ದುಗ್ಗಳ ಸದಾನಂದ ನಾಪೋಕ್ಲು: ಮಳೆ ಕೊರತೆಯಿಂದಾಗಿ ಹೋಬಳಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಭತ್ತ ಕೃಷಿಗೆ ರೈತರ ನಿರಾಸಕ್ತಿ ಕಂಡುಬರುತ್ತಿದೆ. ಎರಡು ಮೂರು ದಿನಗಳಿಂದ ಅಲ್ಪ ಪ್ರಮಾಣದ ತುಂತುರು ಮಳೆ ಪ್ರಾರಂಭವಾಗಿದ್ದು, ಕೆಲವೆಡೆ ರೈತರು ಭತ್ತದ ಗದ್ದೆ ಉಳುಮೆ ಮಾಡುವತ್ತ ಚಿತ್ತ ಹರಿಸಿದ್ದಾರೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಚಳಿಯ ವಾತಾವರಣ ಮುಂಗಾರು ಮಳೆಯನ್ನು ನೆನಪಿಸುತ್ತಿದೆ. ಇದೀಗ ಬತ್ತದ ಕೃಷಿಗೆ ಪೂರಕವಾಗಿ ನೆಲ ಹದಗೊಳ್ಳುತ್ತಿದ್ದು, ಅಲ್ಲಲ್ಲಿ ಕೃಷಿಸಾಗುತ್ತಿದೆ. ಬತ್ತದ ಬಿತ್ತನೆ ಅವಧಿ ಇದಾಗಿದ್ದರೂ ಮಳೆ ಕೊರತೆಯಿಂದ ಕೆಲವೆಡೆ ತಡವಾಗಿ ಬಿತ್ತನೆಯಾಗಿದೆ.
ಕಾವೇರಿ ನದಿ ತಟದ ಗದ್ದೆಗಳಲ್ಲಿ ವರ್ಷಂಪ್ರತಿ ಬಿತ್ತನೆ ತಡವಾಗುತ್ತಿತ್ತು. ಪ್ರವಾಹದ ಕಾರಣದಿಂದ ರೈತರು ಬತ್ತದ ಬಿತ್ತನೆಯನ್ನು ತಡವಾಗಿ ಮಾಡುತ್ತಿದ್ದರು.ನಾಟಿ ಕೆಲಸವೂ ತಡವಾಗುತ್ತಿತ್ತು. ಇತರೆ ಭಾಗಗಳಲ್ಲಿ ಜೂನ್ ಮೊದಲ ವಾರದಲ್ಲಿ ಮಳೆ ಆರಂಭಗೊಂಡಿದ್ದರೆ ಇದೀಗ ಬಿತ್ತನೆ ಆಗುತ್ತಿತ್ತು. ಮಳೆಯ ಕೊರತೆಯಿಂದ ಹಲವೆಡೆ ಉಳುಮೆಯೇ ನಡೆದಿಲ್ಲ. ಬಲ್ಲಮಾವಟಿ, ಪುಲಿಕೋಟು ಗ್ರಾಮ ವ್ಯಾಪ್ತಿಗಳಲ್ಲಿ ಸಾಂಪ್ರದಾಯಿಕ ಉಳುಮೆಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಭಾಗಮಂಡಲ ವ್ಯಾಪ್ತಿಯ ಭಾಗಮಂಡಲ, ತಣ್ಣಿಮಾನಿ, ಕೋರಂಗಾಲ, ನಾಪೋಕ್ಲು ವ್ಯಾಪ್ತಿಯ ಹೊದ್ದೂರು, ಬಲಮುರಿ ಗ್ರಾಮ ವ್ಯಾಪ್ತಿಗಳಲ್ಲಿ ಈಗಾಗಲೇ ಆರಂಭಗೊಳ್ಳಬೇಕಿತ್ತು. ಮಳೆಯ ಕೊರತೆಯಿಂದ ಈ ಭಾಗಗಳಲ್ಲಿಯೂ ಬಿತ್ತನೆ ಕಾರ್ಯ ತಡವಾಗಿದೆ. ಕೆಲವರು ಪ್ರಾರಂಭಿಸಿದ್ದಾರೆ.ನಾಪೋಕ್ಲು ಹೊರ ವಲಯದಲ್ಲಿ ಕೆಲವರು ಮಾತ್ರ ಉಳುಮೆ ಮಾಡಿ ಬಿತ್ತನೆ ಮಾಡುತ್ತಿದ್ದಾರೆ. ಉಳಿದವರು ಇದೀಗ ಮಳೆಯಾಗುತ್ತಿರುವುದರಿಂದ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕ ಭಾಗಗಳಲ್ಲಿ ಎಲ್ಲರೂ ಯಂತ್ರಗಳ ಸಹಾಯದಿಂದ ಉಳುಮೆ ಮಾಡುತ್ತಿದ್ದು, ಸಾಂಪ್ರದಾಯಿಕ ಉಳುಮೆ ತೀರಾ ಅಪರೂಪವಾಗುತ್ತಿದೆ. ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಈಚೆಗೆ ರೈತರು ಎತ್ತುಗಳನ್ನು ಬಳಸಿ ಉಳುಮೆ ಕಾರ್ಯದಲ್ಲಿ ತೊಡಗಿದ್ದರು.ಭತ್ತದ ಕೃಷಿಯಲ್ಲಿ ವರ್ಷದಿಂದ ವರ್ಷಕ್ಕೆ ರೈತರ ಆಸಕ್ತಿ ಕುಂಠಿತಗೊಳ್ಳುತ್ತಿದೆ. ಕಾರ್ಮಿಕರ ಕೊರತೆ, ಕಾಡುಹಂದಿಗಳ ಉಪಟಳ, ಕಾಡಾನೆಗಳ ಹಾವಳಿ. ಹೀಗೆ ನಾನಾ ಕಾರಣಗಳಿಂದ ರೈತರು ಬತ್ತದ ಕೃಷಿಯಿಂದ ವಿಮುಖರಾಗಿದ್ದಾರೆ. ಹಲವುರೈತರು ಬತ್ತದ ಗದ್ದೆಗಳನ್ನು ಪಾಳುಬಿಟ್ಟಿದ್ದರೆ ಇನ್ನು ಕೆಲವರು ಅಡಿಕೆ ತೋಟಗಳನ್ನಾಗಿ ಪರಿವರ್ತಿಸಿದ್ದಾರೆ.ನರಿಯಂದಡ ಭಾಗಗಳಲ್ಲಿ ಆನೆ ಹಾವಳಿಯಿಂದ ಬಹುತೇಕ ರೈತರು ಬತ್ತದ ಕೃಷಿ ಕೈಬಿಟ್ಟಿದ್ದಾರೆ. ಒಂದೆರಡು ರೈತರು ನಾಟಿ ಮಾಡಿದ್ದು, ಉಳಿದವರು ಕೃಷಿ ಕೈಗೊಳ್ಳಲು ಇದೀಗ ಮಳೆಯೂ ಅಡ್ಡಿಯಾಗಿದೆ. ನರಿಯಂದಡ, ಕುಯ್ಯಂಗೇರಿ ಗ್ರಾಮ ವ್ಯಾಪ್ತಿಗಳಲ್ಲಿ ಈ ಹಿಂದೆ ಕೂಡು ಕೃಷಿ ಪದ್ಧತಿಯಿಂದ ಹಲವರು ಭತ್ತದ ಕೃಷಿ ಕೈಗೊಳ್ಳುತ್ತಾ ಬಂದಿದ್ದು, ಇದೀಗ ಅದು ಕೂಡ ಮರೆಯಾಗುವ ಹಂತದಲ್ಲಿದೆ.