ಅರಳಿಸುವ ಕನ್ನಡ ಬೇಕೇ ಹೊರತು, ಕೆರಳಿಸುವುದಲ್ಲ

| Published : Nov 26 2023, 01:15 AM IST

ಸಾರಾಂಶ

ಕಸ್ತೂರಬಾ ಬಾಲಕಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಡಾ. ಬಿ.ಎನ್. ತಂಬುಳಿ ಮಾತನಾಡಿ, ಕನ್ನಡಿಗರು ಸ್ವಾಭಿಮಾನಿಗಳು. ಇಲ್ಲಿ ಗಂಭೀರತೆ ಇದೆ, ಉದಾರತೆ ಇದೆ. ಕವಿಗಳಿದ್ದಾರೆ. ಕಾವ್ಯಗಳಿವೆ, ಶಿಲ್ಪಗಳಿವೆ. ವಿಶ್ವದಲ್ಲಿಯೇ ಶ್ರೇಷ್ಠವಾದ ಈ ಭಾಷೆಯನ್ನು ಅಕ್ಷರ ಕಲಿತವರು ಬೆಳೆಸಬೇಕಾಗಿದೆ ಎಂದರು. ಹಾಗೆ ನೋಡಿದರೆ ಅನಕ್ಷರಸ್ಥ ಸಮಾಜದಿಂದಲೇ ಕನ್ನಡ ಉಳಿದು ಬೆಳೆದಿದೆ. ಶತಮಾನಗಳಿಂದಲೂ ತಮ್ಮ ಹೊಟ್ಟೆಪಾಡಿಗಾಗಿ ಊರೂರು ತಿರುಗುತ್ತಿದ್ದ ಬಳೆಗಾರರು, ಬುಡಬುಡಕಿಯವರು, ಜೋಗಿಗಳು, ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಮಾತನಾಡುತ್ತಾರೆ. ಅವರ ಕನ್ನಡ ಭಾಷೆಯನ್ನು ಕೇಳಿದರೆ ಮನಸ್ಸು ಖುಷಿಗೊಳ್ಳುತ್ತದೆ. ಅವರ ಜಾಣ್ಮೆ ಹಾಗಿತ್ತು. ಜನಪದರಿಂದಲೇ ಕನ್ನಡ ಭಾಷೆ ಉಳಿಯುತ್ತಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮಗೆ ಅರಳಿಸುವ ಕನ್ನಡ ಬೇಕೇ ವಿನಃ, ಕೆರಳಿಸುವ ಕನ್ನಡ ಸಲ್ಲದು. ಮತೀಯ ವಾದಿಗಳ ಸಾಹಿತ್ಯ ನಮಗೆ ಬೇಕಾಗಿಲ್ಲ ಎಂದು ಕರ್ನಾಟಕ ಸಂಘ ಅಧ್ಯಕ್ಷ ಎಂ.ಎನ್. ಸುಂದರರಾಜ್ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆ, ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕಾರಾತ್ಮಕ ಸಾಹಿತ್ಯದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಸಾಹಿತ್ಯ ಎಂದರೆ ಮನಸ್ಸನ್ನು ಮುದಗೊಳಿಸಬೇಕು. ಭಾಷೆಗೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡ ಭಾಷೆಗೂ ಅಷ್ಟೇ. ಒಂದು ಅಸ್ಮಿತೆ, ಶ್ರೇಷ್ಠತೆ, ವೈಜ್ಞಾನಿಕತೆ ಇದೆ. ಇಂದು ಓದುವವರಿಗಿಂತ ಬರೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಕಸ್ತೂರಬಾ ಬಾಲಕಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಡಾ. ಬಿ.ಎನ್. ತಂಬುಳಿ ಮಾತನಾಡಿ, ಕನ್ನಡಿಗರು ಸ್ವಾಭಿಮಾನಿಗಳು. ಇಲ್ಲಿ ಗಂಭೀರತೆ ಇದೆ, ಉದಾರತೆ ಇದೆ. ಕವಿಗಳಿದ್ದಾರೆ. ಕಾವ್ಯಗಳಿವೆ, ಶಿಲ್ಪಗಳಿವೆ. ವಿಶ್ವದಲ್ಲಿಯೇ ಶ್ರೇಷ್ಠವಾದ ಈ ಭಾಷೆಯನ್ನು ಅಕ್ಷರ ಕಲಿತವರು ಬೆಳೆಸಬೇಕಾಗಿದೆ ಎಂದರು.

ಹಾಗೆ ನೋಡಿದರೆ ಅನಕ್ಷರಸ್ಥ ಸಮಾಜದಿಂದಲೇ ಕನ್ನಡ ಉಳಿದು ಬೆಳೆದಿದೆ. ಶತಮಾನಗಳಿಂದಲೂ ತಮ್ಮ ಹೊಟ್ಟೆಪಾಡಿಗಾಗಿ ಊರೂರು ತಿರುಗುತ್ತಿದ್ದ ಬಳೆಗಾರರು, ಬುಡಬುಡಕಿಯವರು, ಜೋಗಿಗಳು, ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಮಾತನಾಡುತ್ತಾರೆ. ಅವರ ಕನ್ನಡ ಭಾಷೆಯನ್ನು ಕೇಳಿದರೆ ಮನಸ್ಸು ಖುಷಿಗೊಳ್ಳುತ್ತದೆ. ಅವರ ಜಾಣ್ಮೆ ಹಾಗಿತ್ತು. ಜನಪದರಿಂದಲೇ ಕನ್ನಡ ಭಾಷೆ ಉಳಿಯುತ್ತಿದೆ ಎಂದು ಹೇಳಿದರು.

ವಿಜ್ಞಾನ, ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಿಂತ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಕನ್ನಡ ಭಾಷೆ ಬಗ್ಗೆ ಅಭಿಮಾನ ಇರುತ್ತದೆ. ಇಂದಿನ ಯುವಸಮುದಾಯ ಕನ್ನಡಕ್ಕಾಗಿ ಕಂಕಣಬದ್ಧ ಆಗಿರುವುದು ಕಂಡುಬರುತ್ತದೆ. ಗಾಂಚಾಲಿ ಬಿಡಿ. ಕನ್ನಡ ಮಾತನಾಡಿ ಎಂದು ಸ್ಪಷ್ಟವಾದ ಧ್ವನಿಯಲ್ಲಿ ನಮ್ಮ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪಾಸಾಗಿರುವುದು ಕಲಾ ಕಾಲೇಜಿನ ವಿದ್ಯಾರ್ಥಿಗಳೇ ಎಂದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಸಯ್ಯದ್ ಸನಾವುಲ್ಲಾ ವಹಿಸಿದ್ದರು. ವೇದಿಕೆ ಸಂಚಾಲಕಿ ಡಾ. ಹಾಲಮ್ಮ ಎನ್. ಪ್ರಾಸ್ತಾವಿಕ ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಚಂದ್ರಗುತ್ತಿ, ಪ್ರಾಧ್ಯಾಪಕ ಡಾ. ಎಚ್.ಎಸ್. ಪ್ರಕಾಶ್, ಪ್ರಾಧ್ಯಾಪಕರಾದ ರಮೇಶ್‌ಕುಮಾರ್, ಲವ, ಸಿರಾಜ್ ಅಹ್ಮದ್, ಮೇಟಿ ಮಲ್ಲಿಕಾರ್ಜುನ, ಕೃಪಲಾನಿ, ಮಹದೇವಸ್ವಾಮಿ ಸೇರಿದಂತೆ ಹಲವರಿದ್ದರು.

- - -

ಕೋಟ್‌ ಕನ್ನಡವನ್ನು ಬಳಸುವ ಮೂಲಕ ಉಳಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಪುಸ್ತಕ ಪ್ರೀತಿ ಇಂದು ಮರೆಯಾಗುತ್ತಿದೆ. ಒಳ್ಳೆಯ ಆಲೋಚನೆಗಳು ಅಕ್ಷರರೂಪಕ್ಕೆ ಬಂದಾಗ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ಆಗ ಮಾತ್ರ ರನ್ನಡ ಭಾಷೆ ಬೆಳೆಯಲು ಸಾಧ್ಯ

- ಎಂ.ಎನ್‌.ಸುಂದರರಾಜ್‌, ಅಧ್ಯಕ್ಷ, ಕರ್ನಾಟಕ ಸಂಘ

- - - -25ಎಸ್‌ಎಂಜಿಕೆಪಿ01:

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ವೇದಿಕೆ, ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಉದ್ಘಾಟಿಸಿದರು.