ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ದಲಿತರು, ಹಿಂದುಳಿದವರು, ಮುಂದುವರೆದ ವರ್ಗ ಸೇರಿ ಎಲ್ಲಾ ಕಾಂಗ್ರೆಸ್ ಬೆಂಬಲಿತರ ಸಮಾವೇಶ ನಡೆಸಲಾಗುವುದು. ಇದರಲ್ಲಿ ಎಲ್ಲಾ ಕಾಂಗ್ರೆಸ್ಸಿಗರೂ ಭಾಗವಹಿಸಬೇಕು ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.ಇದೇ ವೇಳೆ ವಿಧಾನಸೌಧದಲ್ಲಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಜತೆಗೆ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ ಹಾಗೂ ಡಾ.ಜಿ.ಪರಮೇಶ್ವರ್ ಜೊತೆಗೂಡಿ ಶುಕ್ರವಾರ ನಡೆಸಿದ ಸಭೆಯಲ್ಲಿ ವಿಶೇಷ ಇದ್ದೇ ಇದೆ. ಏನಾದರೂ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳುವುದಿಲ್ಲ. ನಡೆಯುತ್ತಿದೆ ಎಂದೂ ಹೇಳುವುದಿಲ್ಲ. ನಡೆಯುತ್ತಿಲ್ಲ ಎಂದೂ ಹೇಳುವುದಿಲ್ಲ ಎನ್ನುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾತನಾಡದಂತೆ ಯಾವ ಶಕ್ತಿಯೂ ತಡೆಯುತ್ತಿಲ್ಲ. ಯಾವುದಾದರೂ ಶಕ್ತಿ ತಡೆಯುತ್ತಿದ್ದರೆ ನಿಮ್ಮ ಮುಂದೆ ನಿತ್ಯವೂ ಮಾತನಾಡಲು ಸಾಧ್ಯವಾಗುತ್ತಿತ್ತೇ? ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇನ್ನು ಸಮಾವೇಶವು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಲಿದೆಯೇ ಎಂಬ ಪ್ರಶ್ನೆಗೆ, ಇಲ್ಲ ಕಾಂಗ್ರೆಸ್ ನೇತೃತ್ವದಲ್ಲೇ ಸಮಾವೇಶ ನಡೆಸಲಾಗುವುದು. ಇದು ಕಾಂಗ್ರೆಸ್ ಬೆಂಬಲಿತರ ಸಮಾವೇಶ. ಕೇವಲ ದಲಿತರು ಮಾತ್ರವಲ್ಲ ಹಿಂದುಳಿದವರೂ ಇರುತ್ತಾರೆ, ಮುಂದುವರೆದ ವರ್ಗವೂ ಇರುತ್ತದೆ. ಬಿಜೆಪಿಯಲ್ಲಿ ನೂರು ಬಾಗಿಲಾಗಿದೆ. ನಮ್ಮಲ್ಲಿ ಈ ರೀತಿ ಆಗದಂತೆ ಪಕ್ಷ ಸಂಘಟನೆಗೆ ಆದ್ಯತೆ ನೀಡಲು ಹಾಗೂ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸನ್ನದ್ಧಗೊಳಿಸಲು ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನದಲ್ಲಿ ಅವರೇ ವಹಿಸಿಕೊಂಡಿಲ್ಲವೇ? ಬೆಳಗಾವಿಯಲ್ಲಿ ಮಾಡಲಿಲ್ಲವೇ ಅದೇ ರೀತಿ ನಡೆಸುತ್ತಾರೆ. ಕೆಪಿಸಿಸಿ, ಸಚಿವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ಮಾಡುತ್ತೇವೆ. ನಾವು ಅಧಿಕಾರಕ್ಕೆ ಬಂದಿದ್ದೇವೆ. ನಮ್ಮನ್ನು ಅಧಿಕಾರಕ್ಕೆ ತಂದ ಮುಖಂಡರನ್ನು ಗೆಲ್ಲಿಸಬೇಕಾಗಿದೆ. ಈ ಬಗ್ಗೆ ಸಿದ್ಧತೆಗೆ ಸಮಾವೇಶ ನಡೆಸುತ್ತೇವೆ ಎಂದರು.ಎಸ್ಸಿ-ಎಸ್ಟಿ ಸಚಿವರು ಊಟಕ್ಕೆ ಸೇರಲು ಬಿಡಲಿಲ್ಲವಲ್ಲ ಎಂಬುದಕ್ಕೆ ಉತ್ತರಿಸಿದ ಅವರು, ಆ ಎಲ್ಲಾ ಪ್ರಶ್ನೆಗಳಿಗೂ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ. ಗಂಟಲಿಗೆ ಬಂದಿದ್ದರೆ ಬಾಯಿಗೆ ಬರುತ್ತಿತ್ತು. ಆದರೆ ಇದಕ್ಕೆಲ್ಲ ಸಮಯ ಬರಬೇಕು. ಯಾರಿಗೆ ಹೇಳಬೇಕೋ ಅವರಿಗೆ ಹೇಳುವ ವಿಚಾರಗಳನ್ನು ನೇರವಾಗಿ ಹೇಳುತ್ತೇನೆ. ಅನಗತ್ಯವಾಗಿ ಹೊರಗೆ ಮಾತನಾಡಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು.10ರ ಒಳಗಾಗಿ ದೆಹಲಿ ಭೇಟಿ: ಕೆ.ಎನ್. ರಾಜಣ್ಣಹೈಕಮಾಂಡ್‌ನ ವರಿಷ್ಠರ ಭೇಟಿಗೆ ಫೆ.5-6 ಅಥವಾ ಫೆ.7-8 ರಂದು ದೆಹಲಿಗೆ ತೆರಳುತ್ತೇನೆ. ಒಟ್ಟಾರೆ ಫೆ.10ರ ಒಳಗಾಗಿ ಭೇಟಿ ಮಾಡುತ್ತೇನೆ. ಈ ವೇಳೆ ವಿಧಾನಪರಿಷತ್‌ಗೆ ಸರ್ಕಾರದಿಂದ ನಾಮನಿರ್ದೇಶನ ಮಾಡುವ ವೇಳೆ ಚುನಾವಣೆಯಲ್ಲಿ ಗೆಲ್ಲಲಾಗದ, ರಾಜಕೀಯ ಪ್ರಾತಿನಿಧ್ಯ ಇಲ್ಲದಂಥ ಬುದ್ಧಿವಂತರನ್ನು ನಾಮನಿರ್ದೇಶನ ಮಾಡಬೇಕು ಎಂದು ಕೋರುತ್ತೇನೆ. ಈ ಹಿಂದೆ ಬಂಗಾರಪ್ಪ, ಎಚ್.ಡಿ.ದೇವೇಗೌಡರು ಉಪ್ಪಾರ ಸಮಾಜ ಸೇರಿ ಅತಿ ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದ್ದರು. ಇದೇ ರೀತಿ ಅವಕಾಶ ನೀಡಬೇಕು. ಈ ಬಗ್ಗೆ ಹೈಕಮಾಂಡ್ ಮುಂದೆ ತಿಳಿಸುತ್ತೇನೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.