ಬೆಳೆಗಳಿಗೆ ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಸಮೀಪದ ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕಚೇರಿ ಎದುರು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಶುಕ್ರವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ತೀವ್ರಗೊಂಡಿದೆ.

ಕನ್ನಡಪ್ರಭ ವಾರ್ತೆ ಕೊಡೇಕಲ್‌

ಬೆಳೆಗಳಿಗೆ ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಸಮೀಪದ ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್) ಕಚೇರಿ ಎದುರು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಶುಕ್ರವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ತೀವ್ರಗೊಂಡಿದೆ.

ಭಾರತೀಯ ಕೃಷಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲನಗೌಡ ಮಾತನಾಡಿ, ಜಲಾಶಯದಿಂದ ಕಾಲುವೆಗಳ ಮೂಲಕ ನೀರು ಹರಿಸಬೇಕೆಂದು ನಾವು ಕಳೆದ ಹಲವು ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದೇವೆ. ಪ್ರತಿದಿನ ಸಾವಿರಾರು ರೈತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ರೈತರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗುತ್ತಿಲ್ಲ. ಅನ್ನದಾತನಿಗೆ ರಾಜ್ಯ ಸರ್ಕಾರ ಅವಮಾನ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರವೇ ನಮ್ಮ ಯುವ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕುವ ಮೂಲಕ ತೀವ್ರ ಸ್ವರೂಪದ ಹೋರಾಟ ನಡೆಸಲು ಸಿದ್ಧರಾಗಿದ್ದರು. ಆದರೆ, ಅಪರ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಕೆಬಿಜೆಎನ್‌ಎಲ್ ಅಧಿಕಾರಿಗಳ ಸಭೆ ಮುಗಿಯುವವರೆಗೆ ಸಮಯಾವಕಾಶ ಕೇಳಿದ್ದರಿಂದ ತಾಳ್ಮೆಯಿಂದ ಇದ್ದೇವೆ. ಆದರೂ ಈವರೆಗೆ ರೈತರ ಬೇಡಿಕೆಗಳಿಗೆ ಸ್ಪಷ್ಟವಾದ ಸ್ಪಂದನೆ ದೊರೆತಿಲ್ಲ. ರೈತರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು. ಕೂಡಲೇ ನಿಗಮದ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಂಡು ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.

ನಮ್ಮ ಭತ್ತದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ. ಇಂತಹ ನಿರ್ಣಾಯಕ ಸಂದರ್ಭ ನೀರು ನಿಲ್ಲಿಸಿರುವುದರಿಂದ ಬೆಳೆಗಳು ಹಾಳಾಗುವ ಪರಿಸ್ಥಿತಿ ಎದುರಾಗಿದೆ. ಕೃಷಿಗಾಗಿ ಮಾಡಿದ ಖರ್ಚು, ಕುಟುಂಬದ ನಿರ್ವಹಣೆ ಹಾಗೂ ಸಾಲದ ಹೊರೆ ಎಲ್ಲವೂ ನಮ್ಮನ್ನು ಚಿಂತೆಗೆ ದೂಡಿವೆ. ನಮ್ಮ ಕೈಯಲ್ಲಿರುವ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳುವುದಾದರೂ ಹೋರಾಟ ಮಾಡಲೇಬೇಕು. ರಕ್ತ ಕೊಟ್ಟಾದರೂ ನೀರು ತರುತ್ತೇವೆ, ನಮ್ಮ ಬೆಳೆಗಳನ್ನು ಉಳಿಸಿಕೊಳ್ಳದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ” ಎಂದು ರೈತರು ಎಚ್ಚರಿಕೆ ನೀಡಿದರು.