ಹೆಲ್ಮೆಟ್ ಹಾಕ್ಕೊಳಿ ..ಜೀವ ಉಳ್ಸಕೊಳಿ

| Published : Oct 07 2025, 01:03 AM IST

ಸಾರಾಂಶ

ಶಿರಸಿ ಉಪವಿಭಾಗ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಹೆಲ್ಮೆಟ್ ಹಾಕ್ಕೊಳಿ.. ಜೀವ ಉಳ್ಸಕೊಳಿ.. ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ನಡೆಸಲಾಯಿತು.

ದಂಡ ತುಂಬಿದರಾಯಿತು ಎಂಬ ಮನೋಭಾವನೆ ಒಳ್ಳೆಯದಲ್ಲ: ಡಿಎಸ್ಪಿ ಗೀತಾ ಪಾಟೀಲ್

ಕನ್ನಡಪ್ರಭ ವಾರ್ತೆ ಶಿರಸಿ

ಶಿರಸಿ ಉಪವಿಭಾಗ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಹೆಲ್ಮೆಟ್ ಹಾಕ್ಕೊಳಿ.. ಜೀವ ಉಳ್ಸಕೊಳಿ.. ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ನಡೆಸಲಾಯಿತು.

ನಗರದ ಅಂಚೆ ವೃತ್ತದಲ್ಲಿ ಡಿಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಉಪವಿಭಾಗದ ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಶಿರಸಿ ವೃತ್ತದ ಪೊಲೀಸ್ ಸಿಬ್ಬಂದಿ ಅಭಿಯಾನದಲ್ಲಿ ಭಾಗಿಯಾದರು. ಅಭಿಯಾನದ ಭಾಗವಾಗಿ ನೂರಾರು ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ನಗರಾದ್ಯಂತ ಜಾಗೃತಿ ಜಾಥಾ ನಡೆಸಿದರು‌.‌

ಜಾಥಾಕ್ಕೆ ಚಾಲನೆ ನೀಡಿ ಡಿಎಸ್ಪಿ ಗೀತಾ ಪಾಟೀಲ ಮಾತನಾಡಿ, ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ಅಪಘಾತದಿಂದ ಜೀವ ಹಾನಿಯಾದ ಅನೇಕ ಘಟನೆಗಳು ನಮ್ಮ ಕಣ್ಣೆದುರೇ ಇವೆ. ಜಾಗೃತರಾಗಿ ಹೆಲ್ಮೆಟ್ ಧರಿಸಿಯೇ ಬೈಕ್ ಓಡಿಸಬೇಕು. ದೇಶದಲ್ಲಿ ವಿವಿಧೆಡೆ ನಡೆದ ಅಧ್ಯಯನದಂತೆ ರಸ್ತೆ ಅಪಘಾತವಾದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದವರ ಪೈಕಿ ಶೇ. 70ರಷ್ಟು ಜನ ಬದುಕುಳಿದಿದ್ದಾರೆ. ಶಿರಸಿಯಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಕುರಿತ ಜಾಗೃತಿ ಕಡಿಮೆ ಇದೆ. ಹೆಲ್ಮೆಟ್ ಇಲ್ಲದಿದ್ದರೆ ದಂಡ ತುಂಬಿದರಾಯಿತು ಎಂಬ ಮನೋಭಾವನೆ ಒಳ್ಳೆಯದಲ್ಲ. ಹೆಲ್ಮೆಟ್ ಧರಿಸಿದರೆ ಬೈಕ್ ಸವಾರರ ಜೀವ ಸುರಕ್ಷಿತವಾಗಿರುತ್ತದೆಯೇ ಹೊರತೂ ಪೊಲೀಸರ ಮುಂದಷ್ಟೇ ಹೆಲ್ಮೆಟ್ ಧರಿಸಿ ದಂಡದಿಂದ ತಪ್ಪಿಸಿಕೊಳ್ಳುವುದು ಸೂಕ್ತ ನಿರ್ಧಾರವಲ್ಲ. ಶಿರಸಿಯಲ್ಲಿ ಈಗ ಸಂಚಾರಿ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ಒಂದು ವಾರದ ಕಾಲ ಕಟ್ಟುನಿಟ್ಟಾಗಿ ಎಲ್ಲ ಬೈಕ್ ಸವಾರರ ಪರಿಶೀಲನೆ ಹಾಗೂ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಲಿದ್ದೇವೆ. ಮನೆಯಿಂದ ಬೈಕ್ ಕೀ ತೆಗೆದುಕೊಳ್ಳುವ ವೇಳೆಯೇ ಹೆಲ್ಮೆಟ್ ಕೂಡ ಕೈಲಿ ಹಿಡಿಯುವ ಸ್ವಭಾವ ಬೆಳೆಸಿಕೊಳ್ಳಬೇಕು ಎಂದರು.

ಇದೇ ವೇಳೆ ರಸ್ತೆ ಅಪಘಾತದ ವೇಳೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ಮೃತಪಟ್ಟವರ ಕುಟುಂಬದ ಸದಸ್ಯರು ತಮ್ಮ ಅಳಲು ಹೇಳಿಕೊಂಡರು.

ಶಿರಸಿ ಸಿಪಿಐ ಶಶಿಕಾಂತ ವರ್ಮ, ಸಿದ್ದಾಪುರ ಪಿಐ ಜೆ.ಬಿ. ಸೀತಾರಾಮ, ಮುಂಡಗೋಡ ಪಿಐ ರಂಗನಾಥ್, ಪಿಎಸ್‌ಐಗಳಾದ ನಾಗಪ್ಪ ಬಿ., ಸಂತೋಷಕುಮಾರ ಎಂ., ಅಶೋಕ ರಾಥೋಡ್, ದೇವೇಂದ್ರ ನಾಯ್ಕ, ಮಹಾಂತೇಶ ಕುಂಬಾರ್, ಬಸವರಾಜ ಕನಶೆಟ್ಟಿ, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿ ಇದ್ದರು.