ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮರೆಯಬಾರದು

| Published : Apr 01 2024, 12:47 AM IST

ಸಾರಾಂಶ

ಸಂಸ್ಕೃತಿ ನಿಂತ ನೀರಲ್ಲ, ಅದು ಹರಿಯುವ ನೀರು. ಆದರೆ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ನಾವು ಎಂದಿಗೂ ಮರೆಯಬಾರದು ಎಂದು ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಸ್ಕೃತಿ ನಿಂತ ನೀರಲ್ಲ, ಅದು ಹರಿಯುವ ನೀರು. ಆದರೆ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ನಾವು ಎಂದಿಗೂ ಮರೆಯಬಾರದು ಎಂದು ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ ಹೇಳಿದರು.

ಆವಿಷ್ಕಾರ, ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಮ್‌ಎಸ್‌ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ವಿಜಯಪುರ 13ನೇ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಒಳಗೆ ಹಾಗೂ ಹೊರಗೆ ಅಕ್ಷರಶಃ ನಾವು ಬೇಯುವ ಸ್ಥಿತಿಗೆ ಬಂದು ತಲುಪಿದ್ದೇವೆ. ಅದು ಹವಾಮಾನ ವೈಪರೀತ್ಯ, ಧಗೆ ಆಗಿರಬಹುದು. ಜೊತೆಗೆ ಲೋಕಸಭಾ ಚುನಾವಣೆಯ ರಾಜಕೀಯ ದೂರ್ತತೆಯ ಕಾವು, ಉರಿ ಇವು ಕೂಡ ಆಗಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ನಾವು ಮಾನವೀಯವಾದ ಶಾಂತಿ, ಸೌಹಾರ್ದತೆಯ ವಾತಾವರಣ ಕಟ್ಟಲು ಆಗುತ್ತಿಲ್ಲ ಎನ್ನುವ ಪ್ರಜ್ಞಾವಂತ ಒಳಮನಸಿನ ತಳಮಳ ಶುರುವಾಗಿದೆ ಎಂದರು.

ಈ ಸಾಂಸ್ಕೃತಿಕ ಜನೋತ್ಸವವನ್ನು ಹಲವು ಜಾತಿ ಧರ್ಮಗಳ ಸೌಹಾರ್ದತೆ ಪ್ರತೀಕವಾದ ವಿಜಯಪುರ ನೆಲದಲ್ಲಿ ಮತ್ತೊಮ್ಮೆ ಆಚರಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದ ಎಂದರು. ನಿಜವಾದ ಸಾಂಸ್ಕೃತಿಕ ಮಟ್ಟವನ್ನ ನಾವು ಜಾಗೃತಗೊಳ್ಳಲು ಸಂದರ್ಭ ಕೂಡಿ ಬಂದಿದೆ. ಇವತ್ತು ವಿಷಮ ಕಾಲಗಟ್ಟಕ್ಕೆ ನಾವು ಬಂದು ತಲುಪಿದ್ದೇವೆ. ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮದು ಬಹುಭಾಷೆ, ಬಹು ಸಂಸ್ಕ್ರತಿ, ಮತ್ತು ಬಹು ಆಚರಣೆಯನ್ನೊಳಗೊಂಡ ಬಹು ದೊಡ್ಡ ದೇಶ. ಇಲ್ಲಿ ಅನೇಕ ಜಾತಿ, ಧರ್ಮ, ಜನಾಂಗವನ್ನೊಳಗೊಂಡ ಜನರು ತಲೆ ತಲಾಂತರದಿಂದ ಅವರವರ ದೇವರು, ಧರ್ಮ, ಸಂಪ್ರದಾಯ ಆಚರಣೆಗಳನ್ನ ನಂಬಿ ಬದುಕುತ್ತಿದ್ದಾರೆ. ಅದರಲ್ಲಿ ಅವೈಜ್ಞಾನಿಕ, ಅವೈಚಾರಿಕವಾಗಿರುವ ಮತ್ತು ಅಸಮಾನತೆಯನ್ನು ಆಧರಿಸಿದ್ದು ಕೂಡ ಇರಬಹುದು. ನಂತರ ಕಾಲಾಂತರದಲ್ಲಿ ಅದೆಲ್ಲ ಕೂಡ ನಿರ್ಮೂಲನೆ ಮಾಡುತ್ತಾ ಬಂದಿದ್ದೇವೆ ಎಂದರು.

ಕಥೆಗಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ಯಾವ ದೇಶ ಸೌಹಾರ್ದತೆಯಿಂದ ಬದುಕಲು ಸಾದ್ಯವಿಲ್ಲವೋ ಆ ದೇಶ ಎಷ್ಟೇ ಮುಂದುವರೆದಿದ್ದೇನೆ ಅಂತ ಹೇಳಿದರೂ, ಆರ್ಥಿಕವಾಗಿ ಮುಂದುವರಿದಿರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ನಮ್ಮ ಅಂಕಿ ಸಂಖ್ಯೆಗಳು ಏನಾದರು ಹೇಳಬಹುದು. ನಮಗೆ ಗೊತ್ತಿದೆ ವಾಸ್ತವವಾಗಿ ನಾವು ಹೇಳಿಕೊಳ್ಳುವಷ್ಟು ಆರ್ಥಿಕವಾಗಿ ಮುಂದುವರಿದಿಲ್ಲ. ನಾವು ಒಪ್ಪಿಕೊಳ್ಳಲೇಬೇಕು. ಈ ಆರ್ಥಿಕ ಪ್ರಗತಿಯ ಕುಂಠಿತಕ್ಕೆ ಕಾರಣವಾಗಿರುವುದರಲ್ಲಿ ಮುಖ್ಯವಾಗಿರುವುದು ಒಂದು ಸಮುದಾಯವೇ ಒಂದು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಾಗಿದೆ. ಎಲ್ಲರೂ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳದೆ ಹೋದರೆ, ಸಮಾಜ ಎಷ್ಟು ವಿಘಟನೆ ಆಗಿ ಹೋಗುತ್ತದೆ. ನಾಶ ಆಗುತ್ತದೆ ಅನ್ನುವುದನ್ನು ನಾವು ಇಲ್ಲಿ ಕಲ್ಪಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ರಂಗಮಂದಿರದ ಆವರಣದಲ್ಲಿಯ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಆವಿಷ್ಕಾರದ ಮುಖಂಡ ಅಶೋಕ ದೇಸಾಯಿ ಮಾತನಾಡಿದರು. ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಾಂಸ್ಕೃತಿಕ ಜನೋತ್ಸವದ ಅಂಗವಾಗಿ ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ಸಮೂಹ ಗಾಯನ, ಗೀತಾಂಜಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ, ಕಲಾವಿದರಾದ ಸಿದ್ದಣ್ಣ ಬಿಜ್ಜರಗಿ ಅವರಿಂದ ತತ್ವ ಪದಗಳು, ವಿದೂಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಡಾನ್ಸ್ ಕ್ಲಾಸ್‌ ನಿಂದ ನೃತ್ಯ ರೂಪಕ ಹಾಗೂ ಕಾವ್ಯ-ಕುಂಚ-ನೃತ್ಯ ಎಂಬ ವಿಶಿಷ್ಠ ಕಾರ್ಯಕ್ರಮದಲ್ಲಿ ಕರಾಅಮವಿ ವಿಜಯಪುರದ ಸಂಗೀತ ಉಪನ್ಯಾಸಕ ಹರೀಶ ಹೆಗಡೆ ಮತ್ತು ತಂಡದವರಿಂದ ಕಾವ್ಯ, ಮಹಾಲ(ಐನಾಪುರ)ನ ಚಿತ್ರ ಕಲಾವಿದ ಪರಶುರಾಮ ಇಂಚಗೇರಿ ಹಾಗೂ ನಂದ್ಯಾಳ ಗ್ರಾಮದ ಚಿತ್ರ ಕಲಾವಿದ ಮಲ್ಲು ಹಡಪದ ಅವರಿಂದ ಕುಂಚ ಹಾಗೂ ಬಳ್ಳಾರಿಯ ಜಾನಪದ ಕಲಾವಿದ ತಿರುಮಲ ಡಿ.ಜಿ ಮತ್ತು ವಿಜಯಪುರದ ಸ್ಮಿತಾ ರೂಡಗಿ ಅವರಿಂದ ನೃತ್ಯ ಕಾಯಕ್ರಮಗಳು ಜನರ ಮನ ಸೆಳೆದವು.

ಚಾಮರಾಜನಗರದ ಶಾಂತಲಾ ಕಲಾವಿದರು ಪ್ರಸ್ತುತ ಪಡಿಸಿದ ಹೆನ್ರಿಕ್ ಇಬ್ಸೆನ್ ಅವರ ನಾಟಕವನ್ನು ಆದರಿಸಿ ಎಸ್.ಸುರೇಂದ್ರನಾಥ ಅವರು ರಚಿಸಿ, ನಿರ್ದೇಶಿಸಿರುವ ಜನ ಶತ್ರು ಎಂಬ ನಾಟಕ ಪ್ರಸಕ್ತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.

--

ಬಾಕ್ಸ್‌

ಪ್ರಶ್ನಿಸುವ ಸಂಸ್ಕೃತಿಯ ದಮನ: ಪ್ರಮೋದ

ಎಐಡಿಎಸ್‌ಒನ ಅಖಿಲ ಭಾರತ ಉಪಾಧ್ಯಕ್ಷ ಡಾ.ಎನ್.ಪ್ರಮೋದ ಪ್ರಶ್ನೆ ಮಾಡುವ ಸಂಸ್ಕೃತಿಯನ್ನೇ ಬಲವಂತವಾಗಿ ಹತ್ತಿಕ್ಕುವ ವಾತಾವರಣ ಸೃಷ್ಟಿಯಾಗುತ್ತಿದೆ. ಪ್ರಶ್ನೆ ಮಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಟ್ರೋಲ್ ಸಂಸ್ಕೃತಿ ಮೂಲಕ ಪ್ರಶ್ನೆ ಮಾಡುವವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಧಾರ್ಮಿಕ ಮೌಢ್ಯತೆ ಪ್ರಗತಿಗೆ ದೊಡ್ಡ ಅಡಚಣೆ, ಹಳೆಯದನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳಬೇಡಿ ಎಂದು ಭಗತ್ ಸಿಂಗ್ ಹೇಳಿದ್ದರು. ಎಲ್ಲವನ್ನೂ ಹೇರಿಯೂ ಸಂಸ್ಕೃತಿ ಬೆಳೆಯುತ್ತಿದೆ, ಆಹಾರ, ಬಟ್ಟೆ, ಆಚಾರ, ವಿಚಾರಗಳ ಕುರಿತು ಹೇರಿಕೆ ಮಾಡಲಾಗುತ್ತಿದೆ. ಇದನ್ನೇ ಭಗತ್ ಸಿಂಗ್ ಧಿಕ್ಕರಿಸಿದ್ದರು. ದೇವರು, ಧರ್ಮ ವೈಯಕ್ತಿಕವಾಗಿರಬೇಕು, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಸಂಸ್ಕೃತಿ ಬರಬಾರದು. ವೈಜ್ಞಾನಿಕ ಸಂಸ್ಕೃತಿ ಬೆಳೆದು ಬರಬೇಕು. ಯಾರೋ ಹೇಳಿದರು ಎಂಬ ಕಾರಣಕ್ಕೆ ಒಪ್ಪಬಾರದು ಎಲ್ಲವನ್ನು ವಿಮರ್ಶೆ ಮಾಡಿ ಅಳವಡಿಸಿಕೊಳ್ಳಬೇಕು. ಸಾಹಿತಿ ಶರತಚಂದ್ರ ಚಟರ್ಜಿ ಅವರು ಅನೇಕ ವೈಜ್ಞಾನಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು. ಅವರ ಸಾಹಿತ್ಯವನ್ನು ಬ್ರಿಟಿಷರು ಕೂಡ ನಿಷೇಧಿಸಿದ್ದರು. ಮಹಿಳಾ ದೌರ್ಜನ್ಯದ ಕುರಿತು ಅವರು ಸಾಕಷ್ಟು ಗ್ರಂಥ ಬರೆದಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.