ಸಾರಾಂಶ
ಮಾಗಡಿ ರಸ್ತೆಯಲ್ಲಿ ‘ಜಿ.ಟಿ. ವರ್ಲ್ಡ್ ಮಾಲ್’ ಆರಂಭಿಸಿ ಆರು ವರ್ಷ ಪೂರ್ಣಗೊಂಡಿದ್ದು, ಈವರೆಗೆ ರೀತಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದೆಯೂ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಜಿ.ಟಿ.ಮಾಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉತ್ತರ ನೀಡಿದ್ದಾರೆ.
ಬೆಂಗಳೂರು : ಮಾಗಡಿ ರಸ್ತೆಯಲ್ಲಿ ‘ಜಿ.ಟಿ. ವರ್ಲ್ಡ್ ಮಾಲ್’ ಆರಂಭಿಸಿ ಆರು ವರ್ಷ ಪೂರ್ಣಗೊಂಡಿದ್ದು, ಈವರೆಗೆ ರೀತಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದೆಯೂ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಜಿ.ಟಿ.ಮಾಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಆನಂದ್ ಬಿಬಿಎಂಪಿ ನೀಡಿದ್ದ ನೋಟಿಸ್‌ಗೆ ಉತ್ತರ ನೀಡಿದ್ದಾರೆ.
ಪಂಚೆಧಾರಿ ರೈತನಿಗೆ ಪ್ರವೇಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಗುರುವಾರ ಕಾರಣ ಕೇಳಿ ‘ಜಿ.ಟಿ. ವರ್ಲ್ಡ್ ಮಾಲ್’ನ ಮಾಲೀಕರಿಗೆ ನೋಟಿಸ್ ನೀಡಿತ್ತು. ಅದಕ್ಕೆ ಉತ್ತರ ನೀಡಿರುವ ಮಾಲ್‌ನ ಸಿಇಒ ಪ್ರಶಾಂತ್, ಪಂಚೆ ಧರಿಸಿದ ರೈತರಿಗೆ ಮಾಲ್ ಪ್ರವೇಶ ನಿರಾಕರಿಸಿದ ಘಟನೆ ಬಗ್ಗೆ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಘಟನೆಯು ತೀವ್ರ ನೋವು ಮತ್ತು ಬೇಸರ ಉಂಟು ಮಾಡಿದೆ. ಪಂಚೆ ಧರಿಸಿದ ಅನ್ನದಾತನ ಪ್ರವೇಶವನ್ನು ನಿರಾಕರಿಸಿದ ಭದ್ರತಾ ಸಿಬ್ಬಂದಿಯನ್ನು ಈಗಾಗಲೇ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಜತೆಗೆ. ಮಾಲ್ ಒಳಗೆ ಪಂಚೆ ಧರಿಸಿದ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂಬ ನಿಯಮ ಸತ್ಯಕ್ಕೆ ದೂರವಾಗಿದೆ. ಪ್ರತಿ ದಿನವೂ ಮಾಲ್‌ಗೆ ಅನೇಕರು ಪಂಚೆ ಧರಿಸಿಯೇ ಆಗಮಿಸುತ್ತಾರೆ. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿರುವ ಫೋಟೋಗಳನ್ನು ಪ್ರತಿಯನ್ನು ಸಲ್ಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಪ್ರಶಾಂತ್ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.