ರಾಜ್ಯದಲ್ಲಿ ದುರ್ಬಲ ಸರ್ಕಾರ: ಸಂಸದ ರಾಘವೇಂದ್ರ

| Published : Jun 18 2024, 12:46 AM IST

ಸಾರಾಂಶ

ಹೊಳೆಹೊನ್ನೂರಿನ ಸಮೀಪದ ಆನವೇರಿ ಗ್ರಾಮದಲ್ಲಿ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞಾತ ಸಮಾರಂಭ ಉದ್ದೇಶಸಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ರಾಜ್ಯದಲ್ಲಿ ದುರ್ಬಲ ಸರ್ಕಾರ ಆಡಳಿತ ಮಾಡುತ್ತಿದ್ದು, ಈಗಾಗಲೇ ದಿವಾಳಿ ಹಂತಕ್ಕೆ ತಲುಪಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದಲೂ ಒಂದಲ್ಲ ಒಂದರ ಬೆಲೆ ಏರಿಕೆ ಮಾಡುತ್ತಿದ್ದು, ಇದೀಗ ಪೆಟ್ರೋಲ್ 3 ರು. ಹಾಗೂ ಡಿಸೇಲ್ 3.50 ರು. ಬೆಲೆ ಏರಿಕೆ ಮಾಡಿರುವುದು ಮತದಾರ ಮೇಲೆ ಬರೆ ಹಾಕಿದಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಸಮೀಪದ ಆನವೇರಿ ಶ್ರೀ ಹಿರಿಮಾವುರದಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಡಾ.ಧನಂಜಯ ಸರ್ಜಿ ರವರಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞಾತ ಸಮಾರಂಭ ಉದ್ದೇಶಸಿ ಮಾತನಾಡಿ, ಕೇಂದ್ರದಲ್ಲಿ ಮೋದಿಯವರ ಸರ್ಕಾರ ರಚನೆಯಾಗಿದೆ. ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಚಿರಋಣಿಯಾಗಿರುತ್ತೇನೆ. ಇದರಿಂದಾಗಿ ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಯಾವುದೇ ತೊಂದರೆಯಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಮೂಲೆಗುಂಪಾಗುವ ಕಾಲ ಹತ್ತಿರವಿದೆ. ಈಗಾಗಲೇ ಸಚಿವರು ಹಾಗೂ ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತುತ್ತಿರುವುದೇ ಇದಕ್ಕೆ ಗ್ಯಾರಂಟಿ ಎಂದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವು 2ನೇ ಅತಿ ಹೆಚ್ಚು ಲೀಡ್ ನೀಡಿದ ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿಯೇ ಈ ಕ್ಷೇತ್ರವು ಹೃದಯ ಭಾಗವಾಗಿದ್ದು, ಇಲ್ಲಿಂದ ಹೆಚ್ಚು ಮತ ಪಡೆದ ಪರಿಣಾವಾಗಿ ಗೆಲುವು ಅನಿವಾರ್ಯವಾಯಿತು. ಹೊಳಲೂರ, ಆನವೇರಿ, ಅರಬಿಳಚಿ ಜಿಲ್ಲಾ ಪಂಚಾಯಿತಿಗಳಿಂದ 34 ಸಾವಿರ ಮತಗಳು ಲಭಿಸಿದ್ದು, ಅತ್ಯಧಿಕ ಗೆಲುವಿಗೆ ಸಹಕಾರಿಯಾಗಿದೆ ಎಂದರು.

ನೂತನ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ ಸಹ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಯಾವುದರಲ್ಲೂ ಗೆಲುವು ಸಾಧ್ಯವಾಗದೇ ಇರುವುದು ವಿಪರ್ಯಾಸ. ಗ್ಯಾರಂಟಿಗಳ ಮೂಲಕ ಜನರ ಕಣ್ಣಿಗೆ ಮಣ್ಣೆರೆಚಿ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ಇವರ ದುರಾಡಳಿತವನ್ನು ಸಹಿಸದೇ ಜನರು ತೀರ್ಪು ನೀಡಿದ್ದಾರೆ ಎಂದರು.

ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಿ.ವೈ.ರಾಘವೇಂದ್ರರಿಗೆ ಸಚಿವ ಸ್ಥಾನ ಸಿಗುವ ಎಲ್ಲಾ ಸೂಚನೆಗಳಿದ್ದವು, ಆದರೆ ಕೊನೆಯ ಹಂತದಲ್ಲಿ ಸ್ವಲ್ಪ ಏರುಪೇರಿನಿಂದಾಗಿ ಸ್ಥಾನ ತಪ್ಪಿದೆ. ಮುಂದಿನ ದಿನಗಳಲ್ಲಿ ಇವರಿಗೆ ಸಚಿವ ಸ್ಥಾನ ಸಿಗಲೆಂದು ಹಾರೈಸಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆದಾಗಿನಿಂದ ಗ್ರಾಮಾಂತರದಲ್ಲಿ ಎರಡೂ ಪಕ್ಷಗಳ ಮತದಾರರು ಒಂದಾಗುವುದು ಅಸಾಧ್ಯ ಎಂದು ಕೆಲವರು ಹೇಳುತ್ತಿದ್ದರು. ಆದರೆ ಎರಡೂ ಪಕ್ಷದ ಕಾರ್ಯಕರ್ತರು ಪಕ್ಷಗಳ ಹಿರಿಯರ ಮಾತಿಗೆ ಗೌರವ ನೀಡಿ, ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರ ಫಲವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಪಡೆಯಲು ಸಾಧ್ಯವಾಯಿತು. ಈ ಕಾರಣಕ್ಕಾಗಿ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಜೊತೆಗೆ ನಮ್ಮ ತಾಲೂಕಿನ ಪ್ರತಿಷ್ಟಿತ ಉದ್ಯಮ ಭದ್ರಾವತಿ ವಿಐಎಸ್ಎಲ್ ಪುನರಾರಂಭವಾಗವ ಲಕ್ಷಣಗಳು ಕಂಡುಬರುತ್ತಿವೆ. ಏಕೆಂದರೆ ನಮ್ಮ ಪಕ್ಷದ ಮುಖಂಡರಾದ ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರದ ಕೈಗಾರಿಕಾ ಸಚಿವರಾಗಿದ್ದಾರೆ. ಜಿಲ್ಲೆಯಿಂದ ಬಿ.ವೈ.ರಾಘವೇಂದ್ರರು ಸಂಸದರಾಗಿರುವುದರಿಂದ ಜಿಲ್ಲೆಯ ಉದ್ಯಮದ ಅಭಿವೃದ್ಧಿಗೆ ಸಹಕಾರಿಯಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜೆಡಿಎಸ್ ಹೋಬಳಿ ಅಧ್ಯಕ್ಷ ಸತೀಶ್ ಕಸೆಟ್ಟಿ, ಶ್ರೀನಿವಾಸ್, ಎಮ್.ಎಸ್.ಚಂದ್ರಶೇಖರ್, ರಾಜೇಶ್ ಪಟೇಲ್, ಕಲ್ಲಜ್ಜನಾಳ್ ಮಂಜುನಾಥ, ಸುಬ್ರಮಣಿ, ನಟರಾಜ ಗೌಡ್ರು, ಜೆಡಿಎಸ್ ಮುಖಂಡ ಎಚ್.ನಾಗರಾಜ್, ಗೀತಾ, ಸತೀಶ್, ಎ.ಕೆ.ಮಹದೇವಪ್ಪ ಸೇರಿದಂತೆ ಇನ್ನಿತರರು ಇದ್ದರು.