ಆಸ್ತಿ ಅಂತಸ್ತು ಸಂಪತ್ತೆಲ್ಲವೂ ಕ್ಷಣಿಕವಾಗಿದ್ದು, ನಮ್ಮಲ್ಲಿರುವ ವಿದ್ಯೆ ಹಾಗೂ ಸದ್ಗುಣಗಳು ಮಾತ್ರ ಶಾಶ್ವತವಾದವುಗಳು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ಆಸ್ತಿ ಅಂತಸ್ತು ಸಂಪತ್ತೆಲ್ಲವೂ ಕ್ಷಣಿಕವಾಗಿದ್ದು, ನಮ್ಮಲ್ಲಿರುವ ವಿದ್ಯೆ ಹಾಗೂ ಸದ್ಗುಣಗಳು ಮಾತ್ರ ಶಾಶ್ವತವಾದವುಗಳು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದುಕು ಹಸನಾಗಲು ವಿದ್ಯೆ ಬೇಕು. ಅದಕ್ಕಾಗಿ ಛಲದಿಂದ ಮುನ್ನಡೆಯಬೇಕು. ಗುರುವಿನ ಕೃಪೆಯೂ ಬೇಕು. ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಶುದ್ಧ ಮನಸ್ಸು ವಿವೇಕ ಅದಕ್ಕಾಗಿ ಬಹಳಷ್ಟು ಶ್ರಮವೂ ಬೇಕು. ಸಮಾಜಕ್ಕೆ ನಮ್ಮ ಋಣ ತೀರಿಸುವುದು ಕೂಡ ಅತ್ಯಂತ ಮುಖ್ಯವಾದುದು. ಹೆತ್ತವರು, ಗುರು ಹಾಗೂ ಭೂಮಿಯ ಋಣವನ್ನು ತೀರಿಸಲೇಬೇಕು ಎಂದರು.

ನಿವೃತ್ತ ಉಪನ್ಯಾಸಕ ನೀಲಕಂಠ ರಬನಾಳ ಮುಖ್ಯ ಅತಿಥಿಯಾಗಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮದಂತಾಗಿದೆ. ಉದ್ಯೋಗದ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನ ನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಶಿಕ್ಷಣಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ ಎಂದರು.

ಪ್ರಾಚಾರ್ಯ ಡಾ.ಎನ್. ಸದಾಶಿವಪ್ಪ ಮಾತನಾಡಿ, ಪಾಠ ಪ್ರವಚನಗಳಷ್ಟೇ ನಡೆಯುವುದಲ್ಲ. ಕ್ರಿಯಾತ್ಮಕ ಚಟುವಟಿಕೆಗಳು ನಡೆದಾಗಲೇ ಶಾಲೆಯೊಂದು ಶೈಕ್ಷಣಿಕ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲೂ ತನ್ನ ಪಾತ್ರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂಬುದು ಈ ಕಾರ್ಯಕ್ರಮದ ಮೂಲಕ ಸಾಬೀತಾಗಿದೆ ಎಂದರು.

ಉಪನ್ಯಾಸಕ ರಾಘವೇಂದ್ರ ಮಾಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು ಹಾಗೂ ಕಾಲೇಜಿನ ಸಿಬ್ಬಂದಿಯಾದ ನೀಲಕಂಠ ರಬನಾಳ್, ಡಾ. ಬಿ.ಎಸ್. ರುದ್ರೇಶ್. ಡಾ. ಪ್ರೇಮಾ ಪಿ. ಎಂ., ಡಾ. ಕೆ. ವೆಂಕಟೇಶ್, ವಸಂತರಾಜ್ ಕುರಿ, ಡಾ. ಎನ್. ಸದಾಶಿವಪ್ಪ, ಎಂ.ಆರ್. ಜ್ಯೋತಿ. ಶಶಿಕಲಾ ಕಮ್ಮಾರ್, ಸಿ.ಎಸ್. ವಸ್ತ್ರದ್, ಟಿ. ಎನ್. ಕಾಮನಳ್ಳಿ, ಆರ್.ಎಸ್. ಎಂ.ಎನ್.ಹಿರೇಮಠ, ಮಂಜುನಾಥ ನಿಂಗೋಜಿ, ದೀಪಕ್ ದೇಶಪಾಂಡೆ, ಎಸ್. ಸಿ, ವಿರಕ್ತಮಠ್, ಮಂಜಪ್ಪ ಪರಸೀಕ್ಯಾತಿ, ಆರ್. ಎಸ್. ಹೊಳಲದ, ಮಾಲತೇಶ ಜಡೇದ್, ಜಗದೀಶ ನಿಂಬಕ್ಕನವರ, ಲಕ್ಷ್ಮಣ ಹಾನಗಲ್, ಈರಪ್ಪ ಕುಂಬಾರ, ವಿಜಯಲಕ್ಷ್ಮೀ ಶೆಟ್ಟರ, ಡಾ.ಜಿ.ವಿ. ಪ್ರಕಾಶ, ಡಾ. ವಿಶ್ವನಾಥ ಬೊಂದಾಡೆ, ಡಾ. ಪ್ರಕಾಶ ಹುಲ್ಲೂರ, ಮಹೇಶ ಅಕ್ಕಿವಳ್ಳಿ, ಡಾ. ಜಿ.ಟಿ. ಜಿತೇಂದ್ರ, ಡಾ. ರಾಘವೇಂದ್ರ ಮಾಡಳ್ಳಿ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದ ಸಂಘಟಕರಾದ ಎಲ್.ಡಿ. ಬಸವರಾಜ, ರಮೇಶ ಅಳಲಗೇರಿ, ಸವಿತಾ, ಶೈಲಜಾ, ಯಶೋದಾ ಮತ್ತು ಡಾ. ರಾಘವೇಂದ್ರ ಮಾಡಳ್ಳಿಯವರು ಉಪಸ್ಥಿತರಿದ್ದರು