ಕನ್ನಡಪ್ರಭ ವಾರ್ತೆ ಹಿರಿಯೂರು

ಹರಳಯ್ಯ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲವೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ನಾವುಗಳು ಕಾನೂನು ಪರಿಪಾಲಕರು. ಹಲ್ಲೆಕೋರರಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಹಕ್ಕೊತ್ತಾಯ. ಬಸವ ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು. ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಇತರ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ,‌ ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ ಸಚಿವನಾಗಿದ್ದ ವೇಳೆ 1 ಕೋಟಿ ರು. ಅನುದಾನ ಕೊಟ್ಟಿದ್ದೆ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ, ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.

ಮಠ ನಿರ್ಮಿಸುವಾಗ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ. ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ‌ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರು. ಉಪ ವಿಭಾಗಾಧಿಕಾರಿ ಕಾಂತರಾಜ್, ಡಿವೈಎಸ್‌ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಈ ವೇಳೆ ಉಪಸ್ಥಿತರಿದ್ದರು.