ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು ಸಂವಿಧಾನದಲ್ಲಿ ವಕ್ಫ್ ಇಲ್ಲ ಆದ್ದರಿಂದ ಅದನ್ನು ಸಹ ಕಿತ್ತೊಗೆಯುತ್ತೇವೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರರ ಮನಸ್ಸಿನ ವಿರುದ್ಧದ ಸಂವಿಧಾನ ವನ್ನು ನಾವು ಬದಲಾಯಿಸುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಸ್ಥಳೀಯ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಕಾಂಗ್ರೆಸ್ ಪಾಕಿಸ್ತಾನ ವಿಭಜನೆ ಬೇಡ ಎಂದಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಜವಾದ ಜೀವನವನ್ನು ತಿಳಿಸುವ ಕೆಲಸವನ್ನೇ ಮಾಡಲಿಲ್ಲ. ಅವರಿಗೆ ಭಾರತ ರತ್ನವನ್ನೂ ನೀಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷವಾದರೂ ಸಂವಿಧಾನಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನಡೆದುಕೊಂಡಿದ್ದೇವೆ. ಜಮ್ಮು-ಕಾಶ್ಮೀರ ದಲ್ಲಿ 370 ರದ್ದು ಪಡಿಸಿದರ ಪರಿಣಾಮವಾಗಿಯೇ ಅಲ್ಲಿ ಇದೀಗ 5 ಜನ ಎಸ್ಸಿ-ಎಸ್ಟಿ ಶಾಸಕರು ಆಯ್ಕೆಯಾಗಿದ್ದಾರೆ ಎಂದ ಅವರು, ಇದು ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಆಶಯದಡಿ ಕೆಲಸ ಮಾಡುತ್ತಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದರು.ವಕ್ಫ್ ಕ್ಯಾನ್ಸರ್ ಪಿಡುಗು ದೇಶವ್ಯಾಪಿ ಹರಡಿಕೊಂಡಿದೆ. ವಕ್ಫ್ ಹಠಾವೊ ದೇಶ ಬಚಾವೋ ಎಂಬ ಘೋಷವಾಕ್ಯದಡಿ ಜನಜಾಗೃತಿಗಾಗಿ ಈ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ವಕ್ಫ್ ಮಸೂದೆ ಜಾರಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದರು.
ವಕ್ಫ್ ಬಳಿ ಇನ್ನೂ ಅನೇಕ ದಾಖಲೆಗಳಿವೆ. ಎಲ್ಲ ಸರ್ಕಾರಿ ಕಚೇರಿಗಳು ವಕ್ಫ್ ಹೆಸರಿಗೆ ಮಾಡಿಕೊಂಡಿದ್ದಾರೆ. ಇಂಥ ಷಡ್ಯಂತ್ರದ ವಿರುದ್ಧ ಹೋರಾಟ ಶುರು ಮಾಡಿದರೆ ಹೋರಾಟಕ್ಕೆ ಅವರು ಯಾಕೆ ಬಂದಿಲ್ಲ; ಇವರು ಯಾಕೆ ಬಂದಿಲ್ಲ ಎಂದು ಕೇಳುವವರು ಹೆಚ್ಚಾಗಿದ್ದಾರೆ ಟಾಂಗ್ ನೀಡಿದರು. ವಕ್ಫ್ ಆಸ್ತಿ ಜಮೀರ್ ಅಹ್ಮದ್ ತಾತ ಗಳಿಸಿದ್ದಾ?ದೇಶದಲ್ಲಿ 38 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ ಎನ್ನುತ್ತಿದ್ದಾರೆ. ವಿಜಯಪುರದಲ್ಲಿ 16 ಸಾವಿರ ಎಕರೆ ವಕ್ಫ್ ಆಸ್ತಿ ಇದೆ. ಬೀದರ್ ಜಿಲ್ಲೆಯಲ್ಲಿ 20 ಸಾವಿರ ಎಕರೆ, ಕಲಬುರಗಿ ಜಿಲ್ಲೆಯಲ್ಲಿ 13 ಸಾವಿರ ಎಕರೆ ವಕ್ಫ್ ಆಸ್ತಿ ಇದೆ. ಇದೆಲ್ಲ ಜಮೀರ್ ಅಹ್ಮದ್ ತಾತ ಗಳಿಸಿದ್ದಾ ? ಇದು ನಮ್ಮಪ್ಪ ನಿಮ್ಮಪ್ಪನ ಆಸ್ತಿಯಲ್ಲ. ಭಾರತದ ಆಸ್ತಿ ಎಂದು ಯತ್ನಾಳ್ ಗುಡುಗಿದರು.
ಸ್ವಾರ್ಥ ರಹಿತ ಹೋರಾಟ ನಮ್ಮದುನಾವು ನಡೆಸುತ್ತಿರುವ ಹೋರಾಟದಲ್ಲಿ ಸ್ವಾರ್ಥವಿಲ್ಲ, ಎಲ್ಲೆಲ್ಲಿ ಬಿಜೆಪಿ ಸಂಘಟನೆಯಿಲ್ಲವೋ ಅಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಾವು ಯಾರಿಗೂ ಅಪ್ಪಾಜಿ ಎನ್ನುವುದಿಲ್ಲ. ನಮ್ಮದು ಕೃಪಾಪೋಷಿತ ಹೋರಾಟವಲ್ಲ. ಕಳೆದ ಎಂಪಿ ಎಲೆಕ್ಷನ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಒಂದೇ ಒಂದು ಸ್ಥಾನ ಗೆದ್ದಿಲ್ಲ ಈ ಹಿನ್ನೆಲೆಯಲ್ಲಿ ವಕ್ಫ್ ಅನ್ಯಾಯದ ವಿರುದ್ಧ ಜನಜಾಗೃತಿ ಮೂಡಿಸುವುದರ ಜೊತೆಗೆ ಈ ಭಾಗದಲ್ಲಿ ಪಕ್ಷ ಸಂಘಟನೆ ಕೈಗೊಂಡಿದ್ದೇವೆ. ಮೊದಲ ಹಂತವಾಗಿ ಹೋರಾಟ ನಡೆಸಿ ಬರುವ ಡಿ.2 ಕ್ಕೆ ದೆಹಲಿಗೆ ತೆರಳಿ ವರದಿ ಸಲ್ಲಿಸಲಾಗುವುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಕಾಂಗ್ರೆಸ್‌ನಿಂದ ವೈಯಕ್ತಿಕ ಲಾಭ ಪಡೆದಿದ್ರೆ ನನ್ನ ರಾಜಕೀಯ ನಿವೃತ್ತಿ: ಯತ್ನಾಳ್ ಸವಾಲುರಾಯಚೂರು: ನಾನು ಕಾಂಗ್ರೆಸ್ ನಿಂದ ವೈಯಕ್ತಿಕ ಲಾಭ ಪಡೆದಿದ್ದರೆ, ರಾಜಕೀಯ ನಿವೃತ್ತಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಸವಾಲು ಹಾಕಿದರು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ ನಡೆಸಿ ಜಿಲ್ಲಾಡಳಿತ ಮುಖಾಂತರ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಲ್ಲಿ ನನ್ನ ಪತ್ರದ ಮೇಲೆ ವೈಯಕ್ತಿಕವಾಗಿ ಸಹಿ ಪಡೆದುಕೊಂಡು ಲಾಭ ಪಡೆದಿದ್ದರೆ, ತೋರಿಸಲಿ ನಾನು ರಾಜಕೀಯ ನಿವೃತ್ತಿ ಪಡೆಯು ತ್ತೇನೆ. ಯಾರು ರಾತ್ರಿ ಸಮಯದಲ್ಲಿ ಯಾರನ್ನು ಭೇಟಿಯಾಗುತ್ತಾರೆ ಎನ್ನುವುದು ಗೊತ್ತಿದೆ. ವಿಧಾನಸಭೆಯಲ್ಲಿ ನಾವು ಹೋರಾಟ ಮಾಡುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ ಅವರೊಂದಿಗೆ ಸಹಿ ಪಡೆದುಕೊಂಡವರು ನಾಲಾಯಕರು, ನಾಚಿಕೇಡಿನವರು ಎಂದು ಟೀಕಿಸಿದರು.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಅವ್ಯವಹಾರ ವಿರೋಧಿಸಿ ಪಾದಯಾತ್ರೆ ನಡೆಸಲು ಉದ್ದೇಶ ಹೊಂದಲಾಗಿತ್ತು. ಆದರೆ, ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು 87 ಕೋಟಿ ರು. ಅವ್ಯವಹಾರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಪಾದಯಾತ್ರೆಗೆ ಪರವಾನಗಿ ದೊರಕಲಿಲ್ಲ ಎಂದು ವಿವರಿಸಿದರು.ವಕ್ಫ್ ಜಮೀನು ಕಬಳಿಕೆ ಸಂಬಂಧಿಸಿದ ವಿಜಯಪುರದಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹಾಗೂ ಸಂಸತ್ತಿನ ಜಂಟಿ ಸಮಿತಿ ಅಧ್ಯಕ್ಷರೇ ಆಗಮಿಸಿದ್ದರು. ಅಲ್ಲದೇ ಸಂಸದರು, ಶಾಸಕರು ಬಂದಿದ್ದರು. ಆದರೂ ಹೋರಾಟಕ್ಕೆ ಯಾವ ಪರವಾನಗಿ ಪಡೆಯಬೇಕಾ ಎಂದು ಪ್ರಶ್ನಿಸಿ ಅವರು ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ ನಡೆಸುತ್ತಿರುವ ನಮ್ಮ ವಿರುದ್ಧ ಹೈಕಮಾಂಡ್ ದೂರು ನೀಡಲಿ ಬೇಡ ಅಂದವರೂ ಯಾರು? ಎಂದು ಪ್ರತಿಕ್ರಿಯಿಸಿದರು.ವಕ್ಫ್ ಮಂಡಳಿ ಲ್ಯಾಂಡ್ ಜಿಹಾದ್ ಕುರಿತು ಎಚ್ಚರವಿರಲಿ: ಅರವಿಂದ ಲಿಂಬಾವಳಿ ಉವಾಚರಾಯಚೂರು: ಬಡವರ, ರೈತರ ಜಮೀನಿನ ಪಹಣಿಯಲ್ಲಿ ನಮ್ಮ ಆಸ್ತಿ ಹೆಸರು ತೋರಿಸುತ್ತಿರುವ ವಕ್ಫ್ ಮಂಡಳಿಯು ಲ್ಯಾಂಡ್ ಜೀಹಾದ್ ಕಾರ್ಯವನ್ನು ನಡೆಸುತ್ತಿದ್ದು, ಇದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸೂಚಿಸಿದರು.
ಸ್ಥಳೀಯ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ವಕ್ಫ್ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟದ ವೇದಿಕೆ ಕಾರ್ಯಕ್ರಮದಲ್ಲಿ ಬುಧವಾರ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ರಾಜ್ಯದಲ್ಲಿ ವಕ್ಫ್ ಆಸ್ತಿಯು ಬೆಳೆಯುತ್ತಲೇ ಸಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆ, ಜಮೀನಿನ ಪಹಣಿಯನ್ನು ಪದೇ ಪದೆ ಪರಿಶೀಲಿಸಿಕೊಳ್ಳುವಂತಹ ಭೀತಿಯ ವಾತಾವರಣವನ್ನು ಸೃಷ್ಠಿಸಲಾಗಿದೆ. ಇಂದು ಇಡೀ ವಿಜಯಪುರ ನಮ್ಮದೇ ಎಂದು ಹೇಳುತ್ತಿರುವವರು ನಾಳೆ ರಾಯಚೂರು ವಕ್ಫ್ ಆಸ್ತಿ ಎಂದು ಬಂದರೂ ಸಹ ಅಚ್ಚರಿಪಡಬೇಕಾಗಿಲ್ಲ. ನಮಗೆ ಬಂದಿಲ್ಲವೆಂದು ಸುಮ್ಮನೆ ಕೂರುವುದಲ್ಲ, ಎಲ್ಲರೂ ಪಹಣಿಯ ಕ್ರಮ ಸಂಖ್ಯೆ 9 ಮತ್ತು 11ನ್ನು ತಪ್ಪದೇ ಪರಿಶೀಲಿಸಿಕೊಳ್ಳಬೇಕು ಎಂದರು.ವಕ್ಫ್ ಕಾನೂನು ಬದಲಾಗಬೇಕಾಗಿದೆ. ಮಂಡಳಿಯನ್ನು ತೆಗೆಯಬೇಕಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆ ರೂಪಿಸಿದ್ದು, ಅದಕ್ಕೆ ಎಲ್ಲರೂ ಬೆಂಬಲಿಸ ಬೇಕು, ಈ ಕಾಯ್ದೆಗೆ ಬೆಂಬಲಿಸುವಂತೆ ಸ್ಥಳೀಯ ಸಂಸದರಿಗೆ ವಾಟ್ಸ್ ಆಪ್ ಸಂದೇಶಗಳನ್ನು ರವಾನಿಸಬೇಕು ಎಂದು ಹೇಳಿದರು.ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರಕ್ಕೆ ಹಲವಾರು ಮಾರಕ ಕಾಯ್ದೆಗಳಿದ್ದು ಅವುಗಳಿಗೆ ಪೂರಕವಾದ ಕಾನೂನುಗಳನ್ನು ರೂಪಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿಯೇ ಕೇಂದ್ರ ಸರ್ಕಾರವು ಪ್ರಯತ್ನನಡೆಸುತ್ತಿದೆ ಅದರ ಅಂಗವಾಗಿಯೇ ಜನಜಾಗೃತಿ ಹೋರಾಟವನ್ನು ನಡೆಸ ಲಾಗುತ್ತಿದೆ ಎಂದು ತಿಳಿಸಿದರು.ಮಾಜಿ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ವಕ್ಫ್ ಅನ್ಯಾಯದ ವಿರುದ್ಧ ನಡೆಸುತ್ತಿರುವ ಈ ಹೋರಾಟವನ್ನು ಯಾವುದೇ ರೀತಿಯ ರಾಜಕೀಯ, ಪಕ್ಷಕ್ಕೆ ಸೀಮಿತಗೊಳಿಸದೇ ನಮ್ಮೆಲ್ಲರ ಭವಿಷ್ಯವನ್ನು ಮುಂದಿಟ್ಟುಕೊಂಡು ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಉದ್ಘಾಟಿಸಿದರು.ಮಾಜಿ ಸಂಸದ ಬಿ.ವಿ.ನಾಯಕ, ಶಾಸಕ ವಿ.ಪಿ.ಹರೀಶ ಮಾತನಾಡಿದರು. ಮಾಜಿ ಸಚಿವ ಜಿ.ಎಂ.ಸಿದ್ಧೇಶ್ವರ, ಮುಖಂಡರಾದ ಎಂ.ಆರ್.ಸಂತೋಷ, ರವಿ ಬಿರಾದಾರ,ರಮಾನಂದ ಯಾದವ್, ಬಂಡೇಶ ವಲ್ಕಂದಿನ್ನಿ ಸೇರಿದಂತೆ ಪಕ್ಷದ ಕಾರ್ಯಕರ್ತರು,ಸದಸ್ಯರು ಇದ್ದರು.