ಕೆಲಸ ಮಾಡಿದ್ದು ನಾವು, ನಮಗೆ ಕೂಲಿ ಸಿಗಬೇಕು; ಅಶ್ವತ್ಥನಾರಾಯಣ್

| Published : Apr 17 2024, 01:22 AM IST

ಸಾರಾಂಶ

ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 6.6ರಷ್ಟಿತ್ತು. ಈ ಪ್ರಮಾಣ ಇದೀಗ ಶೇ 3.3ಕ್ಕೆ ಕುಸಿದಿದೆ. 7 ಕೋಟಿಗೂ ಅಧಿಕ ಉದ್ಯೋಗಗಳನ್ನು ಸೃಜಿಸಲಾಗಿದೆ. ಯುವ ಸಮುದಾಯಕ್ಕೆ ಕೌಶಲವನ್ನು ವೃದ್ಧಿಸುವುದಲ್ಲದೆ ಸಾಲವನ್ನೂ ಕೊಟ್ಟು ಉದ್ಯೋಗಗಳ ಆರಂಭಕ್ಕೆ ಸಹಕರಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ. ನಿಜವಾಗಿ ಕೆಲಸ ಮಾಡಿದ್ದು ನಾವು, ಹೀಗಾಗಿ ಕೂಲಿ ನಮಗೆ ಸಿಗಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರವರ ಸ್ಲೋಗನ್ ಗೆ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್ .ಅಶ್ವತ್ಥ ನಾರಾಯಣ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಬೆಂ - ಮೈ, ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ, ಜಲ ಜೀವನ್ ಮಿಷನ್ , ಶ್ರೀರಂಗ, ನೆಟ್ಕಲ್ , ಸತ್ತೇಗಾಲ ಯೋಜನೆ, ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣ ಘಟಕ, ಜಿಲ್ಲಾಸ್ಪತ್ರೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಸೇರಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಯಾವ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂಬುದಕ್ಕೆ ಅಂಕಿ ಅಂಶಗಳೇ ಸಾಕ್ಷಿಯಾಗಿವೆ . ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ರವರು ಕ್ಷೇತ್ರದ ಅಭಿವೃದ್ಧಿಗಾಗಿ ಏನು ಕೊಡುಗೆ ನೀಡಿದ್ದಾರೆಂದು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ. ಜಿಲ್ಲೆಯನ್ನು ಯಾರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ನೋಡಿ ಜನರು ನಮಗೆ ಕೂಲಿ ಕೊಡಲಿ ಎಂದು ಹೇಳಿದರು.

ಮೋದಿ ಟೀಂನಲ್ಲಿ ಮಂಜುನಾಥ್ !:

ಮೋದಿ ಟೀಂನಲ್ಲಿ ಈವರೆಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಇರಲಿಲ್ಲ. ಈ ಚುನಾವಣೆಯ ಮೂಲಕ ಮೋದಿ ಟೀಂನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರಾತಿನಿಧ್ಯ ಸಿಗಲಿದೆ ಎಂದು ಡಾ.ಸಿ.ಎನ್.ಮಂಜುನಾಥ್ ಅವರ ಗೆಲುವಿನ ಬಗ್ಗೆ ಅಶ್ವತ್ಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಕೇಂದ್ರಿತ ಉಪಗ್ರಹವನ್ನು ಉಡಾವಣೆ ಮಾಡಿ ರೈತರಿಗೆ ಅನುಕೂಲವಾಗುವ ಮಾಹಿತಿಯನ್ನು ಕಾಲಕಾಲಕ್ಕೆ ನೀಡಲಾಗುತ್ತದೆ. ರೈತರ ಬೆಳೆಗಳನ್ನು ಶೇಖರಿಸಲು ಗ್ರಾಮೀಣ ಭಾಗಗಳಲ್ಲಿ ಗೋದಾಮುಗಳ ನಿರ್ಮಾಣ, ನೀರಾವರಿ ಸೌಲಭ್ಯಗಳ ವಿಸ್ತರಣೆ, ಇನ್ನಷ್ಟು ಬೆಳೆಗಳನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರುವುದು, ನ್ಯಾನೋ ಗೊಬ್ಬರ ಹೀಗೆ ಕೃಷಿಗೆ ಸಂಬಂಧಿಸಿದಂತೆ ತಂತ್ರಜ್ಞಾನವನ್ನು ಬಳಸಿಕೊಂಡು ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಂಕಲ್ಪ ಪತ್ರದಲ್ಲಿನ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ದೇಶದಲ್ಲಿನ ಮಹಿಳೆಯ ಸಬಲೀಕರಣಕ್ಕಾಗಿ ವಿಶೇಷ ಅಧ್ಯತೆ ನೀಡುತ್ತಿರುವುದಾಗಿ ನಾರಿ ಶಕ್ತಿ ಯೋಜನೆಯಡಿ ಲಕ್ಪತಿದೀದಿ ಕಾರ್ಯಕ್ರಮದಡಿ ಕನಿಷ್ಠ 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನು ಮಾಡುವ ಸಂಕಲ್ಪ ಹೊಂದಿದ್ದೇವೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮಹಿಳಾ ಗುಂಪುಗಳನ್ನು ತೊಡಗಿಸಲು ತಮ್ಮ ಪಕ್ಷ ಸಂಕಲ್ಪಿಸಿದೆ. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಲು ತಮ್ಮ ಪಕ್ಷ ಬದ್ದವಾಗಿದೆ ಎಂದರು.

ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 6.6ರಷ್ಟಿತ್ತು. ಈ ಪ್ರಮಾಣ ಇದೀಗ ಶೇ 3.3ಕ್ಕೆ ಕುಸಿದಿದೆ. 7 ಕೋಟಿಗೂ ಅಧಿಕ ಉದ್ಯೋಗಗಳನ್ನು ಸೃಜಿಸಲಾಗಿದೆ. ಯುವ ಸಮುದಾಯಕ್ಕೆ ಕೌಶಲವನ್ನು ವೃದ್ಧಿಸುವುದಲ್ಲದೆ ಸಾಲವನ್ನೂ ಕೊಟ್ಟು ಉದ್ಯೋಗಗಳ ಆರಂಭಕ್ಕೆ ಸಹಕರಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಡಿಕೆ ಸಹೋದರರಿಗೆ ಗೊತ್ತಾಗಿದೆ. ಅಲ್ಲದೆ, ಕಾಂಗ್ರೆಸ್ ಗೆ ಮತ ಕೊಡುವುದರಿಂದ ಏನೂ ಪ್ರಯೋಜನವಿಲ್ಲವೆಂದು ಜನರಿಗೂ ಗೊತ್ತಾಗಿದೆ. ಕ್ಷೇತ್ರದಲ್ಲಿ ಉಸಿರುಗಟ್ಟುವ ವಾತಾವರಣ, ದ್ವೇಷದ ರಾಜಕಾರಣ, ಜನರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಇದಕ್ಕೆಲ್ಲ ಉತ್ತರ ಕೊಡುವ ಕಾಲ ಬಂದಿದೆ. ಬಿಜೆಪಿ - ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಜನರ ಅಭ್ಯರ್ಥಿಯಾಗಿದ್ದಾರೆ. ಜನರು ಸಂತೋಷದಿಂದ ಅವರನ್ನು ಸ್ವಾಗತಿಸುತ್ತಿದ್ದಾರೆ. ನಮ್ಮ ಚುನಾವಣೆ ಅಂತ ಕೆಲಸ ಮಾಡುತ್ತಿದ್ದಾರೆ.

- ಡಾ.ಸಿ.ಎನ್ .ಅಶ್ವತ್ಥ ನಾರಾಯಣ, ಮಾಜಿ ಉಪಮುಖ್ಯಮಂತ್ರಿ.