ಸಾರಾಂಶ
ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಅಜ್ಞಾನ, ಅಂಧಕಾರ, ಮೌಢ್ಯತೆ ತೊಲಗಿಸಿ ಮುಖ್ಯ ವಾಹಿನಿಗೆ ಬರಬೇಕಿದೆ. ಸರಕಾರದಿಂದ ಅನೇಕ ಶೈಕ್ಷಣಿಕ ಸೌಲಭ್ಯಗಳಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಿದೆ.
ಬಂಗಾರಪೇಟೆ: ಅತ್ಯಂತ ಹಿಂದುಳಿದ ಹೆಳವ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಂಘಟಿತರಾಗಬೇಕಾಗಿದೆ ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಎನ್. ವಿ. ಕರೆ ನೀಡಿದರು.
ಪಟ್ಟಣದ ಹೆಳವ ಸಮುದಾಯದ ಭವನದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜ ಬಂಗಾರಪೇಟೆ ತಾಲೂಕು ಘಟಕದ ವತಿಯಿಂದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೆಳವ ಸಮುದಾಯದವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಂಘಟಿತರಾಗಬೇಕಿದೆ. ಪುರಾತನ ಕಾಲದಲ್ಲಿ ವಿದ್ಯಾರ್ಹತೆಯಿಲ್ಲದಿದ್ದರೂ ಚಾಕಚಕ್ಯತೆಯಿಂದ ವಂಶಾವಳಿ ಹೇಳುವ ಬದುಕು ಕಟ್ಟಿಕೊಂಡು ಸಂಕಷ್ಟಗಳ ನಡುವೆ ಜೀವನ ಸವೆಸಿದ ಕುಟುಂಬಗಳಿಗೆ ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.ಹೆಳವ ಸಮಾಜವು ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ಸಂಘಟಿತರಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕು ಹಾಗೂ ನಮ್ಮ ಹಕ್ಕುಗಳನ್ನು ಪಡೆಯಲು ಸರ್ಕಾರದ ವಿರುದ್ಧ ಹೋರಾಟವನ್ನು ಸಂಘಟಿತರಾಗಿ ಮಾಡಬೇಕು ಎಂದು ತಿಳಿಸಿದರು.
ಸಂಘದ ಖಜಾಂಚಿ ಶ್ರೀನಿವಾಸ್ ಪಿ.ವಿ. ಮಾತನಾಡಿ, ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಅಜ್ಞಾನ, ಅಂಧಕಾರ, ಮೌಢ್ಯತೆ ತೊಲಗಿಸಿ ಮುಖ್ಯ ವಾಹಿನಿಗೆ ಬರಬೇಕಿದೆ. ಸರಕಾರದಿಂದ ಅನೇಕ ಶೈಕ್ಷಣಿಕ ಸೌಲಭ್ಯಗಳಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಒಳ್ಳೆಯ ಸಂಸ್ಕಾರ, ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಜಿ., ಪದಾಧಿಕಾರಿಗಳಾದ ಸತೀಶ್, ಮುರಳಿ, ಶ್ರೀರಾಮ್ ,ಲಕ್ಷ್ಮಣ್ ನಾಗರಾಜ್, ನಾರಾಯಣಸ್ವಾಮಿ, ಶಿವಕುಮಾರ್, ಮಂಜುನಾಥ್, ನಾರಾಯಣಪ್ಪ ,ಚಲಪತಿ, ಗೋವಿಂದ್ ,ಕೃಷ್ಣಮೂರ್ತಿ, ಗಂಗಾಧರ್ ಉಪಸ್ಥಿತರಿದ್ದರು.