ಸಾರಾಂಶ
ಕೊಪ್ಪಳ:ನಾನು, ಸಿಎಂ, ಡಿಸಿಎಂ ಸೇರಿ ರಾಬಕೊವಿ ಒಕ್ಕೂಟದ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷನಾಗಿದ್ದು ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಯಲ್ಲಿ ಪ್ರತಿ ಗ್ರಾಪಂಗೊಂದರಂತೆ ಹಾಲಿನ ಸೊಸೈಟಿ ರಚಿಸಲಾಗುವುದು ಎಂದು ರಾಬಕೊವಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನಾ ಕಾರಣದಿಂದ ನಷ್ಟ ಎದುರಿಸುವ ಒಕ್ಕೂಟವನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ಪ್ರಸ್ತುತ ವಿಜಯನಗರ ಜಿಲ್ಲೆಯಲ್ಲಿ ೭೦ ಸಾವಿರ ಲೀಟರ್, ಬಳ್ಳಾರಿ ೮ ಸಾವಿರ ಲೀಟರ್, ಕೊಪ್ಪಳದಿಂದ ೭೫ ಸಾವಿರ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ಒಕ್ಕೂಟವನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿ ಮಾಡಲಾಗುವುದು. ನಾವು ಪೆನಾಲ್ ಮಾಡುವ ವೇಳೆ ಹೆಚ್ಚು ಕಡಿಮೆ ಆಗಿರಬಹುದು. ಎಲ್ಲ ನಾಯಕರು ಅದನ್ನು ಸರಿಪಡಿಸಲಿದ್ದಾರೆ. ಸಹಕಾರಿ ಸಚಿವರ ಜತೆ ಚರ್ಚಿಸಿ ಪ್ರತಿ ಜಿಲ್ಲೆಯಲ್ಲಿ ಹಾಲಿನ ಸೊಸೈಟಿ ಹೆಚ್ಚಿಸಲು ಚಿಂತಿಸುವೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಮಾತನಾಡಿ, ಹಾಲು ಒಕ್ಕೂಟ ₹ ೫ರಿಂದ ₹ ೬ ಕೋಟಿ ನಷ್ಟದಲ್ಲಿದೆ. ಅದನ್ನು ಲಾಭದಾಯಕವಾಗಿ ಮಾಡಬೇಕು. ಕೆಎಂಎಫ್‌ನಿಂದ ದೇಶದ ವಿವಿಧ ಭಾಗಕ್ಕೆ ವಿವಿಧ ಉತ್ಪನ್ನಗಳು ಪೂರೈಕೆಯಾಗುತ್ತಿವೆ. ರಾಬಕೊವಿ ಪಾಲೂ ಅದರಲ್ಲಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಿಎಂ ಅಭಯ ಇದೆ. ಶಾಸಕರು ತಾವು ಅಭಿವೃದ್ಧಿಯಾಗುವುದಲ್ಲ, ಒಕ್ಕೂಟ ಅಭಿವೃದ್ಧಿಯಾಗುವಂತೆ ಮಾಡಬೇಕು ಎಂದು ಹೇಳಿದರು.
ಭೀಮಾನಾಯ್ಕ ಹಾಗೂ ನಿಮ್ಮ ನಡುವೆ ಭಿನ್ನಾಭಿಪ್ರಾಯ ಬಿಟ್ಟು, ಒಕ್ಕೂಟದಲ್ಲಿನ ನೇಮಕಾತಿ ಸಮಸ್ಯೆ ಬಗೆಹರಿಸಿ. ಕಾಂಗ್ರೆಸ್ ದೇಶಕ್ಕಾಗಿ ಶ್ರಮಿಸಿದ ಪಕ್ಷವಾಗಿದೆ. ಒಕ್ಕೂಟದಲ್ಲಿ ರಾಜಕೀಯ ಮಾಡದೇ ಒಗ್ಗಟ್ಟಿನಿಂತ ಕೆಲಸ ಮಾಡಬೇಕು. ನಮ್ಮದೇ ಸರ್ಕಾರವಿದೆ. ಒಂದೇ ವರ್ಷದಲ್ಲಿ ಒಕ್ಕೂಟ ನಷ್ಟದಿಂದ ಲಾಭಕ್ಕೆ ತರಬೇಕು. ಬಳ್ಳಾರಿ, ಮಾನ್ವಿ ಭಾಗದಲ್ಲಿ ಸೊಸೈಟಿಗಳು ಕಡಿಮೆ ಇದ್ದು ಏಕೆ ಎಂಬುದನ್ನು ತಿಳಿದು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಒಕ್ಕೂಟದಲ್ಲಿ ಭೀಮಾನಾಯ್ಕ ಆಡಳಿತದ ವೈಖರಿಗೆ ಬೇಸತ್ತಿದ್ದರು. ಸಚಿವ ಬೋಸರಾಜ್ ಅವರು ಸಹಿತ ಭೀಮಾನಾಯ್ಕ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ರಾಘವೇಂದ್ರ ಹಿಟ್ನಾಳ ಸೂಕ್ತ ಅಭ್ಯರ್ಥಿ ಎನ್ನುವ ಕಾರಣಕ್ಕೆ ವರಿಷ್ಠರು ಅವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಪ್ರತಿ ಊರಿಗೊಂದು ಹಾಲಿನ ಡೈರಿ ಸ್ಥಾಪಿಸಬೇಕೆಂದರು.ಮುಖಂಡ ಶಾಂತಣ್ಣ ಮುದಗಲ್, ಯಂಕಣ್ಣ ಯರಾಶಿ, ಶ್ರೀನಿವಾಸ ಗುಪ್ತಾ, ಎನ್. ಸತ್ಯನಾರಾಯಣ, ಮಂಜು ನಿಡಶೇಷಿ, ಎಸ್.ಬಿ. ನಾಗರಳ್ಳಿ, ಕೃಷ್ಣಾರಡ್ಡಿ ಗಲಬಿ, ಹಂಪಯ್ಯ ಹಿರೇಮಠ, ಗುರುರಾಜ, ಲತಾ ಚಿನ್ನೂರು, ಮೈನುದ್ದೀನ್ ಮುಲ್ಲಾ, ಮಾಲತಿ ನಾಯಕ, ಗಾಳೆಪ್ಪ ಪೂಜಾರ, ಆಶೀಪ್, ಬಸಯ್ಯ, ಎಂ.ಆರ್. ವೆಂಕಟೇಶ ಇದ್ದರು.