ಸಾರಾಂಶ
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ನಾನು ಸೇರಿ ಸಚಿವರು ಪ್ರತಿನಿಧಿಸುವ 17 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಕ್ಷೇತ್ರಗಳ ಕುರಿತು ಆತ್ಮಾವಲೋಕನ ಅಗತ್ಯ. ಈ ಬಗ್ಗೆ ಪಕ್ಷದ ಸೂಚನೆಯನ್ನು ಎಲ್ಲರೂ ಪಾಲಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲೀಡ್ ಕೊಡಿಸಲು ಹದಿನೇಳು ಮಂದಿ ಸಚಿವರು ವಿಫಲರಾಗಿದ್ದು, ಈ ಬಗ್ಗೆ ರಾಹುಲ್ ಗಾಂಧಿ ಅವರು ವರದಿ ಕೊಡುವಂತೆ ಸೂಚಿಸಿರುವ ಬಗ್ಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವರ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿರುವ ಬಗ್ಗೆ ಪರಿಶೀಲನೆ ಹಾಗೂ ಆತ್ಮಾವಲೋಕನ ಅಗತ್ಯ. ನಾವೆಲ್ಲರೂ ಇದನ್ನು ಒಪ್ಪಿದ್ದೇವೆ. ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ಬಗ್ಗೆ ಪಕ್ಷದ ಸೂಚನೆಯನ್ನು ಪಾಲಿಸುತ್ತೇವೆ ಎಂದು ಹೇಳಿದರು.
ಸಚಿವರು ಸಚಿವ ಸಂಪುಟದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಸರ್ಕಾರಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಅಲ್ಲೇ ಚರ್ಚಿಸುತ್ತೇವೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಮಾತ್ರ ಕೋರ್ ಕಮಿಟಿ ಸಭೆ, ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಬಹುದು. ಅದಕ್ಕೆ ಅವಕಾಶಗಳನ್ನು ಅಧ್ಯಕ್ಷರು ಕೊಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.