ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ದೇಶದಲ್ಲಿ ಅನೇಕ ಶ್ರೀಮಂತರನ್ನು ಕಂಡಿದ್ದೇವೆ. ಶ್ರೀಮಂತಿಕೆ ಹೃದಯಕ್ಕೆ ಬರಬೇಕು. ತಲೆಗೆ ಬಂದಾಗ ಅನಾಹುತಗಳಾಗುತ್ತವೆ ಎಂದು ಹಾಸನ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶಂಭುನಾಥ ಸ್ವಾಮೀಜಿಗಳು ಹೇಳಿದರು.ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪ ಆವರಣದಲ್ಲಿ ಹಂಪಿ ಹೇಮಕೂಟ, ಗಾಯಿತ್ರಿ ಪೀಠಾಧೀಶ್ವರಾದ ಶ್ರೀ ದಯಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘ, ಜಿಲ್ಲೆಯ ಎಲ್ಲಾ ದೇವಾಂಗ ಸಂಘಗಳ ಸಹಯೋಗದಲ್ಲಿ, ಹಾಸನ ಜಿಲ್ಲಾ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ದೇವಾಂಗ ನೌಕರರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಗವಂತ ಕೊಟ್ಟಿರುವ ಜ್ಞಾನದ ಬೆಳಕನ್ನು ಸದುಪಯೋಗ ಪಡಿಸಿಕೊಳ್ಳುತ್ತಾ ಅವಕಾಶಗಳನ್ನು ಬಳಸಿಕೊಳ್ಳುತ್ತಾ, ಉನ್ನತ ಸ್ಥಾನಕ್ಕೆ ಏರಿದಾಗ ಯಾವುದೇ ಮೀಸಲಾತಿಯ ಅವಶ್ಯಕತೆ ಬೇಕಿಲ್ಲ, ಈ ನಿಟ್ಟಿನಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವ ನೀಡಿ, ಇನ್ನೂ ಹೆಚ್ಚಿನ ಪುರಸ್ಕಾರಗಳನ್ನು ಪಡೆಯುತ್ತಾ ಸಮಾಜದಲ್ಲಿ ಕೀರ್ತಿವಂತರಾಗಿ ಎಂದು ಆಶೀರ್ವಸಿದರು.ಶ್ರೇಷ್ಠ ವಚನಕಾರ ದೇವಾಂಗದಾಸಿಮಯ್ಯ ನವರು ೧೧ನೇ ಶತಮಾನದಲ್ಲಿ ನೇಕಾರವೃತ್ತಿ ಮಾಡುತ್ತಾ ವಚನಗಳನ್ನು ರಚಿಸಿ, ಅವರಲ್ಲಿದ್ದ ವಿಶೇಷ ದೈವಿಗುಣದಿಂದ ಈಶ್ವರನಿಗೆ ಸನ್ನದಾಸೋಹ ನೀಡಿದಂತಹ ಪೂಜ್ಯನೀಯರು. ಇಂದು ಮನೆಗಳಲ್ಲಿ ಹಲವು ದೇವರುಗಳು ಫೋಟೋ ನೋಡಿದ್ದೇವೆ, ಆದರೆ ದೇವರ ದಾಸಿಮ್ಮಯ್ಯ ಮಕ್ಕಳಾದ ನಿಮ್ಮ ಮನೆಯಲ್ಲಿ ಪೂಜ್ಯರ ಫೋಟೋ ಇದೆಯಾ ಎಂದು ಪ್ರಶ್ನಿಸಿ, ನಾವುಗಳೇ ನಮ್ಮ ಗುರುಗಳ ಫೋಟೋ ಇಟ್ಟು ಪೂಜಿಸದಿದ್ದರೆ, ಇನ್ಯಾರು ಪೂಜಿಸುತ್ತಾರೆ. ಆದ್ದರಿಂದ ಪ್ರತಿ ಮನೆಮನದಲ್ಲಿ ಪೂಜ್ಯರನ್ನು ಪೂಜಿಸುವಂತರಾಗಿ ಎಂದು ಸಲಹೆ ನೀಡಸಿದರು.
ಬಾಲಗಂಗಾಧರನಾಥ ಸ್ವಾಮೀಜಿಗಳ ಆಶಯ ನುಡಿಯಂತೆ ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳಲ್ಲಿ ಭಷ್ಟ್ರರನ್ನು ಕಾಣಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿಯೂ ಎಂದಿಗೂ ಭ್ರಷ್ಟನಾಗಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಆದ್ದರಿಂದ ಸಂಸ್ಕಾರವಂತರಾಗಿ, ವಿನಯವಂತರಾಗಿ, ವಿವೇಕವಂತರಾಗಿ, ತಂದೆತಾಯಿ ಪಟ್ಟ ಕಷ್ಟವನ್ನು ಅರ್ಥೈಸಿಕೊಂಡು ಸಾಕಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದಿನ ಸನ್ಮಾನವು ನಿಮ್ಮ ಪ್ರತಿಭೆಗೆ ಸಂದ ಗೌರವವಾಗಿದ್ದು, ಜತೆಗೆ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಇನ್ನೂ ಹೆಚ್ಚಿನ ಕಾಳಜಿಯೊಂದಿಗೆ ಕಲಿತು ಉನ್ನತ ಸ್ಥಾನ ಪಡೆದು ಪೋಷಕರ ಹಾಗೂ ಜನಾಂಗದ ಕೀರ್ತಿ ಹೆಚ್ಚಿಸಿ, ನೆಮ್ಮದಿ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ನೇಕಾರ ಸಮಾಜದಲ್ಲಿ ೨೯ ಪಂಗಡಗಳು ಇದ್ದು, ನಮ್ಮ ನೇಕಾರ ಸಮುದಾಯದಲ್ಲಿ ದೇವಾಂಗ ಜನಾಂಗದ ಜತೆಗೆ ದೇವಾಂಗ ಕ್ರಿಶ್ಚಿಯನ್ ಎಂದು ಸೇರಿಸಲಾಗಿದೆ. ಇದೇ ರೀತಿ ಒಕ್ಕಲಿಗ ಜನಾಂಗ ಸೇರಿದಂತೆ ಎಲ್ಲಾ ಜನಾಂಗದ ಹೆಸರಿನ ಜತೆಗೆ ಕ್ರಿಶ್ಚಿಯನ್ ಎಂದು ಸೇರಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಜಾತಿ ಗಣತಿ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ದೇವಾಂಗವೆಂದು ಮಾತ್ರ ನಮೂದಿಸಿ, ಜನಾಂಗದ ಒಗ್ಗಟ್ಟು ಪ್ರದರ್ಶಿಸುವ ಜತೆಗೆ ನಮ್ಮ ಜನಾಂಗದ ಏಳಿಗೆಗೆ ಶ್ರಮಿಸಬೇಕಿದೆ ಎಂದರು.ಶ್ರೀ ದಯಾನಂದಪುರಿ ಸ್ವಾಮೀಜಿಗಳು ಹಾಗೂ ಶಿವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.ಅಬಕಾರಿ ಇಲಾಖೆ ಉಪ ಆಯುಕ್ತರು, ಮಡಿಕೇರಿ ಹಾಗೂ ರಾಜ್ಯ ದೇವಾಂಗ ನೌಕರರ ಸಂಘದ ಅಧ್ಯಕ್ಷ. ನಾಗೇಶ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆ, ನಿವೃತ್ತ ಜಂಟಿ ಆಯುಕ್ತರಾದ ಜಿ.ಆರ್.ಮಂಜೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಬಿ.ಸೋಮಶೇಖರ್, ದೇವಾಂಗ ಜನಾಂಗದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ, ಇತರರು ಮಾತನಾಡಿದರು.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್, ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘ ಅಧ್ಯಕ್ಷ ಡಾ. ಬಿ.ಎಂ.ವಿಜಯ್, ಗೌರವಾಧ್ಯಕ್ಷ ಜಿ.ಎಸ್.ಸತೀಶ್, ಲೆಕ್ಕಪರಿಶೋಧಕ ಜಲೇಂದ್ರ, ಡಾ. ರಾಜೇಶ್, ವಕೀಲರಾದ ಎಲ್.ಪುರುಷೋತ್ತಮ್, ಶಂಕರಶೆಟ್ಟಿ, ತ್ಯಾಗರಾಜ್, ಕವಿತಾ, ಎ.ಎಚ್.ಉಮೇಶ್, ಇತರರು ಇದ್ದರು.
.