ಸಾರಾಂಶ
ಸಚಿವರ ಕಚೇರಿಯಲ್ಲಿ ನಡೆದ ಆಯುಧಪೂಜೆ ಕಾರ್ಯಕ್ರಮಕ್ಕೆ ಬಂದವರಿಗೆ ಪ್ರಸಾದ ರೂಪದಲ್ಲಿ ಮೇಲುಕೋಟೆ ಪುಳಿಯೋಗರೆ ಹಾಗೂ ಶ್ರೀ ಚಲುವನಾರಾಯಣಸ್ವಾಮಿಗೆ ಪ್ರಿಯವಾದ ಕ್ಷೀರಾನ್ನವನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ಇದೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬುಧವಾರ ಆಯುಧಪೂಜೆ ಸಂಭ್ರಮ ಮನೆಮಾಡಿತ್ತು. ಸಚಿವರ ಆಪ್ತ ಸಹಾಯಕ ಎಂ.ಆರ್.ಶ್ರೀನಿವಾಸಮೂರ್ತಿ ಅವರು ವಿಶೇಷ ಪೂಜಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿ ಪೂಜೆ ನೆರವೇರಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ವಾರ್ತಾಧಿಕಾರಿ ನಿರ್ಮಲಾ, ಸಚಿವರ ಕಚೇರಿ ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಚಿವರ ಕಚೇರಿಯಲ್ಲಿ ನಡೆದ ಆಯುಧಪೂಜೆ ಕಾರ್ಯಕ್ರಮಕ್ಕೆ ಬಂದವರಿಗೆ ಪ್ರಸಾದ ರೂಪದಲ್ಲಿ ಮೇಲುಕೋಟೆ ಪುಳಿಯೋಗರೆ ಹಾಗೂ ಶ್ರೀ ಚಲುವನಾರಾಯಣಸ್ವಾಮಿಗೆ ಪ್ರಿಯವಾದ ಕ್ಷೀರಾನ್ನವನ್ನು ವಿತರಿಸಲಾಯಿತು.ಸಾಮಾನ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳು ಹೊಸದಾಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೊರಗಿದಂತೆ ಇರುತ್ತಿದ್ದವು. ಎನ್.ಚಲುವರಾಯಸ್ವಾಮಿ ಅವರು ಸಚಿವರಾದ ಬಳಿಕ ಅವರ ಆಪ್ತ ಸಹಾಯಕ ಎಂ.ಆರ್.ಶ್ರೀನಿವಾಸಮೂರ್ತಿ ಅವರು ಸಚಿವರ ಕಚೇರಿಯನ್ನು ಸದಾ ಚಟುವಟಿಕೆಯಿಂದ, ಕ್ರಿಯಾಶೀಲವಾಗಿರಿಸಿದ್ದಾರೆ. ಜನರ ಅಹವಾಲುಗಳನ್ನು ಸ್ವೀಕರಿಸುತ್ತಾ ಅವುಗಳನ್ನು ಸಚಿವರ ಗಮನಕ್ಕೆ ತಂದು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೀಗ ಆಯುಧಪೂಜೆ ನೆರವೇರಿಸುವುದರೊಂದಿಗೆ ಹೊಸದೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆದಿರುವುದು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.