ಸಾರಾಂಶ
ಹಾವೇರಿ: ವಿದ್ಯೆಯು ಕಳ್ಳರಿಂದ ಕದಿಯಲ್ಪಡುವುದಿಲ್ಲ. ಅಣ್ಣ-ತಮ್ಮಂದಿರು ಪಾಲು ಕೇಳಲು ಬರುವುದಿಲ್ಲ. ಸರ್ಕಾರ ತೆರಿಗೆ ಹಾಕುವುದಿಲ್ಲ. ಹೇಗೆ ಬಳಸುತ್ತೇವೆಯೋ ಹಾಗೆ ವೃದ್ಧಿಯಾಗುವ ಶ್ರೇಷ್ಠವಾದ ಸಂಪತ್ತೆಂದರೆ ವಿದ್ಯೆ ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು.ನಗರದ ಗೌರಿಮಠದ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕೋತ್ಸವ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯಶೀಲರಾಗಬೇಕು. ಆಕಳ ಬೆನ್ನಿನ ಮೇಲೆ ಕುಳಿತರೆ ಹಾಲು ಸಿಗುವುದಿಲ್ಲ. ಆಕಳದ ಪಾದದಡಿ ಕುಳಿತರೆ ಹಾಲು ಸಿಗುತ್ತದೆ. ಗಗನಕ್ಕೆ ಸಾಗರಕ್ಕೆ ಮತ್ತೊಂದು ಹೋಲಿಕೆ ಇರುವದಿಲ್ಲ. ಅಂತೆಯೇ ಜ್ಞಾನಕ್ಕೂ ಮತ್ತೊಂದು ಹೋಲಿಕೆ ಇಲ್ಲ. ಉಪನಿಷತ್ತಿನಲ್ಲಿ ಕೂಡ ನಹಿ ಜ್ಞಾನೇನ ಸದೃಶಂ ಎಂದು ಹೇಳಾಗಿದೆ ಎಂದರು.ಮುಖ್ಯ ಅತಿಥಿಗಳಾದ ಜಾನಪದ ವಿದ್ವಾಸ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಭು ಬಳಿಗಾರ ಮಾತನಾಡಿ, ಸಂಸ್ಕಾರದಿಂದ ವ್ಯಕ್ತಿ ಅಥವಾ ವಸ್ತುವಿಗೆ ಶ್ರೇಷ್ಠತೆ ಬರುತ್ತದೆ. ಕನ್ನಡ ಸಂಸ್ಕೃತಿಗೆ ಜಾನಪದವೇ ತಾಯಿಬೇರು. ಹೆಣ್ಣು ಮಗಳು ಗಂಡನ ಮನೆಗೆ ಹೋಗುವಾಗ ಹಾಲುಂಡ ತವರಿಗೆ ಏನೆಂದು ಹರಸಲಿ, ಹೋಳಿ ದಂಡಿ ಕರಕಿ ಹಂಗ ಹಬ್ಬಲಿ ಅವರ ರಸಬಳ್ಳಿ ಎನ್ನುತ್ತಾಳೆ. ಅದೇ ರೀತಿ ಈ ಶಾಲೆಯಿಂದ ಹೊರ ಹೋಗುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹರಕೆ ಕೂಡಾ ಇದೇ ಆಗಬೇಕು ಎಂದರು.ಡಿಡಿಪಿಐ ಸುರೇಶ ಹುಗ್ಗಿ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರುವು, ಮಕ್ಕಳ ಶಿಕ್ಷಣ-ಸಂಸ್ಕಾರ ಮನೆಯಿಂದಲೇ ಮೊದಲು ಪ್ರಾರಂಭವಾಗಬೇಕು ಎಂದರು.ನ್ಯಾಯವಾದಿ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿದರು. ಕಚುಸಾಪ ಜಿಲ್ಲಾ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ ಚುಟುಕುಗಳನ್ನು ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದಲ್ಲಿ ಸಿಆರ್‌ಪಿ, ಎಸ್.ಆರ್. ಹಿರೇಮಠ, ಕಾರ್ಡ್ಮಮ್ ಮರ್ಚ್ಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ಹತ್ತಿಮತ್ತೂರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಳ್ಳಿ, ನಗರಸಭಾ ಸದಸ್ಯರಾದ ಮಮತಾ ಜಾಬಿನ, ತಮ್ಮಣ್ಣ ಮುದ್ದಿ, ಮುಖ್ಯೋಪಾಧ್ಯಾಯರಾದ ಶಂಕರ ಅಕ್ಕಸಾಲಿ ಇತರರು ಇದ್ದರು.ಶಿಕ್ಷಕಿಯರಾದ ಸರಸ್ವತಿ ಹಿರೇಮಠ ಮತ್ತು ಮಂಜುಳಾ ಇಳಿಗೇರ ನಿರೂಪಿಸಿದರು. ಗೀತಾ ಕೋರಿ ಹಾಗೂ ಗೀತಾ ಬಾಣಪ್ಪನವರು ವಂದಿಸಿದರು.