲ್ಲಿ ಭಕ್ತಿ ಎಂಬುದು ಆ ರೀತಿಯಲ್ಲಿ ಪ್ರದರ್ಶನದಲ್ಲಿ ಇರುವುದಿಲ್ಲ ಎಂದು ನುಡಿದರು.

ನಮ್ಮ ಹೃದಯದೊಳಗಿರುವ ಪ್ರೀತಿ ಲೌಕಿಕ ವಸ್ತುಗಳ ಕಡೆಗೆ ಹರಿದರೆ ಅದು ವ್ಯಾಮೋಹ ಎನ್ನುತ್ತೇವೆ. ಒಳಗಿನ ಪ್ರೀತಿಯ ಸೆಲೆ ದೇವರ ಕಡೆ ಹರಿದರೆ ಅದು ಭಕ್ತಿ ಎಂದು ಕರೆಸಿಕೊಳ್ಳುತ್ತದೆ. ಪ್ರೀತಿ ಎನ್ನುವುದು ನಮ್ಮ ಮನಸ್ಸಿನ ಒಳಗಿರುವ ಅಣೆ ಕಟ್ಟಿನ ನೀರಿದ್ದಂತೆ ನಮ್ಮೊಳಗಿನ ಭಕ್ತಿಯನ್ನು ದೇವರ ಕಡೆ ಹರಿಸಿದರೆ ಪ್ರೇಮವನ್ನು ದೇವರ ಕಡೆ ಹರಿಸಿದರೆ ಪ್ರೇಮವೇ ಭಕ್ತಿಯ ರೂಪ ಪಡೆದುಕೊಳ್ಳುತ್ತದೆ. ಪ್ರೇಮ ಇಲ್ಲದಿದ್ದರೆ ಭಕ್ತಿ ಶೂನ್ಯ ಎಂದರು.

ಲೌಕಿಕ ಬಯಕೆಗಳನ್ನು ಬಿಟ್ಟು ನಾವು ದೇವರಿಗೆ ಸಂಪೂರ್ಣ ಶರಣಾಗತರಾಗಬೇಕು. ಆಗ ನನಗೆ ಏನು ಬೇಕು ಎಂಬುದು ಅರ್ಥ ಮಾಡಿಕೊಂಡು ದೇವರು ಎಲ್ಲದನ್ನು ನಮಗೆ ಕೊಡುತ್ತಾನೆ. ದೇವರ ಮುಂದೆ ನಮ್ಮ ಬಯಕೆಗಳ ಪಟ್ಟಿ ಇಟ್ಟರೆ ಅವು ಗಳಲ್ಲಿ ಕೆಲವುಗಳನ್ನು ಈಡೇರಿಸಿ ಅದರ ಪಾಡಿಗೆ ಅದು ಇರುತ್ತದೆ. ದೇವರು ನಮ್ಮ ಬಳಿ ಸುಳಿಯಬೇಕಾದರೆ ಒಳಗಿರುವ ಮನುಷ್ಯ ಭಕ್ತನಾಗಿ ಹೊರಗೆ ಬರಬೇಕು. ದೇವರನ್ನ ಗರ್ಭಗುಡಿಯ ಒಳಗೆ ಅಷ್ಟೇ ಅಲ್ಲ, ತನ್ನ ಹೃದಯ ತುಂಬೆಲ್ಲ ದೇವರನ್ನು ತುಂಬಿದ್ದಾನೆಂಬ ಭಾವನೆಯಿಂದ ಹೊರಗೆ ಬಂದ ಅಂದರೆ ಆಗ ನಿಜವಾದ ಭಕ್ತ ಆಗಲು ಸಾಧ್ಯ ಎಂದು ಹೇಳಿದರು.

ಬಾರಂದೂರು ಪ್ರಕಾಶ್ ಉಪನ್ಯಾಸ ನೀಡಿದರು. ದಾನಿ ಚಿದಾನಂದ್, ಜಿಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಸಿಡಿಎ ಅಧ್ಯಕ್ಷ ಮಂಜೇಗೌಡ, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಸದಸ್ಯೆ ಮಂಜುಳಾ ಲಕ್ಷ್ಮಣ್ ಉಪಸ್ಥಿತರಿದ್ದರು.