ಸಾರಾಂಶ
ಜಮೀನುಗಳ ಸರ್ವೇ ಕಾರ್ಯ ಸಮಸ್ಯೆಗಳನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ಬಗೆಹರಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥಹ ಒತ್ತುವರಿ ಪ್ರಕರಣಗಳನ್ನು ಪತ್ತೆ ಮಾಡಿ ತೆರವು ಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ವಿವಿಧ ಹೋಬಳಿಗಳಲ್ಲಿ ಜಮೀನುಗಳ ಸರ್ವೇ ಕಾರ್ಯದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಂಕೀರ್ಣದಲ್ಲಿ ಇರುವ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಆತಗೂರು ಹೋಬಳಿ ಸೇರಿದಂತೆ ಹಲವೆಡೆ ಕಳೆದ ಹಲವು ವರ್ಷಗಳ ಹಿಂದೆ ಜಮೀನುಗಳ ಸರ್ವೇ ಕಾರ್ಯದಲ್ಲಿ ಸಾಕಷ್ಟು ಲೋಪಗಳು ಉಂಟಾಗಿದೆ. ಇದರಿಂದ ರೈತರು ತಾಲೂಕು ಕಚೇರಿ ಅಲೆಯುವುದು ಸರ್ವೇ ಸಾಮಾನ್ಯವಾಗಿದೆ ಎಂದರು.
ಜಮೀನುಗಳ ಸರ್ವೇ ಕಾರ್ಯ ಸಮಸ್ಯೆಗಳನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ಬಗೆಹರಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥಹ ಒತ್ತುವರಿ ಪ್ರಕರಣಗಳನ್ನು ಪತ್ತೆ ಮಾಡಿ ತೆರವು ಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಜೊತೆಗೆ ರಸ್ತೆ ನಿರ್ಮಾಣದ ಸಮಸ್ಯೆಗಳನ್ನು ಬಗೆಹರಿಸುವಂತೆ ಆದೇಶ ನೀಡಲಾಗಿದೆ ಎಂದರು.ಜಮೀನು ಖಾತೆಗಳ ಸಂಬಂಧಿಸಿ ದ ಸಮಸ್ಯೆಗಳಿಗೆ ಮತ್ತು ರಸ್ತೆ, ಚರಂಡಿ, ಕುಡಿಯುವ ನೀರಿನ ಹಾಗೂ ಮೂಲ ಸಮಸ್ಯೆಗಳಿಗೆ ತ್ವರಿತವಾಗಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳ ಬಗ್ಗೆ ತಹಸೀಲ್ದಾರ್, ತಾಪಂ ಇಒ, ಸರ್ವೇ ಅಧಿಕಾರಿಗಳು ಹಾಗೂ ರೆವಿನ್ಯೂ ಅಧಿಕಾರಿಗಳಿಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ಈ ಎಲ್ಲಾ ಅಧಿಕಾರಿಗಳು ಕಾನೂನು ಬದ್ಧವಾಗಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಿದ್ದಾರೆ ಎಂದರು.ಈ ವೇಳೆ ತಹಸೀಲ್ದಾರ್ ಡಾ.ಸ್ಮಿತಾರಾಮು, ತಾಪಂ ಇಒ ರಾಮಲಿಂಗಯ್ಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಭುವನ ಸುಂದರ, ಶಿರಸ್ತೇದಾರ್ ಗಳಾದ ಲಕ್ಷ್ಮಿನರಸಿಂಹ, ರೂಪ ಹಾಗೂ ವಿವಿಧ ಹೋಬಳಿಗಳ ರೆವಿನ್ಯೂ ಅಧಿಕಾರಿಗಳು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಕದಲೂರು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಮತ್ತಿತರರಿದ್ದರು.