ಕಾವೇರಿ ಪೂಜೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾವೆಲ್ಲರೂ ಕಾವೇರಿ ತಾಯಿ ಮಕ್ಕಳು. ಆಕೆ ಕೃಪೆಯಿಂದಲೇ ನಮ್ಮ ಬದುಕು ಹಸನಾಗಲಿದೆ. ಹೀಗಾಗಿ ಕಾವೇರಿ ತಾಯಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಶ್ರೀರಂಗಪಟ್ಟಣ:
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ನಮ್ಮ ಸಂಪ್ರದಾಯ ಮತ್ತು ಪರಂಪರೆ ಕೈಬಿಡಲು ಸಾಧ್ಯವಿಲ್ಲ. ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಸರಾವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗವೇದಿಕೆಯಲ್ಲಿ ನಡೆದ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ರಾಜ್ಯದ ಪ್ರತಿಯೊಬ್ಬ ರೈತನ ಮನೆಯಲ್ಲೂ ಧಾನ್ಯ ಲಕ್ಷ್ಮಿ ತುಂಬಿ ತುಳುಕಲಿ ಎಂಬ ಆಶಯದೊಂದಿಗೆ ರಾಗಿ ತೂರುವ ಮೂಲಕ ಸಚಿವರು ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು.
ಕಾವೇರಿ ಆರತಿ ನಮ್ಮ ಪರಂಪರೆಯ ಪ್ರತೀಕ:ಕಾವೇರಿ ಪೂಜೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾವೆಲ್ಲರೂ ಕಾವೇರಿ ತಾಯಿ ಮಕ್ಕಳು. ಆಕೆ ಕೃಪೆಯಿಂದಲೇ ನಮ್ಮ ಬದುಕು ಹಸನಾಗಲಿದೆ. ಹೀಗಾಗಿ ಕಾವೇರಿ ತಾಯಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಾವೇರಿ ಆರತಿ ಹಾಗೂ ಶ್ರೀರಂಗಪಟ್ಟಣ ದಸರಾ ಎಂದಿಗೂ ಆಡಂಬರವಲ್ಲ; ಅವು ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ ಎಂದರು.
1610ರಲ್ಲಿ ಆರಂಭವಾದ ಶ್ರೀರಂಗಪಟ್ಟಣದ ದಸರಾ ನಂತರ ಮೈಸೂರಿಗೂ ವಿಸ್ತರಿಸಿತು. ಈ ಬಾರಿ ಹಿರಿಯ ನಟ ವಿ.ರವಿಚಂದ್ರನ್ ಅವರು ದಸರಾ ಉದ್ಘಾಟಿಸಿದ್ದು ಹಾಗೂ ಚಾಮುಂಡೇಶ್ವರಿ ಅಂಬಾರಿ ಹೊತ್ತಿದ್ದ ಧನಂಜಯ ಆನೆ ದಸರಾದಲ್ಲಿ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.ಅಚ್ಚುಕಟ್ಟು ಪ್ರದೇಶದಲ್ಲಾದರೂ ಮಳೆಯಾಗಲಿ:
ನಾಡಿನ ಜನತೆಗೆ ಒಳಿತಾಗಲಿ ಎಂಬ ಉದ್ದೇಶದಿಂದ ನಡೆಯುತ್ತಿರುವ ದಸರಾ ಹಾಗೂ ಕಾವೇರಿ ಆರತಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ಕನಿಷ್ಠ ಅಚ್ಚುಕಟ್ಟು ಪ್ರದೇಶದಲ್ಲಾದರೂ ಉತ್ತಮ ಮಳೆಯಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿ ಎಂಬ ಆಶಯದೊಂದಿಗೆ ಕಾವೇರಿ ತಾಯಿ ಹಾಗೂ ನಾಡದೇವತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ ಎಂದರು.ಇಂದು ಕ್ರೀಡೆ, ಸಾಹಿತ್ಯ ಹಾಗೂ ಸಂಗೀತ ವೈಭವ
ಶ್ರೀರಂಗಪಟ್ಟಣ:ಪಾರಂಪರಿಕ ಶ್ರೀರಂಗಪಟ್ಟಣ ಹಿನ್ನೆಲೆಯಲ್ಲಿ ಅ.16 ರಂದು ಕ್ರೀಡೆ, ಸಾಹಿತ್ಯ ಹಾಗೂ ಸಂಗೀತ ವೈಭವ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 6.30ಕ್ಕೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ವಿಟ್ ಇಂಡಿಯಾ ಮ್ಯಾರಥಾನ್, ಬೆಳಗ್ಗೆ 8 ಗಂಟೆಗೆ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಯೋಗಾಸನ ಸ್ಪರ್ಧೆ, 10 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಹಗ್ಗಜಗ್ಗಾಟ, ಗೋಣಿಚೀಲ ಓಟ, ಜೋಡಿ ಓಟ ಹಾಗೂ ಒಚಿಟಿ ಕಾಲಿನ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದೇ ಸಮಯದಲ್ಲಿ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗದ ರಂಗಮಂದಿರದಲ್ಲಿ ಚೆಸ್ ಸ್ಪರ್ಧೆ ನಡೆಯಲಿದೆ.ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ ಹಾಗೂ ತಾಲೂಕಿನ ಅರಕೆರೆ ಗ್ರಾಮದ ಮಂಜುನಾಥ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ಆಯೋಜಿಸಲಾಗಿದೆ. ಮಧ್ಯಾಹ್ನ2 ಗಂಟೆಗೆ ಜಿಲ್ಲಾ ಕಸಾಪ ವತಿಯಿಂದ ಕವಿಗೋಷ್ಠಿ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಸಂಜೆ 6.30ರಿಂದ ಸಿದ್ದೇಂದ್ರ ಕುಮಾರ ಹಿರೇಮಠ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಯಿಂದ ಕೈಲಾಶ್ ಖೇರ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ನಡೆಯಲಿದೆ.ಜನಪ್ರತಿನಿಧಿಗಳು, ಮುಖಂಡರನ್ನು ತಳ್ಳಾಡಿದ ಪೊಲೀಸರು
ಶ್ರೀರಂಗಪಟ್ಟಣ:ದಸರಾ ಜಂಬೂ ಸವಾರಿ ಕೇಂದ್ರ ಬಿಂದು ಕಿರಂಗೂರು ಬನ್ನಿಮಂಟಪಕ್ಕೆ ಪ್ರವೇಶಿಸಲು ಮುಂದಾದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ತಡೆದು ತಳ್ಳಾಡಿದ ಘಟನೆ ಗುರುವಾರ ನಡೆಯಿತು.ಮನ್ಮುನ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ. ಬೋರೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಗಿರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ರವಿಶಂಕರ್, ಪುರಸಭೆ ಮಾಜಿ ಅಧ್ಯಕ್ಷ ಶಿವಾಜಿರಾವ್, ಗ್ರಾಪಂ ಮಾಜಿ ಸದಸ್ಯ ಹೆಬ್ಬಾಡಿಹುಂಡಿ ಶಿವಮಲ್ಲು, ಮುಖಂಡ ಬಿ.ಆರ್.ಕೊಪ್ಪಲು ದೀಪಕ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಒಳ ಪ್ರವೇಶಿಸಲು ಅವಕಾಶ ನೀಡದೆ ಗೇಟಿನಲ್ಲೇ ತಡೆದು ಹೊರ ಕಳುಹಿಸಲು ಮುಂದಾದರು.ಈ ವೇಳೆ ಮಾತಿನ ಚಕಮಕಿ ನಡೆಯಿತು. ಘಟನೆ ಕಂಡ ಇನ್ಸ್ ಪೆಕ್ಟರ್ ಬಿ.ಬಿ ಕುಮಾರ್ ಹಾಗೂ ಸಿಪಿಐ ವಿವೇಕಾನಂದ ತಕ್ಷಣ ಮದ್ಯ ಪ್ರವೇಶಿಸಿ, ತಮ್ಮ ಪೊಲೀಸ್ ಸಿಬ್ಬಂದಿಗೆ ತಿಳಿಹೇಳಿ ಒಳಗೆ ಕಳುಹಿಸುವಂತೆ ತಿಳಿಸಿದರು. ಇದಕ್ಕೆ ಒಪ್ಪದ ಸಿಬ್ಬಂದಿಗಳು ಪುನಃ ವಾಗ್ವಾದಕ್ಕೆ ಇಳಿದ ಕಾರಣ ಪರಿಸ್ಥಿತಿ ಬಿಗಿಡಾಯಿಸಿತು. ಶಾಸಕ ರಮೇಶ ಬಂಡಿಸಿದ್ದೇಗೌಡ ಖುದ್ದು ಓಡಿ ಬಂದು ಎಲ್ಲರನ್ನು ಸಮಾಧಾನ ಪಡಿಸಿ ಮುಖಂಡರನ್ನು ಒಳ ಕರೆಸಿಕೊಂಡರು.