ಸಾರಾಂಶ
ಹೆಲ್ಮೆಟ್ ಜೀವ ರಕ್ಷಕವಾಗಿದೆ. ಅದು ಬೈಕ್ ಸವಾರನ ಜೀವ ರಕ್ಷಣೆ ಜೊತೆಗೆ ಅವನ ಕುಟುಂಬದ ಅಮೂಲ್ಯ ಜೀವ ಉಳಿಸುತ್ತದೆ.
ಹಳಿಯಾಳದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ
ಪಿಎಸ್ಐ ಬಸವರಾಜ ಮಬನೂರ ನೇತೃತ್ವದಲ್ಲಿ ಜಾಗೃತಿ ಮೂಡಿಸಿದ ಸಿಬ್ಬಂದಿಕನ್ನಡಪ್ರಭ ವಾರ್ತೆ ಹಳಿಯಾಳ
ಹೆಲ್ಮೆಟ್ ಜೀವ ರಕ್ಷಕವಾಗಿದೆ. ಅದು ಬೈಕ್ ಸವಾರನ ಜೀವ ರಕ್ಷಣೆ ಜೊತೆಗೆ ಅವನ ಕುಟುಂಬದ ಅಮೂಲ್ಯ ಜೀವ ಉಳಿಸುತ್ತದೆ ಎಂದು ಹಳಿಯಾಳ ಪಿ.ಎಸ್.ಐ ಬಸವರಾಜ ಮಬನೂರ ಹೇಳಿದರು.ಸೋಮವಾರ ಹಳಿಯಾಳ ಪೊಲಿಸ್ ಠಾಣೆಯ ಎದುರಿನ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಹೆಲ್ಮೆಟ್ ಕಡ್ಡಾಯ:ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುತ್ತಿರಲಿಲ್ಲ, ಆದರೆ ಇಲಾಖೆಯು ಕೈಗೊಂಡ ಕಟ್ಟು ನಿಟ್ಟಿನ ಕ್ರಮಗಳು ಹಾಗೂ ಜಾಗೃತೆ ಪರಿಣಾಮ ಹೆಲ್ಮೆಟ್ ಧರಿಸುವವರ ಸಂಖ್ಯೆಯು ಬೆಳೆಯಲಾರಂಭಿಸಿದ್ದು, ಅಭಿನಂದನಾರ್ಹ ಬೆಳವಣಿಗೆಯಾಗಿದೆ ಎಂದರು.
ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದು ಇಲಾಖೆಯ ಉದ್ದೇಶವಲ್ಲ, ಬದಲಾಗಿ ಅವರಲ್ಲಿ ಅರಿವು ಮೂಡಿಸಿ ಪ್ರತಿಯೊಬ್ಬರೂ ವಾಹನ ಚಾಲನೆ ವೇಳೆ ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸುವಂತೆ ಮಾಡುವುದೇ ಇಲಾಖೆಯ ಆಶಯವಾಗಿದೆ, ಅದಕ್ಕಾಗಿ ಇಂದು ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಅರಿವು ಮೂಡಿಸುತ್ತಿದ್ದೇವೆ ಎಂದರು.ಪೋಲಿಸ್ ಇಲಾಖೆಯು ಕೈಗೊಂಡಿರುವ ಈ ಅಭಿಯಾನ ಯಶಸ್ವಿಯಾಗಲು ಸಾರ್ವಜನಿಕರು ಸಹ ಕೈಜೋಡಿಸಬೇಕು, ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು, ಬೇರೆಯವರು ಹೆಲ್ಮೆಟ್ ಧರಿಸುವಂತೆ ಪ್ರೇರೇಪಿಸಬೇಕು ಎಂದರು.
ಗುಲಾಬಿ ಹೂವು ನೀಡುವ ಅಭಿಯಾನದ ನಂತರ ಹಳಿಯಾಳ ಪೊಲೀಸ್ ಠಾಣೆಯ ಸಿಬ್ಬಂದಿ ಪಿಎಸ್ಐ ಬಸವರಾಜ ಮಬನೂರು ಮುಂದಾಳತ್ವದಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಮೂಲಕ ಪಟ್ಟಣದೆಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಿದರು.