ಸಾರಾಂಶ
ಕಾರಟಗಿ : ಮಾಜಿ ಸಚಿವ ಶ್ರೀರಾಮುಲು ವಿರುದ್ಧ ನಿರಾಧಾರವಾಗಿ ನಾಲಿಗೆ ಮೇಲೆ ಹಿಡಿತವಿಲ್ಲದೇ ಆರೋಪ ಮಾಡುತ್ತಿರುವ ಶಾಸಕ ಜಿ. ಜನಾರ್ದನ ರೆಡ್ಡಿ ಅವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ನಾಯಕ ವಾಲ್ಮೀಕಿ ಸಮಾಜದ ತಾಕತ್ತು ತೋರಿಸುತ್ತೇವೆ ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸೋಮವಾರ ವಾಲ್ಮೀಕಿ ಮಹಾಸಭಾದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಭಾದ ಜಿಲ್ಲಾಧ್ಯಕ್ಷ ಡಾ. ಕೆ.ಎನ್ ಪಾಟೀಲ್ ಹಾಗೂ ತಾಲೂಕು ಅಧ್ಯಕ್ಷ ಗಿರಿಯಪ್ಪ ಬೂದಿ ಮಾತನಾಡಿದರು.
ಮೊದಲಿಗೆ ಜನಾರ್ದನ ರೆಡ್ಡಿ ರಾಮುಲು ಅವರ ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಜತೆಗೆ ಬಿಜೆಪಿ ಸರಕಾರವಿದ್ದಾಗ ಉಪ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಮತ ಹಾಕಿಸಿಕೊಂಡು ವಾಲ್ಮೀಕಿ ಸಮುದಾಯಕ್ಕೆ ಮೋಸ ಮಾಡಿದ ಬಿಜೆಪಿ ವಿರುದ್ಧವೂ ನಮ್ಮ ಹೋರಾಟ ಆರಂಭಿಸುತ್ತೇವೆಎಂದು ಗುಡುಗಿದರು.
ಬಿಜೆಪಿಯ ಇತಿಹಾಸದಲ್ಲೇ ವಾಲ್ಮೀಕಿ ಸಮುದಾಯದ ಒಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ಉದಾಹರಣೆ ಇಲ್ಲ. ಈ ಹಿಂದೆ ಪಕ್ಷ ಶ್ರೀರಾಮುಲು ಅವರಿಗೆ ಅನ್ಯಾಯ ಮಾಡಿದೆ. ಅದಕ್ಕೆ ಪರಿಹಾರವಾಗಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ, ಕೇಂದ್ರ ಸಂಪುಟದಲ್ಲಿ ಸ್ಥಾನವನ್ನೂ ನೀಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ಶಿವರೆಡ್ಡಿ ನಾಯಕ ಮಾತನಾಡಿ, ಅಸಲಿಗೆ ಸಂಡೂರು ಉಪಚುನಾವಣೆ ಸೋಲಿನ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜನಾರ್ದನ ರೆಡ್ಡಿ ಹೊರಬೇಕು. ತಮ್ಮ ತಪ್ಪನ್ನು ಮರೆಮಾಚಲು ಶ್ರೀರಾಮುಲು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರಾಮುಲು ಅವರು ಸಂಡೂರಿನಲ್ಲಿ ಪ್ರಚಾರ ಮಾಡದೇ ಹೋಗಿದ್ದರೆ, ಬಿಜೆಪಿ ಹೀನಾಯ ಸೋಲು ಅನುಭವಿಸಬೇಕಿತ್ತು. ಇಡೀ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ಸಮುದಾಯವನ್ನೇ ಬಿಜೆಪಿ ಕಡೆಗಣಿಸುತ್ತಿರುವುದು ವಿನಾಶಕ್ಕೆ ತಾವೇ ದಾರಿ ಮಾಡಿಕೊಳ್ಳುತ್ತಿದೆ. ಜನಾರ್ದನ ರೆಡ್ಡಿ ನಿರಾಧಾರವಾಗಿ ಆರೋಪ ಮಾಡುತ್ತಿದ್ದರೂ ಬಿಜೆಪಿ ಕೈಕಟ್ಟಿ ಕುಳಿತಿರುವುದು ನೋಡಿದರೆ ಕಾಣದ ಕೈಗಳ ಆಟ ಹೆಚ್ಚಾಗಿದೆ ಎಂದು ಕಾಣುತ್ತಿದೆ. ಈ ಧೋರಣೆ ಹೀಗೆ ಮುಂದುವರಿದರೆ, ವಾಲ್ಮಿಕಿ ಸಮಯದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಹೇಳಿದರು.
ಮಹಾಸಭಾದ ಕಾರ್ಯದರ್ಶಿ ಸೋಮನಾಥ್ ಹೆಬ್ಬಡದ ಮತ್ತು ಪ್ರಭುರಾಜ್ ಬೂದಿ ಮಾತನಾಡಿದರು.
ಈ ಸಂದರ್ಭ ಗದ್ದೆಪ್ಪ ನಾಯಕ, ಹನುಮಂತಪ್ಪ ಬನ್ನಿಕಟ್ಟಿ, ಬಸವರಾಜ್ ಸಿದ್ದಾಪುರ, ಛತ್ರಪ್ಪ ಸಿಂಗನಾಳ, ಲಿಂಗೇಶ ಚೆಳ್ಳೂರು, ಸೋಮನಾಥ ಬೇರಿಗೆ ವೀರೇಶ ನಾಯಕ, ದುರುಗೇಶ್ ಪ್ಯಾಟ್ಯಾಳ, ಹನುಮೇಶ ಗುರಿಕಾರ, ತಾಪಂ ಮಾಜಿ ಸದಸ್ಯ ತಿಪ್ಪಣ್ಣ, ಪುರಸಭೆ ಸದಸ್ಯರಾದ ರಮೇಶ್ ನಾಯಕ, ಸೋಮಶೇಖರ್ ಗ್ಯಾರೇಜ್, ಫಕೀರಪ್ಪ, ಮೂಕಪ್ಪ, ಕೆಂಚಪ್ಪ ವಕೀಲರು, ರಮೇಶ ಜನೌಷಧ, ದೇವರಾಜ್ ಜೂರಟಗಿ, ಲೀಲಾಧರ್ ನಾಯಕ, ಬಸವರಾಜ್ ಸೋಮನಾಳ, ನಾಗಪ್ಪ ದೇವಿಪುರ, ಮುತ್ತು ಬೇವಿನಾಳ, ಮಂಜುನಾಥ್ ನಾಯಕ್ ಇತರರಿದ್ದರು.