ಸಮಾಜದಲ್ಲಿ ಮೌಢ್ಯ ತೊಲಗಿಸಿ ವೈಚಾರಿಕತೆ ಬಿತ್ತಬೇಕು

| Published : Jul 23 2024, 12:31 AM IST

ಸಮಾಜದಲ್ಲಿ ಮೌಢ್ಯ ತೊಲಗಿಸಿ ವೈಚಾರಿಕತೆ ಬಿತ್ತಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಬೇರೂರಿರುವ ಮೌಢ್ಯಗಳನ್ನು ಹೋಗಲಾಡಿಸಿ, ವೈಚಾರಿಕತೆ ಬಿತ್ತುವ ಕೆಲಸವನ್ನು ಬಿಸಿಯೂಟ ತಯಾರಕರು ಮಾಡಬೇಕಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ, ಹಿರಿಯ ವಿಚಾರವಾದಿ ಪ್ರೊ. ಎ.ಬಿ. ರಾಮಚಂದ್ರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಿಸಿಯೂಟ ತಯಾರಕರ ಜಿಲ್ಲಾ ಸಮಾವೇಶದಲ್ಲಿ ಪ್ರೊ. ಎ.ಬಿ. ರಾಮಚಂದ್ರಪ್ಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಸಮಾಜದಲ್ಲಿ ಬೇರೂರಿರುವ ಮೌಢ್ಯಗಳನ್ನು ಹೋಗಲಾಡಿಸಿ, ವೈಚಾರಿಕತೆ ಬಿತ್ತುವ ಕೆಲಸವನ್ನು ಬಿಸಿಯೂಟ ತಯಾರಕರು ಮಾಡಬೇಕಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ, ಹಿರಿಯ ವಿಚಾರವಾದಿ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ಹರಿಹರ ನಗರದ ಹೊರವಲಯದ ಮೈತ್ರಿವವನದ ಪ್ರೊ. ಬಿ.ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಶನಿವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡುವ ಅಕ್ಷರ ದಾಸೋಹದ ಬಿಸಿಯೂಟ ತಯಾರಕರು ಸಮಾಜದಲ್ಲಿ ವೈಚಾರಿಕರೆ ಬಿತ್ತುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದರು.

ಅಪಮಾನ, ಅವಮಾನ, ನೋವು, ಸಂಕಟವನ್ನು ಅನುಭವಿಸುವ ನೀವುಗಳು, ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ, ರೀತಿ, ಧೋರಣೆಗಳು ಸರ್ವೇ ಸಾಮಾನ್ಯ ಎಂಬುದನ್ನು ಅರಿಯಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಉನ್ನತ ಸ್ಥಾನಕ್ಕೇರುವಂತೆ ಮಾಡುವ ಮೂಲಕ ನೀವು ಅನುಭವಿಸಿದ ನೋವು, ಅವಮಾನ, ಅಪಮಾನಕ್ಕೆ ಉತ್ತರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಹಿಂದಿನಿಂದಲೂ ಕಾಮ್ರೆಡ್ ಪಂಪಾಪತಿ, ಎಚ್.ಕೆ.ರಾಮಚಂದ್ರಪ್ಪ, ಹನುಮಂತಪ್ಪ ಸೇರಿದಂತೆ ಅನೇಕ ನಾಯಕರು ದುಡಿಯುವ ಕಾರ್ಮಿಕರು, ಮಹಿಳೆಯರ ಹಲವಾರು ದಶಕಗಳ ಕಾಲ ಹೋರಾಟ ನಡೆಸಿಕೊಂಡು ಬಂದಿದ್ದರು. ಅದೇ ಪರಂಪರೆಯನ್ನು ಇಂದು ಕಾರ್ಮಿಕ ಮುಖಂಡರಾದ ಆನಂದರಾಜ, ಆವರಗೆರೆ ಎಚ್.ಜಿ. ಉಮೇಶ, ಆವರಗೆರೆ ಚಂದ್ರು, ಕೆ.ರಾಘವೇಂದ್ರ ನಾಯರಿ ಅವರಂಥವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.

ಬಿಸಿಯೂಟ ತಯಾರಕರು ನಿಜಕ್ಕೂ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲಾ ಸಮ್ಮೇಳನಕ್ಕೆ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಸಂಪೂರ್ಣ ಸಹಕಾರ, ನೆರವು ನೀಡುತ್ತಿದೆ. ದುಡಿಯುವ ಮಹಿಳೆಯರ ಹಿತಕಾಯಬೇಕಾದ್ದು ಆಳುವ ಸರ್ಕಾರ ಹಾಗೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಂಕಷ್ಟದ ಮಧ್ಯೆಯೂ ಮಧ್ಯಾಹ್ನದ ಬಿಸಿಯೂಟ ತಯಾರಕ ಮಹಿಳೆಯರು ನಿಸ್ವಾರ್ಥದಿಂದ ತಮ್ಮ ಸೇವೆ ಸಲ್ಲಿಸುತ್ತಿದ್ದು, ಇಂಥವರ ಬೇಡಿಕೆಗೆ ಸರ್ಕಾರದ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1.20 ಲಕ್ಷ ಜನ ಬಿಸಿಯೂಟ ತಯಾರಕರು, ಸಹಾಯಕಿಯರಿದ್ದಾರೆ. ಅತಿ ಕಡಿಮೆ ಗೌರವಧನಕ್ಕೆ ನಿಸ್ವಾರ್ಥ ಸೇವೆ ನೀಡುತ್ತಿರುವ ಬಿಸಿಯೂಟ ತಯಾರಕರನ್ನು ಸರ್ಕಾರಿ ನೌಕರರೆಂದು ಸರ್ಕಾರ ಪರಿಗಣಿಸಬೇಕು. ಕನಿಷ್ಠ ವೇತನ-1981ಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಫೆಡರೇಶನ್‌ ಜಿಲ್ಲಾಧ್ಯಕ್ಷ ಅವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್‌.ಜಿ.ಉಮೇಶ ಆವರಗೆರೆ, ಎಚ್‌.ಕೆ.ಕೊಟ್ರಪ್ಪ, ರಾಜನಹಳ್ಳಿ ವಿಶ್ವಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ಮಂಜುನಾಥ, ಭಾರತೀಯ ಜನಕಲಾ ಸಮಿತಿಯ ಐರಣಿ ಚಂದ್ರು, ಕೆ.ಬಾನಪ್ಪ, ಟಿ.ಎಚ್. ನಾಗರಾಜ, ಎ.ತಿಪ್ಪೇಶಿ , ಸರೋಜ, ಮಳಲ್ಕೆರೆ ಜಯಮ್ಮ, ಜ್ಯೋತಿ ಲಕ್ಷ್ಮಿ, ಪದ್ಮಾ ದಾವಣಗೆರೆ, ಸಿದ್ದನಮಠ ಗಂಗಾದೇವಿ, ಹರಿಹರ ಮಂಗಳ, ಚನ್ನಮ್ಮ ಜಗಳೂರು, ಹೊನ್ನಾಳಿ ಸರೋಜಮ್ಮ, ರುದ್ರಮ್ಮ ಬೆಳಲಗೆರೆ, ಭಾರತಿ ಜಗಳೂರು, ಗುಳ್ಳೇಹಳ್ಳಿ ಸುಮ ಮುಂತಾದವರು ಇದ್ದರು.

ಮೊಹಮ್ಮದ್ ಭಾಷಾ, ಕೆ.ಬಾನಪ್ಪ, ಮಳಲ್ಕೆರೆ ಜಯಮ್ಮ ಕಾರ್ಯಕ್ರಮ ನಡೆಸಿಕೊಟ್ಟರು. ಐರಣಿ ಚಂದ್ರು ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಕಾಮ್ರೆಡ್ ಶೇಖರಪ್ಪ, ಸುರೇಶ, ಪಂಪಾಪತಿ ಇತರರು ಪಾಲ್ಗೊಂಡಿದ್ದರು.

- - - -22ಕೆಡಿವಿಜಿ1, 2:

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಸಮಾವೇಶವನ್ನು ಪ್ರೊ. ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು.