ಸಾರಾಂಶ
ಕುಡುಪು ಬಳಿ ಅಶ್ರಫ್ ಎಂಬ ಯುವಕನ ಹತ್ಯೆ ಸಮಾಜದ ಶಾಂತಿ ಕದಡುವ ದುಷ್ಟ ಶಕ್ತಿಗಳ ಕೃತ್ಯ. ಪ್ರಕರಣದಲ್ಲಿ ಇನ್ನೂ ಕೆಲವು ದುಷ್ಕರ್ಮಿಗಳು ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಹೊರವಲಯದ ಕುಡುಪು ಬಳಿ ಅಶ್ರಫ್ ಎಂಬ ಯುವಕನ ಹತ್ಯೆ ಸಮಾಜದ ಶಾಂತಿ ಕದಡುವ ದುಷ್ಟ ಶಕ್ತಿಗಳ ಕೃತ್ಯ. ಪ್ರಕರಣದಲ್ಲಿ ಇನ್ನೂ ಕೆಲವು ದುಷ್ಕರ್ಮಿಗಳು ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಸಾಮರಸ್ಯ ಮತ್ತು ಭಾವೈಕ್ಯತೆಯ ನೆಲೆಯಾಗಿತ್ತು. ಆದರೆ ಕೆಲ ಸಮಾಜಘಾತುಕ ಶಕ್ತಿಗಳು ಹಲವು ವರ್ಷಗಳಿಂದ ಜಿಲ್ಲೆಯ ಕೋಮು ಸೌರ್ಹಾದಕ್ಕೆ ಕೊಳ್ಳಿ ಇಡುವ ಯತ್ನ ಮಾಡುತ್ತಿವೆ. ಮೊನ್ನೆಯ ಕುಡುಪು ಘಟನೆ ಇದರ ಒಂದು ಭಾಗ. ಯುವಕನ ಕೊಲೆ ಸಂಬಂಧ ಈಗಾಗಲೇ ಮಂಗಳೂರು ಪೊಲೀಸರು ಶೀಘ್ರ ಕ್ರಮ ತೆಗೆದುಕೊಂಡಿದ್ದಾರೆ. 20 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಎಲ್ಲರನ್ನೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.ಜಿಲ್ಲೆಯ ಸೌರ್ಹಾದತೆ ಕಾಪಾಡುವುದು ಪೊಲೀಸರ ಜವಾಬ್ದಾರಿ. ಈ ಘಟನೆಯ ಬಳಿಕ ಕೆಲ ಸಮಾಜಘಾತಕ ಶಕ್ತಿಗಳು ದ್ವೇಷ ಹರಡುವ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಪೊಲೀಸರು ಅದಕ್ಕೆ ಅವಕಾಶ ಕೊಡಬಾರದು. ಕೋಮು ಸಂಘರ್ಷ ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವುದು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಾಗಿದೆ. ದ.ಕನ್ನಡದ ಜನ ಈ ಹುನ್ನಾರಗಳನ್ನು ಅರಿಯಬೇಕು. ಪ್ರಜ್ಞಾವಂತರ ಜಿಲ್ಲೆ ಎಂದೇ ಹೆಸರಾದ ದ.ಕನ್ನಡಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.