ಒಳಪಂಗಡ ಬದಿಗೊತ್ತಿ ನಾವು ಒಂದಾಗಬೇಕು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

| Published : Jan 18 2025, 12:48 AM IST / Updated: Jan 18 2025, 12:12 PM IST

ಒಳಪಂಗಡ ಬದಿಗೊತ್ತಿ ನಾವು ಒಂದಾಗಬೇಕು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಒಳಪಂಗಡಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದಾಗಬೇಕು. ಇದರಿಂದಾಗಿ ಸಮಾಜ ಪ್ರಬಲವಾಗುವುದರ ಜೊತೆಗೆ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

 ಮೈಸೂರು : ಒಳಪಂಗಡಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದಾಗಬೇಕು. ಇದರಿಂದಾಗಿ ಸಮಾಜ ಪ್ರಬಲವಾಗುವುದರ ಜೊತೆಗೆ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ ವೀರಶೈವ- ಲಿಂಗಾಯತ ಬ್ಯುಸಿನೆಸ್‌ ಮೀಟ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜ ಒಡೆಯಬೇಕು ಎಂದು ಹೊರಟಾಗ ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ಅದಕ್ಕೆ ತೀವ್ರ ವಿರೋಧವಾಗಿ ನಿಂತು ಎಚ್ಚರಿಕೆ ಸಂದೇಶ ನೀಡಿದರು. ರಾಜಕೀಯ ಕಾರಣದಿಂದಾಗಿ ಜಾತಿಗಣತಿ ಪಗಟೆಯಾಟವಾಡಲು ಹೊರಟಿರುವಾಗ ಸಮಾಜದ ಪರವಾಗಿ ನಿಂತು ಮಾತನಾಡಿರುವುದು ಸಂತೋಷ. ನಾವು ಮತ್ತು ನೀವು ಎಲ್ಲರೂಸೇರಿಕೊಂಡು ಸಮಾಜವನ್ನು ಒಂದಾಗಿ ಕಟ್ಟೋಣ ಎಂದರು.

ಇಡೀ ವಿಶ್ವಕ್ಕೆ ಸ್ವಾಲಂಬನೆಯ ಸಂದೇಶವನ್ನು ಬಸವಣ್ಣ ನೀಡಿದರು. ಕಾಯಕದಲ್ಲಿ ಕೈಲಾಸ ಕಾಣಬಹುದೆಂಬ ತತ್ವ ಸಾರಿದ ಮತ್ತು ಪ್ರತಿಪಾದಿಸಿದ ವಿಚಾರಗಳಿಂದ ಬಸವಣ್ಣ ವಿಶ್ವಗುರು ಆಗಿದ್ದಾರೆ. ವೀರಶೈವ ಲಿಂಗಾಯತ ಬೇಡುವ ಸಮಾಜ ಅಲ್ಲ, ನೀಡುವ ಸಮಾಜ. ಸಮಯೋಚಿತ ಮತ್ತು ಅರ್ಥಪೂರ್ಣ ಗ್ಲೋಬಲ್ ಬಿಸಿನೆಸ್ ಕಾನ್ ನಲ್ಲಿ ಒಳಪಂಗಡ ಮರೆತು ಒಟ್ಟಾಗಿ ಬಳೆಯಬೇಕು ಎಂದರು.

ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ತಡೆಯಲು ಸಾಧ್ಯವಿಲ್ಲ. ರಾಜಕೀಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧೆ ಇರುತ್ತದೆ. ಉದ್ಯಮಿ ಮತ್ತು ವೃತ್ತಿಪರರನ್ನು ಒಂದುಗೂಡಿಸಿ ಒಂದೇ ವೇದಿಕೆಯಲ್ಲಿ ತರುವ ಕೆಲಸ ಮಾಡಲಾಗುತ್ತಿದೆ. ಆರೋಗ್ಯ ಮೇಳ ಆಯೋಜಿಸಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದರು.

ನಾನು ರಾಜಕೀಯಕ್ಕೆ ಬರುವ ಮುನ್ನ ಒಮ್ಮೆ ಉದ್ಯಮಿ ಸಿದ್ಧಾರ್ಥ ಅವರು ನಮ್ಮ ಮನೆಗೆ ಬಂದಿದ್ದರು. ಆ ವೇಳೆ ನಮ್ಮ ತಂದೆ ನನ್ನ ಮಗನಿಗೆ ಉದ್ಯಮ ನಡೆಸಲು ಸಲಹೆ ನೀಡುವಂತೆ ಹೇಳಿದಾಗ, ಸಿದ್ಧಾರ್ಥ ಅವರು ಸಮಯ ಮತ್ತು ಸಂದರ್ಭ ನೋಡಿ ವ್ಯವಹಾರಕ್ಕೆ ಕೈ ಹಾಕಬೇಕು. ನೆಮ್ಮದಿಯಿಂದ ಮನೆಯಲ್ಲಿ ಮಲಗುವಂತೆ ವ್ಯವಹಾರ ನಡೆಸಬೇಕು. ಇತಿಮಿತಿಯಲ್ಲಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದ್ದಾಗಿ ಅವರು ಸ್ಮರಿಸಿದರು.

ರಾಷ್ಟ್ರೀಯ ಹಸಿರು ಮಂಡಳಿ ಅಧ್ಯಕ್ಷ ಸುಭಾಷ್ ಬಿ. ಅಡಿ ಮಾತನಾಡಿ, ಬಿಸಿನೆಸ್ ಅಂದರೆ ಮತ್ತೊಬ್ಬರನ್ನು ಹಿಂದಿಕ್ಕಿ ಮುಂದೆ ಬರುವ ಕಾಲದಲ್ಲಿ ನನ್ನೊಂದಿಗೆ ಇತರರು ಬೆಳೆಯಬೇಕು ಎನ್ನುವ ಆಸೆ ಇಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಬಸವಣ್ಣ ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾವಲಂಬನೆ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಯತ್ನಿಸಿದರು. ಸಂವಿಧಾನದ ಮೂಲ ಅಂಶಗಳನ್ನು ಬಸವಣ್ಣ ಹನ್ನೆರಡನೇ ಶತಮಾನದಲ್ಲಿ ಜಾರಿಗೆ ತಂದಿದ್ದರು. ಜಾತಿ ತೆಗೆದು ಜಾತಿರಹಿತ ಸಮಾಜ ಮಾಡುವ ಯತ್ನ ಇಂದಿಗೂ ಸಾಧ್ಯವಾಗಿಲ್ಲ. ಆರ್ಥಿಕ ಸ್ವಾತಂತ್ರ್ಯ ಬರಬೇಕಾದರೆ ಶೈಕ್ಷಣಿಕ ಸ್ವಾತಂತ್ರ್ಯ ದೊರೆಯಬೇಕು ಎಂದರು.

ಸಚಿವ ಎಂ.ಬಿ.ಪಾಟೀಲ್‌ ಅವರು, ನಾನು ಮುಖ್ಯ ಅಲ್ಲ, ಸಮಾಜ ಮುಖ್ಯ. ಲಿಂಗಾಯತ ಸಮಾಜದಲ್ಲಿನ ಗೊಂದಲ ಸರಿಪಡಿಸುವ ಮಾತನ್ನು ಸರ್ಕಾರದಲ್ಲಿ ಇದ್ದುಕೊಂಡು ಹೇಳಿದ್ದಾರೆ. ಲಿಂಗಾಯತ ಮಠಗಳು ಇಲ್ಲದಿದ್ದರೆ ಶಿಕ್ಷಣದಿಂದ ಲಕ್ಷಾಂತರ ಜನರು ವಂಚಿತರಾಗುತ್ತಿದ್ದಾಗಿ ಅವರು ಹೇಳಿದರು.

ಎಲ್ಲರೂ ಒಟ್ಟಾಗಿ ವೀರಶೈವ ಲಿಂಗಾಯತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮುಂದಾಗಬೇಕು ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ.ಎಸ್. ನವೀನ್‌ ಮಾತನಾಡಿ, ಆರಂಭದಲ್ಲಿ ಸಾಕಷ್ಟು ಸಮಸ್ಯೆ ಆಯಿತು. ಆದರೆ ಈಗ ಸಣ್ಣ ಗೊಂದಲವೂ ಇಲ್ಲದಂತೆ ಹದಿಮೂರು ವರ್ಷಗಳನ್ನು ಪೂರೈಸಿ 14ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷವೂ ಅಧ್ಯಕ್ಷರ ಬದಲಾವಣೆ ಮಾಡಿ ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ಬಸವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಬಂದವರು. ಸಮಾಜದ ವ್ಯಕ್ತಿ ಗಟ್ಟಿಯಾಗಿ ನಿಂತರೆ ಮುಂದೆ ಅಲದ ಮರದಂತೆ ಬೆಳೆದು ಇತರರಿಗೂ ನೆರಳಾಗುತ್ತಾರೆ. ಇದೊಂದು ಶಕ್ತಿ ಪ್ರದರ್ಶನವಲ್ಲ. ಸಾಧನೆ ಮಾಡಿದವರಿಂದ ಬೇರೆಯವರಿಗೆ ಮಾರ್ಗದರ್ಶನ, ಸ್ಫೂರ್ತಿ ಸಿಗುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶ ಎಂದರು.

ದೇಶಕ್ಕೆ ಮತ್ತು ಸಮಾಜಕ್ಕೆ ಆಸ್ತಿಯಾಗಿ ಮಾಡಬೇಕು. ದುಬೈನಲ್ಲಿ ಅಂತಾರಾಷ್ಟ್ರೀಯ ಕಾನ್ ಕ್ಲೇವ್ ಮಾಡಲು ನಿರ್ಧರಿಸಿದ್ದು, ಅದಕ್ಕೆ ಬೇಕಾದ ಸಿದ್ಧತೆ ಮಾಡಲಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮುಂಬೈ ಭಾಗದಲ್ಲಿ ನಡೆಸಿ ಸಂಘಟಿಸಬೇಕಿದೆ. ರಾಜಕೀಯ, ಒಳಪಂಗಡ ಬಿಟ್ಟು ಎಲ್ಲರೂ ಒಂದಾಗಿ ಸಂಘಟಿಸಬೇಕು. ನಮ್ಮ ಪಾಲಿಗೆ ಶಿಕ್ಷಣ, ಸಮಾಜದ ಸಂಘಟನೆ ಮಾಡಿದ ಶಾಮನೂರು ಶಿವಶಂಕರಪ್ಪ ಒಂದು ಕಣ್ಣಾದರೆ ಮತ್ತು ರಾಜಕೀಯದಲ್ಲಿ ಯಡಿಯೂರಪ್ಪ ಮತ್ತೊಂದು ಕಣ್ಣು. ಅವರಿಬ್ಬರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

50 ಶಾಸಕರನ್ನು ಗೆಲ್ಲಿಸುವ ಫಂಡ್‌ ಇದೆ:

ಸ್ಟಾರ್ಟ್‌ ಅಪ್ಮಾಡುವವರಿಗೆ ಹಣಕಾಸಿನ ನೆರವು ನೀಡಲು ಉದ್ದೇಶಿಸಲಾಗಿದೆ. ಸುಮಾರು ಒಂದು ಸಾವಿರ ಸ್ಟಾರ್ಟ್ಅಪ್‌ಗಳಿಗೆ ನೆರವಾಗಬಹುದು ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿ.ವೈ. ವಿಜಯೇಂದ್ರ ಅವರು ರಾಜಕೀಯಕ್ಕೂ ಫಂಡ್ನೀಡುತ್ತೀರಾ ಎಂದು ತಮಾಷೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನವೀನ್, 50 ಶಾಸಕರನ್ನು ಗೆಲ್ಲಿಸಲು ಬೇಕಾದ ಫಂಡ್ಇದೆ ಎಂದರು.

ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್, ಕಾನ್ಕ್ಲೇವ್‌ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಉಪಾಧ್ಯಕ್ಷ ಕೆ.ಎಚ್. ಕಿರಣ್, ಫೋರಂ ಮೈಸೂರು ಚಾಪ್ಟರ್‌ ಅಧ್ಯಕ್ಷ ಕೆ.ಎಸ್.ಮಹದೇವಪ್ರಸಾದ್, ಚಾಮರಾಜನಗರ ಉಪಾಧ್ಯಕ್ಷ ಎಂ. ಮಹೇಶ್, ಜಂಟಿ ಕಾರ್ಯದರ್ಶಿ ತೀರ್ಥಾ ಎಸ್. ಸ್ವಾಮಿ ಇದ್ದರು.