ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಜನರು ಮನೆ ದೀಪ ಬೆಳಗಿಸುತ್ತಿದ್ದಾರೆ. ಅದರ ಉಪಕಾರವನ್ನು ಮುಂದಿನ ಚುನಾವಣೆಯಲ್ಲಿ ತೀರಿಸಲಿದ್ದು, ಕನಿಷ್ಠ 20 ಸೀಟ್‌ಗಳನ್ನಾದರೂ ರಾಜ್ಯದಲ್ಲಿ ಗೆದ್ದೇ ಗೆಲ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾನ ಮಾಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ನ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬ ತಿಂಗಳಿಗೆ 5 ಸಾವಿರ ರು.ಗೂ ಅಧಿಕ ಹಣವನ್ನು ತಮ್ಮ ಜೀವನೋಪಾಯಕ್ಕಾಗಿ ಬಳಸುತ್ತಿದ್ದಾರೆ. ದೇಶದಲ್ಲಿ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಜನರ ಮನಸ್ಸನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ.
ಹೊಸ ನಾಯಕತ್ವಕ್ಕೆ ಜನರು ಚಿಂತಿಸತೊಡಗಿದ್ದಾರೆ. ವಿರೋಧಿಗಳು ಏನೇ ಮಾಡಲಿ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸೀಟ್ ಗೆಲ್ಲುವುದರೊಂದಿಗೆ ದೇಶದಲ್ಲಿ ‘ಇಂಡಿಯಾ’ ಒಕ್ಕೂಟ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದರು.
ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಉಡುಪಿ- ಚಿಕ್ಕಮಗಳೂರಿನಲ್ಲಿ ಗೆದ್ದಿದ್ದ ಸ್ಥಾನಕ್ಕೆ ಮುಖ್ಯಮಂತ್ರಿಯಾದ ಸಂದರ್ಭ ಡಿ.ವಿ.ಸದಾನಂದ ಗೌಡರು ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿದ ಇತಿಹಾಸ ಇದೆ. ಇನ್ನೂ ಗೆಲುವು ಇಲ್ಲಿ ಸಾಧ್ಯ ಎಂದರು.
ಈಗ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಜತೆಯಾಗಿವೆ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೇನೆ ಎಂದಿದ್ದ ದೇವೇಗೌಡರು ಇಂದು ಬಿಜೆಪಿಯತ್ತ ಹೋಗಿದ್ದಾರೆ. ಅವರು ಬೇಕಾದರೆ ತಮ್ಮ ಸಿದ್ಧಾಂತಗಳನ್ನು ಬದಲಾವಣೆ ಮಾಡಿಕೊಳ್ಳಲಿ, ಹೊಂದಾಣಿಕೆ ಮಾಡಿಕೊಳ್ಳಲಿ.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮಾತ್ರ ಎಂದೂ ಬದಲಾಗಲ್ಲ. ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಒಟ್ಟಾಗಿ ಹೋಗುವ ಸಿದ್ಧಾಂತವನ್ನು ನಾವು ಉಳಿಸಿಕೊಂಡು ಹೋಗುತ್ತೇವೆ ಎಂದು ಡಿಕೆಶಿ ಹೇಳಿದರು.
370 ಸೀಟ್ ಗೆಲ್ಲಲು ಅಸಾಧ್ಯ: ಪ್ರಧಾನಿಯವರು ಹೇಳುವಂತೆ 370 ಸೀಟ್ ಗೆಲ್ಲಲು ಸಾಧ್ಯವೇ ಇಲ್ಲ. ಅತ್ತ ರಾಹುಲ್ ಗಾಂಧಿ ದೇಶ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರೆ, ಮಹಾತ್ಮಾ ಗಾಂಧಿ, ನೆಹರೂ, ರಾಜೀವ್ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಂದೆಯೂ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗಾಗಿ 56 ಸಾವಿರ ಕೋಟಿ ರು.ಗಳನ್ನು ನೀಡುತ್ತಿದೆ. ಆದರೂ ಬಜೆಟ್ ವಿರೋಧಿಸಿ ಬಿಜೆಪಿ ಪ್ರತಿಭಟಿಸಿದೆ. ರಾಜ್ಯದಲ್ಲಿ 136 ಕಾಂಗ್ರೆಸ್ ಶಾಸಕರು, ಇಬ್ಬರು ಪಕ್ಷೇತರರು ನಮ್ಮ ಜತೆಗಿದ್ದಾರೆ.
ವಿಪಕ್ಷದವರು ಏನೇ ತಂತ್ರ ಮಾಡಲಿ, ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷಪೂರ್ತಿ ಅಧಿಕಾರ ನಡೆಸಲಿದೆ. ನಂತರವೂ ಅಧಿಕಾರಕ್ಕೆ ಬರಲಿದೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ವ್ಯಕ್ತಪಡಿಸಿದರು.
ಅರಳಿದ ಕಮಲ ಮುದುಡಿತು:ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿದಾಗ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ನಮ್ಮನ್ನು ಯಾವ ರೀತಿಯಾದರೂ ಉಪಯೋಗಿಸಿಕೊಳ್ಳಿ. ನನ್ನನ್ನು ಬಂಡೆ ಎಂದು ಕರೆಯುತ್ತೀರಿ. ಬಂಡೆ ಚಪ್ಪಡಿಯಾಗಲಿ, ಜಲ್ಲಿಯಾಗಲಿ ಎಂದಿದ್ದೆ. ನಂತರ ಐದು ಬೆರಳು ಸೇರಿ ಮುಷ್ಟಿ ಗಟ್ಟಿಯಾಯ್ತು.
ಐದು ಗ್ಯಾರಂಟಿ ಸೇರಿ ಕೈ ಗಟ್ಟಿ ಆಯ್ತು. ಇದನ್ನು ನೋಡಿ ಅರಳಿದ ಕಮಲ ಮುದುಡಿ ಹೋಯಿತು. ತೆನೆ ಹೊತ್ತ ಮಹಿಳೆ ತೆನೆ ಎಸೆದು ಬಿಜೆಪಿ ಸೇರಿದಳು. ಕರ್ನಾಟಕ ಸಮೃದ್ಧಿಯಾಯ್ತು, ಪ್ರಗತಿ ಆಯ್ತು ಎಂದು ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ಮೋದಿಯದ್ದು ಫೇಕ್ ಮಾದರಿ: ನರೇಂದ್ರ ಮೋದಿ ಅವರ ಗ್ಯಾರಂಟಿಯ ಮಾದರಿ ಫೇಕ್ ಮಾದರಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟೀಕಿಸಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಈ ಹಿಂದೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಇವನ್ನೆಲ್ಲ ಜನರೆದುರು ತೆರೆದಿಟ್ಟು ಅವರ ಗ್ಯಾರಂಟಿ ಮಾದರಿ ಫೇಕ್ ಮಾದರಿ ಎನ್ನುವುದನ್ನು ನಿರೂಪಿಸಲಿದ್ದೇವೆ. ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.