ಭಕ್ತಿ ಬರಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು ಎಂಬುದು ಹಿಂದೂ ಧರ್ಮದ ಸಾರಾಂಶ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಭಕ್ತಿ ಬರಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು ಎಂಬುದು ಹಿಂದೂ ಧರ್ಮದ ಸಾರಾಂಶ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ಪಟ್ಟಣದ ಮಡಿವಾಳರ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮಹೇಶ್ವರಮ್ಮ ದೇವಿಯ ನೂತನ ದೇವಾಲಯ ಲೋಕಾರ್ಪಣೆಯ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ನಂಬಿಕೆಯಿಂದ ದೇವರನ್ನು ಕಾಣಬಹುದು. ಇಂದಿಗೂ ದೇವರನ್ನು ನೋಡಿಲ್ಲ, ಕೋಟ್ಯಾಂತರ ಜನರು ದೇವರ ಮೇಲೆ ನಂಬಿಕೆ ಇಟ್ಟುಕೊಂಡು ದೇಗುಲಗಳನ್ನು ಕಟ್ಟುತ್ತಾರೆ. ನಮ್ಮ ನಡೆ, ನುಡಿ ಸರಿಯಾಗಿರಬೇಕು. ನಾವು ಮಾಡುವ ಕೆಲಸದಲ್ಲೇ ದೇವರನ್ನು ಕಾಣಬೇಕು. ಸಹಾಯ ಮಾಡಿದವರನ್ನು ದೇವರೆಂದು ಪೂಜಿಸುತ್ತಾರೆ, ಸಹಾಯ ಮಾಡುವುದರಲ್ಲೂ ಸಹ ದೇವರನ್ನು ಕಾಣಬಹುದು ಎಂದು ತಿಳಿಸಿದರು.

ಮಧುಗಿರಿ, ಪಾವಗಡ ತಾಲೂಕಿನ ಪೊಲೀಸ್ ಇಲಾಖೆಗೆ ವಸತಿಗೃಹಗಳನ್ನು ಕೊಟ್ಟಿದ್ದೇನೆ. ಗುಬ್ಬಿ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಹಾಗೂ ಚೇಳೂರು ವಸತಿ ಗೃಹಗಳ ಬಗ್ಗೆ ಪ್ರಸ್ತಾವನೆ ಕೊಟ್ಟರೆ ಮಂಜೂರು ಮಾಡಿಸುತ್ತೇನೆ ಎಂದು ತಿಳಿಸಿದರು.

ಕೆಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ನಾನು ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ದೇವರನ್ನು ನಂಬುತ್ತಿರಲಿಲ್ಲ, ನಾನು ರಾಜಕೀಯಕ್ಕೆ ಬಂದ ಮೇಲೆ ದೇವಾಲಯಗಳಿಗೆ ಹೆಚ್ಚು ಅನುದಾನ ನೀಡಿದ್ದೇನೆ. ಉತ್ತಮ ಮಾರ್ಗದಲ್ಲಿ ಉತ್ತಮ ಕೆಲಸ ಮಾಡಿದಾಗಲೇ ನಮಗೆ ಒಳ್ಳೆಯದಾಗುತ್ತದೆ. ರಾಜಕೀಯಕ್ಕೆ ಬಂದ ಮೇಲೆ ಬಡವರ ಪರ ಕೆಲಸ- ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಹುಟ್ಟು- ಸಾವು ನಿಶ್ಚಿತ, ನಾವು ಇದ್ದಾಗ ಉತ್ತಮ ಕೆಲಸಗಳನ್ನು ಮಾಡಬೇಕಾಗುತ್ತದೆ. ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜನ ಸೇವೆಗೆ ಉತ್ಸುಕರಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು. ಸ್ಥಳಾವಕಾಶವಿದ್ದರೆ ಸಮುದಾಯ ಭವನದ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆ ಮಾಡಿಸುತ್ತೇನೆ ಎಂದರು.

ಚಾಲುಕ್ಯ ಆಸ್ಪತ್ರೆಯ ಮುಖ್ಯಸ್ಥ ಡಾ.ನಾಗಭೂಷಣ್ ಮಾತನಾಡಿ, ಗುಬ್ಬಿ ನಗರದಲ್ಲಿ ಹೈಟೆಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದಕ್ಕೆ ತಾಲೂಕಿನ ಹೆಮ್ಮೆಯ ಸಾಲುಮರದ ತಿಮ್ಮಕ್ಕನ ಹೆಸರಿಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಭಕ್ತಾದಿಗಳ ಸಹಕಾರದಿಂದ ಮಹೇಶ್ವರಮ್ಮ ದೇವಾಲಯದ ಕಳಸ ಗೋಪುರ ನಿರ್ಮಾಣ ಮಾಡಿ, ಲೋಕಾರ್ಪಣೆ ಮಾಡಿದ್ದು ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲಕ್ಕಾಗಿ ಹಾಗೂ ದಾಸೋಹ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಮುದಾಯ ಭವನದ ಅವಶ್ಯಕತೆ ಇರುವುದರಿಂದ ಸಚಿವರು ಹಾಗೂ ಶಾಸಕರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಸಮಾರಂಭದಲ್ಲಿ ತೇವಡಿಹಳ್ಳಿ ಮಠಾಧ್ಯಕ್ಷ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು, ತೊರೆಮಠದ ಅಡವಿ ಚನ್ನಬಸವ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ವೆಂಕಟೇಗೌಡ, ಚನ್ನಬಸವಣ್ಣ, ಬಸವರಾಜು, ಕೆನರಾ ಬ್ಯಾಂಕ್ ರೀಜನಲ್ ಆಫೀಸರ್ ಗಂಗೇಶ್ ಗುಂಜನ್, ಎಸ್.ಕೆ.ಆರ್.ಡಿ.ಪಿ.ಅಧಿಕಾರಿ ಕೆ.ಜ್ಯೋತಿ, ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ಇ.ಈರಣ್ಣ, ಪ್ರಧಾನ ಕಾರ್ಯದರ್ಶಿ ಯತೀಶ್, ಕಿಟ್ಟದಕುಪ್ಪೆ ನಾಗರಾಜು, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ಮಾಜಿ ಸದಸ್ಯರು, ಮಹೇಶ್ವರಮ್ಮ ದೇವಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಆಗಮಿಸಿದ್ದರು.