ಇಂಡಿಯಾ ಗೆದ್ರೆ ರೈತರ ಸಾಲ ಮನ್ನಾ: ಸಿಎಂ

| Published : May 05 2024, 02:06 AM IST

ಸಾರಾಂಶ

ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ದಾವಣಗೆರೆ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷದಲ್ಲಿ ಏನು ಮಾಡಿದ್ದೇವೆ ಎಂಬುದನ್ನು ದೇಶದ ಜನತೆಗೆ ತಿಳಿಸಿ ಮತ ಕೇಳುತ್ತಿಲ್ಲ. ಹೊಸ, ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬರುತ್ತಿದ್ದಾರೆ ಅಷ್ಟೆ ಎಂದು ಲೇವಡಿ ಮಾಡಿದರು.

ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣಗಳಿಸುವುದಾಗಿ ನಂಬಿಸಿ, ಕೃಷಿ ಖರ್ಚು ಮೂರು ಪಟ್ಟು ಹೆಚ್ಚಾಗುವಂತೆ ಮಾಡಿದರು. ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ನಂಬಿಸಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ರಸಗೊಬ್ಬರ, ಬೇಳೆ, ಕಾಳು, ಅಡುಗೆ ಎಣ್ಣೆ ಹೀಗೆ ಎಲ್ಲದರ ಬೆಲೆ ಗಗನಮುಖಿಯಾಗುವಂತೆ ಮಾಡಿದರು. ಹೀಗೆ ನಿರಂತರ ಭಾರತೀಯರಿಗೆ ಮೋದಿ ಸರ್ಕಾರ ದ್ರೋಹ ಬಗೆಯುತ್ತಲೇ ಬಂದಿದೆ. ನಿಮ್ಮ ಪ್ರತಿಯೊಂದು ಮತಕ್ಕೂ ದ್ರೋಹ ಬಗೆದಿದ್ದಾರೆ. ಇದೇ ದ್ರೋಹಿಗಳಿಂದ ಮತ್ತೆ ಮತ್ತೆ ಜನ ಮೋಸ ಹೋಗಬಾರದು ಎಂದು ಅವರು ಎಚ್ಚರಿಸಿದರು.

ಆದರೆ, ನಾವು ನುಡಿದಂತೆ ನಡೆದು, 5ಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿಮ್ಮ ಮತದ ಘನತೆ ಹೆಚ್ಚಿಸಿದವರಿಗೆ ನಿಮ್ಮ ಮತ ನೀಡಿ. ನಮ್ಮ ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣದಲ್ಲೂ ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಸಹ ಗ್ಯಾರಂಟಿ ಭರವಸೆ ಘೋಷಿಸಿದ್ದು, ನಾವು ನುಡಿದಂತೆ ನಡೆಯುತ್ತೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರೇವಣ್ಣ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ: ಸಿಎಂಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ದಳ ಬಂಧಿಸಿದ್ದು, ಈ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಚಿಕ್ಕೋಡಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ನಾನು ಪೊಲೀಸರ ಜೊತೆ ಮಾತನಾಡುತ್ತೇನೆ. ನಾವು ಇದರಲ್ಲಿ ಮಧ್ಯಪ್ರವೇಶ ಮಾಡಲ್ಲ. ರೇವಣ್ಣ ಅವರು ಅಪಹರಣ ಪ್ರಕರಣವೊಂದರ ಕುರಿತು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ, ಅವರ ಅರ್ಜಿ ವಜಾ ಆಗಿದ್ದು, ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅವರನ್ನು ಕಸ್ಟಡಿಗೆ ತೆಗೆದುಕೊಂಡಿರಬೇಕು ಅನಿಸುತ್ತದೆ ಎಂದರು.ತೊಡೆ ತಟ್ಟಿದವರ ಸೊಕ್ಕು ಮುರಿದವನು ನಾನುಈ ಹಿಂದೆ ಜನಾರ್ದನ ರೆಡ್ಡಿ, ಶ್ರೀರಾಮುಲು ಸದನದಲ್ಲೇ ನನಗೆ ತೊಡೆ ತಟ್ಟಿದ್ದರು. ಬಳಿಕ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ಇಬ್ಬರ ಸೊಕ್ಕನ್ನೂ ಮುರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ದಾವಣಗೆರೆ ನಗರದಲ್ಲಿ ಶನಿವಾರ ಕುರುಬ ಸಮಾಜ ಮತ್ತು ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿ, ನನ್ನ ವಿರುದ್ಧ ತೊಡೆ ತಟ್ಟಿದಾಗ ಅಂಥವರ ಜಿಲ್ಲೆವರೆಗೂ ಐತಿಹಾಸಿಕ ಪಾದಯಾತ್ರೆ ಕೈಗೊಂಡು, ಆ ಇಬ್ಬರ ಸೊಕ್ಕು ಮುರಿದಿದ್ದಷ್ಟೇ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೂ ಬರಲು ಕಾರಣರಾದೆವು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.ಪ್ರಧಾನಿ ಮೋದಿ ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡು, ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆದಿದ್ದೇ ಸಾಧನೆ ಮಾಡಿಕೊಂಡಿದ್ದಾರೆ. ಹಿಂದುಳಿದವರ ದೊಡ್ಡ ಶತೃವೆಂದರೆ ಅದು ಬಿಜೆಪಿ. ಬಿಜೆಪಿಗೆ ಹಿಂದುಳಿದ ವರ್ಗಗಳು ಮತ ಹಾಕುವುದಕ್ಕೆ ಕಾರಣ‍ವೇ ಇಲ್ಲ. ಕುರುಬರಿಗೆ ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಟಿಕೆಟ್ ಕೊಟ್ಟಿಲ್ಲ. ನೀವೂ ಸಹ ಬಿಜೆಪಿಗೆ ಒಂದೇ ಒಂದು ಮತವನ್ನೂ ನೀಡಬೇಡಿ ಎಂದು ಅವರು ಹೇಳಿದರು.

ಹಿಂದುಳಿದವರಿಗೆ ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದೇ ಬಿಜೆಪಿ. ಮಹಿಳೆಯರಿಗೆ ಮೀಸಲಾತಿ ನೀಡಿದಾಗಲೂ ವಿರೋಧ ಮಾಡಿದ್ದು ಬಿಜೆಪಿ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗಲೂ ವಿರೋಧಿಸಿದ್ದು ಬಿಜೆಪಿ. ಬಿಜೆಪಿಯ ರಾಮಾಜೋಯಿಸ್ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಬಿಜೆಪಿ ಸದಾ ಹಿಂದುಳಿದವರು, ಶ್ರಮಿಕರು, ದುಡಿಯುವ ವರ್ಗಗಳ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದರು.