ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಉಗ್ರರ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ರೀತಿಯ ಕ್ರಮಕ್ಕೂ ನಮ್ಮ ಬೆಂಬಲವಿರುತ್ತದೆ. ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ನಾವು ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಜನರ ಪ್ರಾಣ ಉಳಿಸುವ ಕಡೆಗೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಈಗ ಹೋಗಿರುವ ಪ್ರಾಣಗಳನ್ನು ವಾಪಸ್ ತರಲಾಗುವುದಿಲ್ಲ. ಅದಕ್ಕಾಗಿ ಯುದ್ಧಕ್ಕಿಂತ ರಕ್ಷಣೆ ನಮಗೆ ಮುಖ್ಯ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಹಿಂದೆ ಈ ರೀತಿಯ ಘಟನೆಗಳು ನಡೆದಿವೆ. ಕಾಶ್ಮೀರ ಸ್ವಿಟ್ಜರ್ಲೆಂಡ್ ರೀತಿ ಇದೆ. ಕರ್ನಾಟಕದಿಂದಲೂ ಹಲವು ಜನರು ಅಲ್ಲಿಗೆ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಈಗ ಈ ರೀತಿಯ ದುರ್ಘಟನೆ ಜರುಗಿದೆ. ಉಗ್ರರ ಕೃತ್ಯವನ್ನು ಒಗ್ಗಟ್ಟಾಗಿ ಖಂಡಿಸುವ ಜೊತೆಗೆ ಅವರನ್ನೂ ನಿರ್ಮೂಲನೆ ಮಾಡಬೇಕು. ಅದಕ್ಕೆ ಕೇಂದ್ರ ಯಾವ ಕ್ರಮ ಅನುಸರಿಸಿದರೂ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದರು.ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈ ರೀತಿ ಘಟನೆಗಳು ಎದುರಾದಾಗ ಒಗ್ಗಟ್ಟಾಗಿ ಎದುರಿಸಿದ್ದೇವೆ. ಇದರಲ್ಲಿ ರಾಜಕೀಯ ಬೆರಸುವುದು ಬಿಜೆಪಿ, ಕಾಂಗ್ರೆಸ್ ಯಾರಿಗೂ ಸೂಕ್ತ ಅಲ್ಲ. ಅಶೋಕ್ ವಿರೋಧ ಪಕ್ಷ ನಾಯಕರಾಗಿ ಏನೋ ಹೇಳಬೇಕೆಂದು ಹೇಳಿದ್ದಾರೆ. ಅವರು ಹಿರಿಯ ನಾಯಕರು, ಮಾತನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಾವು ದೇಶ ರಕ್ಷಣೆ ವಿಚಾರದಲ್ಲಿ ರಾಜಕೀಯ ಬೆರಸಲು ರೆಡಿ ಇಲ್ಲ. ಈ ಬಗ್ಗೆ ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ರಾಷ್ಟ್ರದಲ್ಲಿ ಭದ್ರತೆಯನ್ನು ಬಿಗಿ ಮಾಡಬೇಕೆಂಬುದಷ್ಟೇ ನಮ್ಮ ಆಶಯ, ಪಾಕ್ ಪ್ರಜೆಗಳನ್ನು ವಾಪಸ್ಸು ಕಳುಹಿಸುವುದರ ಬಗ್ಗೆಯೂ ಬೆಂಬಲ ಇದೆ.ಎಂದು ತಿಳಿಸಿದರು.