ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಮುಸ್ಲಿಂ ಮೀಸಲಾತಿಯನ್ನು ವಿರೋಧಿಸುವುದು ನನ್ನ ಕರ್ತವ್ಯ. ಪಕ್ಷದ ಹಿರಿಯರ ಸೂಚನೆಯಂತೆ ನಾನು ಪ್ರತಿಭಟಿಸಿದ್ದೇನೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ವಿಧಾನಸಭೆಯಲ್ಲಿ ಗದ್ದಲದ ಕಾರಣಕ್ಕೆ ಇತರ ಬಿಜೆಪಿ ಶಾಸಕರೊಂದಿಗೆ ಅಮಾನತುಗೊಂಡ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪ್ರತಿಕ್ರಿಯಿಸಿದ್ದಾರೆ.ಸರ್ಕಾರದ ಖಜಾನೆ ಖಾಲಿಯಾಗಿದೆ, ಬಜೆಟ್ ಮೂಲಕ ಅದು ಗೊತ್ತಾಗಿದೆ. ಬಜೆಟ್ ಅಧಿವೇಶನದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವಾಗಿದೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ, 48 ಜನಪ್ರತಿನಿಧಿಗಳ ಹನಿಟ್ರ್ಯಾಪ್ ಆಗಿದೆ, ಈ ನಡುವೆ ಮುಸ್ಲಿಮರಿಗಿದ್ದ ಶೇ.4ರ ಮೀಸಲಾತಿಯನ್ನು ಶೇ.10ಕ್ಕೆ ಏರಿಸಿದ್ದಾರೆ. ಇದಕ್ಕೆಲ್ಲ ಪ್ರತಿಭಟಿಸಿದ್ದಕ್ಕೆ ಸ್ಪೀಕರ್ ಅಮಾನತು ಪತ್ರ ಕೊಟ್ಟಿದ್ದಾರೆ. ಇದರ ವಿರುದ್ಧ ಅಗತ್ಯ ಬಿದ್ದರೆ ನಾವು ಕೋರ್ಟು ಮೆಟ್ಟಿಲು ಏರುತ್ತೇವೆ. ಹಿರಿಯರ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದರು.ಮೀಸಲಾತಿ ಮಸೂದೆ ಪಾಸ್ ಮಾಡಲು ಸ್ವೀಕರ್ ಖಾದರ್‌ಗೂ ಆಸಕ್ತಿ ಇರಲಿಲ್ಲ. ಮಸೂದೆ ಮಂಡನೆ ಮಾಡುವಾಗ ನಮ್ಮನ್ನು ಹುರಿದುಂಬಿಸುವ ರೀತಿಯಲ್ಲಿ ಮಾತಾಡಿದರು. ಪ್ರತಿಭಟನೆ ಮಾಡುವಾಗ ಸಭೆ ಮುಂದೂಡಬೇಕಾಗಿತ್ತು. ಅದನ್ನು ಬಿಟ್ಟು ಅವರು ಎಲ್ಲರನ್ನೂ ಮೇಲೆ ಕರೆದರು, ನಂತರ ಫೋಟೋದಲ್ಲಿ ಇದ್ದವರನ್ನು ಅಮಾನತು ಮಾಡಿದರು ಎಂದು ಯಶ್ಪಾಲ್ ಹೇಳಿದ್ದಾರೆ.