ಉಸಿರಿರುವರೆಗೂ ಮಾಗಡಿ ಜನರಿಗಾಗಿ ಮಿಡಿಯುವೆ

| Published : Jan 27 2025, 12:48 AM IST

ಸಾರಾಂಶ

ಕುದೂರು: ನನ್ನ ಕೊನೆ ಉಸಿರಿರುವ ತನಕ ಮಾಗಡಿಯ ಜನತೆಗೆ ನನ್ನ ಹೃದಯ ಮಿಡಿಯುತ್ತಿರುತ್ತದೆ. ಮಾಗಡಿ ಅಭಿವೃದ್ಧಿಗೆ ಎಂತಹ ಸ್ಥಿತಿಯಲ್ಲೂ ನಾನು ಚೈತನ್ಯಶೀಲನಾಗಿ ಕೆಲಸ ಮಾಡುತ್ತೇನೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಕುದೂರು: ನನ್ನ ಕೊನೆ ಉಸಿರಿರುವ ತನಕ ಮಾಗಡಿಯ ಜನತೆಗೆ ನನ್ನ ಹೃದಯ ಮಿಡಿಯುತ್ತಿರುತ್ತದೆ. ಮಾಗಡಿ ಅಭಿವೃದ್ಧಿಗೆ ಎಂತಹ ಸ್ಥಿತಿಯಲ್ಲೂ ನಾನು ಚೈತನ್ಯಶೀಲನಾಗಿ ಕೆಲಸ ಮಾಡುತ್ತೇನೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಕುದೂರು ಗ್ರಾಮದಲ್ಲಿ ನಿರಂತರ ಸಂಸ್ಥೆ ಏರ್ಪಡಿಸಿದ್ದ ಎಚ್.ಎಂ.ರೇವಣ್ಣ ಅಮೃತ ವರ್ಷದ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ "ಅಂತರಂಗ ಮತ್ತು ಬಹಿರಂಗ " ಕಾರ್‍ಯಕ್ರಮದಲ್ಲಿ ತಾಲೂಕಿನ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಾಸಕ ಎಚ್.ಸಿ.ಬಾಲಕೃಷ್ಣರ ತಂದೆ ಚನ್ನಪ್ಪನವರು ಕಾಂಗ್ರೆಸ್ ತ್ಯಜಿಸಿ ಜನತಾಪಕ್ಷಕ್ಕೆ ಹೋಗುವಾಗ ನಾನು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದೆ. ಅವರು ನೀನು ಈಗಾಗಲೇ ವಿದ್ಯಾರ್ಥಿ ನಾಯಕನಾಗಿ ಬೆಳೆದಿರುವೆ ನೀನೇ ಎಂಎಲ್‌ಎ ಆಗುತ್ತಿಯಾ ಎಂದು ನನಗೆ ಆಶೀರ್ವಾದ ಮಾಡಿದ್ದರು. ನಾನು ಅಂದಿನ ಕಾಲದಲ್ಲೇ ಕೆಎಎಸ್ ಪರೀಕ್ಷೆ ಪಾಸ್ ಮಾಡಿದ್ದೆ, ಸ್ನೇಹಿತರು ನನ್ನ ಕ್ಷೇತ್ರ ರಾಜಕಾರಣ ಎಂದು ಹೇಳಿ ಸರ್ಕಾರಿ ಕೆಲಸಕ್ಕೆ ಹೋಗದಂತೆ ತಡೆದರು. ಹಾಗೊಂದು ವೇಳೆ ಸರ್ಕಾರಿ ನೌಕರನಾಗಿದ್ದರೆ ಇಷ್ಟೊತ್ತಿಗೆ ಡಿಸಿಯಾಗಿ ನಿವೃತ್ತಿಯಾಗಿ ಹದಿನೈದು ವರ್ಷ ತುಂಬುತ್ತಿತ್ತು ಎಂದು ಸ್ಮರಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮಾಗಡಿ ತಾಲೂಕಿನಲ್ಲಿ ಕುಟುಂಬ ರಾಜಕಾರಣವನ್ನು ಪಕ್ಕಕ್ಕೆ ಸರಿಸಿ ಶಾಸಕರಾದ ಹೆಗ್ಗಳಿಕೆ ಎಚ್.ಎಂ.ರೇವಣ್ಣ ಅವರದ್ದಾಗಿದೆ. ಅವರು ಮಾಗಡಿ ಕ್ಷೇತ್ರವನ್ನು ತ್ಯಜಿಸದಿದ್ದಿದ್ದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಅವಕಾಶ ಆಗುತ್ತಿರಲಿಲ್ಲ. ಯಾವ ರಾಜಕಾರಣದ ಹಿನ್ನಲೆಯಿಲ್ಲದೆ, ಬಡ ಕುಟುಂಬದಿಂದ ರಾಜಕಾರಣಕ್ಕೆ ಬಂದ ರೇವಣ್ಣನವರ ಹೋರಾಟ ಮತ್ತು ಸಂಘಟನಾ ಶಕ್ತಿಯಿಂದ ನಮ್ಮ ತಂದೆಯನ್ನೂ ಮತ್ತು ಒಮ್ಮೆ ನನ್ನನ್ನೂ ಚುನಾವಣೆಯಲ್ಲಿ ಸೋಲಿಸಿದ ಪ್ರಬಲ ರಾಜಕಾರಣಿ ಎಚ್.ಎಂ.ರೇವಣ್ಣ ಅವರಾಗಿದ್ದರು ಎಂದು ತಿಳಿಸಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಬಡವರಿಗೆ ಆದ್ಯತೆ ಕೊಟ್ಟು ರಾಜಕಾರಣ ಮಾಡಿದವರನ್ನು ನಿಜವಾದ ರಾಜಕಾರಣಿ ಎನ್ನಬಹುದು. ಅಂತಹ ಗುಣ ಎಚ್.ಎಂ.ರೇವಣ್ಣರಿಗಿದೆ. ಅವರು ನನಗೆ ರಾಜಕೀಯ ದೀಕ್ಷೆ ಕೊಟ್ಟ ಗುರುವಾಗಿ ಉಸಿರಿರುವ ತನಕ ಕೃತಜ್ಞತೆಯಿಂದ ನೆನೆಯುತ್ತೇನೆ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಂ.ನಾಗರಾಜ್ ಮಾತನಾಡಿ, ಎಚ್.ಎಂ.ರೇವಣ್ಣರಿಗೆ ತನ್ನ ಹುಟ್ಟೂರು ಎಂದರೆ ಅದು ಅವರ ಪಾಲಿಗೆ ಮನೆದೇವರ ಕ್ಷೇತ್ರವಿದ್ದಂತೆ. ಇಡೀ ರಾಜ್ಯದ ಯಾವುದೇ ಮೂಲೆಗೆ ಹೋದರು ರೇವಣ್ಣರವರಿಗೆ ಸ್ನೇಹಿತರಿದ್ದಾರೆ. ಅಷ್ಟರ ಮಟ್ಟಿಗೆ ಅವರ ವ್ಯಕ್ತಿತ್ವ ಸ್ನೇಹಪರವಾಗಿದೆ ಎಂದು ತಿಳಿಸಿದರು.

ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯದಿಂದ ರಂಗಮಂಟಪದವರೆಗೆ ಜನಪದ ಕಲಾತಂಡ ಮತ್ತು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆ ಮಾಡಲಾಯಿತು. ಮಾಗಡಿ ಹಾಗೂ ಬೆಂಗಳೂರಿನ ಅಭಿಮಾನಿಗಳು ಹಾರ, ಪೇಟ, ಹೂ, ಹಣ್ಣು, ಪುಸ್ತಕ ಮತ್ತು ಬೆಳ್ಳಿ ಕಿರೀಟ ತೊಡಿಸಿ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ರೇವಣ್ಣ ದಂಪತಿ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾದ ಗ್ರಾಮದ ಕೆ.ಜಿ.ನಾಗಮಣಿ ಮತ್ತು ಬರಹಕಾರ, ಚುಟುಕುಕವಿ ಕಂಡಕ್ಟರ್ ಗಂಗರಾಜು ಅವರನ್ನು ಸನ್ಮಾನಿಸಲಾಯಿತು.

ಸಿದ್ದರಾಮ ಕೇಸಾಪುರ್ ಗಾಯನ ಏರ್ಪಡಿಸಲಾಗಿತ್ತು. ನಿರಂತರ ಸಂಸ್ಥೆಯ ಡಾ.ಮುರಳೀಕೃಷ್ಣ, ಕೆ.ಸಿ.ದಯಾನಂದ್, ವೆಂಕಟೇಶ್, ಯುವ ಮುಖಂಡ ಯತೀಶ್, ಚಂದ್ರಶೇಖರ್, ಮಂಜೇಶ್‌ಕುಮಾರ್, ಉದ್ಯಮಿ ಬಗಿನಗೆರೆ ಕುಮಾರ್, ಚಿಗಳೂರು ಗಂಗಾಧರ್, ಕಲ್ಪನಾಶಿವಣ್ಣ, ಮಾಡಬಾಳ್ ಜಯರಾಂ, ಮಂಜುನಾಥ್, ಕೆ.ಟಿ.ವೆಂಕಟೇಶ್, ವನಜಾ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್ ..................

ರೇವಣ್ಣರಿಗೂ ಎಂಟರ ಸಂಖ್ಯೆಗೂ ಎಲ್ಲಿಲ್ಲದ ನಂಟು

ಅಂತರಂಗ ಬಹಿರಂಗ ಎಂಬ ಈ ಕಾರ್ಯಕ್ರಮದಲ್ಲಿ ರೇವಣ್ಣ ನಡೆದು ಬಂದ ಹಾದಿಯನ್ನು ಸಮಗ್ರವಾಗಿ ನಿರಂತರ ಸಂಸ್ಥೆಯ ವತಿಯಿಂದ ಸಾದರ ಪಡಿಸಿದರು. ರೇವಣ್ಣರಿಗೂ ಎಂಟರ ಸಂಖ್ಯೆಗೂ ಎಲ್ಲಿಲ್ಲದ ನಂಟು. ಅವರು ಮುನ್ಸಿಪಾಲಿಟಿ ಪ್ರೆಸಿಡೆಂಟ್ ಆಗಿದ್ದದ್ದು 8 ತಿಂಗಳು, ವೀರಪ್ಪ ಮೊಯಿಲಿ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದು 8 ತಿಂಗಳು, ಎಸ್.ಎಂ.ಕೃಷ್ಣರ ಸಚಿವ ಸಂಪುಟದಲ್ಲಿ ರೇಷ್ಮೆ ಮತ್ತು ಜವಳಿ ವಿಮಾನಯಾನ ಸಚಿವರಾಗಿ ಕೆಲಸ ನಿರ್ವಹಿಸಿದ್ದು 8 ತಿಂಗಳು, ಮೊದಲ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಕೇವಲ 8 ತಿಂಗಳು ಮಾತ್ರ. ಮತ್ತು ಇದಕ್ಕೆ ಠಸ್ಸೆ ಹೊಡೆದಂತೆ ರೇವಣ್ಣರವರ ಹುಟ್ಟಿದ್ದು ಕೂಡಾ 8ನೇ ತಾರೀಖು.

ರೇವಣ್ಣರವರ ವಿದ್ಯಾಭ್ಯಾಸ, ಮದುವೆ, ರಾಜಕಾರಣದ ಏಳುಬೀಳು, ಕಲೆ, ಸಾಹಿತ್ಯ, ಆಡಳಿತದ ಸಾಧನೆ ಇಂತಹ ಹಲವಾರು ವಿಷಯಗಳನ್ನು ಮಾತು, ಸಂಗೀತ ಮತ್ತು ದೃಶ್ಯರೂಪಕವಾಗಿ ಸಮಗ್ರವಾಗಿ ಸೆರೆಹಿಡಿದು ಪ್ರದರ್ಶಿಸಿದರು. 26ಕೆಆರ್ ಎಂಎನ್ 5,6.ಜೆಪಿಜಿ

5.ಕುದೂರು ಗ್ರಾಮದಲ್ಲಿ ನಿರಂತರ ಸಂಸ್ಥೆ ಏರ್ಪಡಿಸದ್ದ "ಅಮೃತವರ್ಷದ ರೇವಣ್ಣ " ಕಾರ್‍ಯಕ್ರಮದಲ್ಲಿ ಜನಪದ ಕಲಾತಂಡ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಎಚ್.ಎಂ.ರೇವಣ್ಣರನ್ನು ಮೆರವಣಿಗೆ ಮಾಡಲಾಯಿತು.

6. ಕುದೂರು ಗ್ರಾಮದಲ್ಲಿ ನಿರಂತರ ಸಂಸ್ಥೆಯವರು ಏರ್ಪಡಿಸಿದ್ದ ಅಂತರಂಗ-ಬಹಿರಂಗ ಕಾರ್‍ಯಕ್ರಮದಲ್ಲಿ ಎಚ್.ಎಂ.ರೇವಣ್ಣ ದಂಪತಿಯನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಸನ್ಮಾನಿಸಿದರು. ಮಾಜಿ ಶಾಸಕ ಎ.ಮಂಜುನಾಥ್ ಇತರರಿದ್ದರು.