ಸಾರಾಂಶ
ಶಿಗ್ಗಾಂವಿ: ಭಾರತೀಯರು ಉದಾರಿಗಳು, ಇಲ್ಲಿ ಎಲ್ಲರಿಗೂ ಇರಲು ಅವಕಾಶ ಇದೆ. ಆದರೆ ಷರಿಯಾ ಕಾನೂನಿಗೆ ಅವಕಾಶ ನೀಡಲು ನಾವು ಬಿಡುವುದಿಲ್ಲ ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದರು.
ಶಿಗ್ಗಾಂವಿಯಲ್ಲಿ ಬಿಜೆಪಿ ವತಿಯಿಂದ ವಕ್ಫ್ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಇಂದು ವಕ್ಫ್ ಮೂಲಕ ಲ್ಯಾಂಡ್ ಜಿಹಾದ್ ಮಾಡಲು ನಾವು ಬಿಡುವುದಿಲ್ಲ. ನಮ್ಮ ಪೂರ್ವಿಕರ ಹೋರಾಟದ ಫಲವಾಗಿ ಇಂದು ನಾವು ಈ ದೇಶದಲ್ಲಿ ಇನ್ನೂ ಉಸಿರಾಡುತ್ತಿದ್ದೇವೆ. ಅದನ್ನು ಅರಿತು ಇಂದು ನಾವು ಬದುಕಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮೀರ್ ಅಹಮದ್ ಅವರಿಗೆ ನಮ್ಮದೊಂದು ಪ್ರಶ್ನೆ, ನಿಮಗೆ ಷರಿಯಾ ಮುಖ್ಯವೋ ಅಥವಾ ಸಂವಿಧಾನ ಮುಖ್ಯವೋ? ಸಂವಿಧಾನ ಮುಖ್ಯ ಅನ್ನುವುದಾದರೆ ಷರಿಯಾ ಕಾನೂನು ನಡೆಯಲು ನಾವು ಬಿಡುವುದಿಲ್ಲ ಎಂದರು.
ವಕ್ಫ್ ಕಾನೂನು ಬಂದಿದ್ದು ೧೯೧೩ರಲ್ಲಿ ಶಿಯಾ ಹಾಗೂ ಸುನ್ನಿ ನಡುವಿನ ಭೂಮಿ ಕಾಯಿದೆ ಜಗಳ ಬಗೆಹರಿಸಲು ವಕ್ಫ್ ಕಾನೂನು ಬಂತು. ೧೯೪೭ರ ಆಗಸ್ಟ್‌ನಲ್ಲಿ ಭಾರತವನ್ನು ತುಂಡು ಮಾಡಿ ಪಾಕಿಸ್ತಾನವನ್ನು ಮಾಡಲಾಯಿತು. ಆದರೆ ಮುಸಲ್ಮಾನ ಮುಖಂಡರು ನಮ್ಮ ಧರ್ಮ ಬೇರೆ, ನಮಗೆ ಅಲ್ಲಾನ ಸಮೇತ ಪಾಕಿಸ್ತಾನವನ್ನು ನೀಡಿ ಅಂದರು, ತ್ರೈ ಪಾರ್ಟಿ ಒಪ್ಪಂದವಾಯಿತು, ಮುಸಲ್ಮಾನರಿಗಾಗಿ ಪಾಕಿಸ್ತಾನ, ಹಿಂದೂಗಳಿಗೆ ಹಿಂದುಸ್ತಾನ ಮಾಡಲಾಯಿತು. ಪಾಲು ಕೊಟ್ಟಿಂದ ನೀವು ಬಿಡಿತೀರಿ, ಇಲ್ಲಿರುವ ಮುಸಲ್ಮಾನರು ಭಾರತೀಯರು ಎಂದರು. ೧೯೫೫ರಲ್ಲಿ ವಕ್ಫ್ ಕಾನೂನು ಬಂದಿತು. ೧೯೯೫ರಲ್ಲಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ವಕ್ಫ್ ಕಾನೂನು ತಂದರು. ಸಂವಿಧಾನ ಬಾಹಿರ ಅಧಿಕಾರವನ್ನು ತಂದರು, ಯಾವುದೇ ಜಮೀನು ವಕ್ಫ್ ಬೋರ್ಡ್ ಹೇಳಿದರೆ ಜಮೀನನ್ನು ರೈತರೇ ಒದಗಿಸಬೇಕು, ಕೋರ್ಟ್‌ಗೆ ಹೋಗದೆ ಕೇವಲ ವಕ್ಫ್ ಬೋರ್ಡ್‌ಗೆ ಹೋಗಬೇಕು, ಸಿಎಂ ಸಿದ್ದರಾಮಯ್ಯ ಅವರು ಸಂವಿಧಾನ ತಜ್ಞರು, ರಾಜಕೀಯ ಕೊನೆಗಾಲದಲ್ಲಿದ್ದೀರಿ, ಮತಕೋಸ್ಕರ ಮತಾಂಧರಿಗೆ ಬೆಂಬಲಿಸುವ ಕೆಲಸ ಮಾಡಿ ಹಾಲು ಮತಕ್ಕೆ ಕಳಂಕ ತರುವ ಕೆಲಸ ಮಾಡಬೇಡಿ, ಹಾಲು ಮತ ಸಮಾಜ ಧರ್ಮದ ರಕ್ಷಣೆಗೆ ಜೀವ ಕೊಟ್ಟ ಸಮಾಜವಾಗಿದೆ ಎಂದರು.ನಾವೆಲ್ಲಾ ಹಿಂದೂವಾಗಿ ಒಂದಾಗಿ ಇದ್ದರೆ ಮಾತ್ರ ನಮ್ಮ ಜಮೀನು ಉಳಿಯುತ್ತದೆ, ಆದ್ದರಿಂದ ಬಿಜೆಪಿಗೆ ಮತ ಹಾಕುವ ಮೂಲಕ ಭರತ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಾನು ಒಂದು ಮಾತನ್ನು ಹೇಳಿದ್ದೆ, ಈ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರೆ ಕನ್ನಡಿಗರ ಸರ್ಕಾರ ಬರುವುದಿಲ್ಲ, ಅದು ನಿಜ ಆಗ್ತಿದೆ. ಇಂದು ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ಬಡವರ ಅಸ್ತಿಯನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ. ದೇಶದ್ರೋಹಿ ಕೆಲಸ ಮಾಡಿದವರಿಗೆ ಸರ್ಕಾರ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ಈ ವ್ಯವಸ್ಥೆಯ ವಿರುದ್ಧ ನಾವು ಹೋರಾಡಬೇಕಾಗಿದೆ ಎಂದರು. ಹಳೆಬಸ್ ನಿಲ್ದಾಣದ ಮೂಲಕ ಹಾದು ಟೆಂಪೋ ಸ್ಟ್ಯಾಂಡ್ ತಲುಪಿ ಅಲ್ಲೆ ವಿವಿಧ ಮುಖಂಡರು ಮಾತನಾಡಿದರು.ಪಟ್ಟಣದ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚೆನ್ನಮ್ಮ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆ ಹಾಗೂ ವಿವಿಧ ವಾದ್ಯಗಳೊಂದಿಗೆ ಪ್ರಾರಂಭವಾಯಿತು. ಮಾಜಿ ಸಚಿವ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಸಚಿವರಾದ ರಾಜೂಗೌಡ್ರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಿ. ರಾಜೀವ, ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ ಪಾಲ್ಗೊಂಡಿದ್ದರು.