ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರದಲ್ಲಿ ಚಲಿಸಿ: ವಿ.ಕೃಷ್ಣಪ್ಪ

| Published : May 23 2024, 01:04 AM IST

ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರದಲ್ಲಿ ಚಲಿಸಿ: ವಿ.ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲನೆ ಮಾಡಬೇಕು, ನಿಮ್ಮ ಜೀವವನ್ನು ನೀವೇ ರಕ್ಷಿಸಿಕೊಳ್ಳಬೇಕು. ಹೆಲ್ಮೆಟ್ ಇಲ್ಲದೆ ಸಾವು-ನೋವು ಸಂಭವಿಸುತ್ತಿರುವುದು ನಮ್ಮ ಕಣ್ಮುಂದೆಯೇ ನಡೆಯುತ್ತಿವೆ. ಅಲ್ಲದೇ ಕಾರು ಚಾಲನೆಯ ವೇಳೆ ಸೀಟ್ ಬೆಲ್ಟ್ ಧರಿಸಬೇಕು. ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ವಾಹನ ಸವಾರರು ಜಾಗೃತಿ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರ ಮೂಲಕ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕೆಂದು ಡಿವೈಎಸ್ಪಿ ವಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಪಟ್ಟಣದ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹೆಲ್ಮೆಟ್ ಮತ್ತು ಇತರೆ ಸಂಚಾರ ಸುರಕ್ಷತಾ ಉಪಕರಣಗಳ ಬಳಕೆ ಬಗ್ಗೆ ಬುಧವಾರ ಆಯೋಜಿಸಿದ ಜಾಗೃತಿ ಬೈಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಹೆಲ್ಮೆಟ್ ಧರಿಸದೇ ಅಜಾಗುರತೆಯಿಂದ ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಧರಿಸಿದರೇ ಪ್ರಾಣ ರಕ್ಷಣೆ ಜೊತೆಗೆ ಕುಟುಂಬದ ರಕ್ಷಣೆಗೂ ಸಹಾಯವಾಗುತ್ತದೆ ಎಂದರು.

ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲನೆ ಮಾಡಬೇಕು, ನಿಮ್ಮ ಜೀವವನ್ನು ನೀವೇ ರಕ್ಷಿಸಿಕೊಳ್ಳಬೇಕು. ಹೆಲ್ಮೆಟ್ ಇಲ್ಲದೆ ಸಾವು-ನೋವು ಸಂಭವಿಸುತ್ತಿರುವುದು ನಮ್ಮ ಕಣ್ಮುಂದೆಯೇ ನಡೆಯುತ್ತಿವೆ. ಅಲ್ಲದೇ ಕಾರು ಚಾಲನೆಯ ವೇಳೆ ಸೀಟ್ ಬೆಲ್ಟ್ ಧರಿಸಬೇಕೆಂದು ಸಲಹೆ ನೀಡಿದರು.

ರಸ್ತೆಯಲ್ಲಿ ಸಂಚರಿಸುವ ವಾಹನಗಳಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚು ಅಪಾಯಕ್ಕೆ ಒಳಗಾಗುತ್ತವೆ. ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರಲ್ಲಿ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಹೆಚ್ಚಾಗಿದೆ. ತಲೆಗೆ ಬೀಳುವ ಬಲವಾದ ಪೆಟ್ಟಿನಿಂದ ಬಹುತೇಕರು ಸಾವನ್ನಪ್ಪಿದ್ದಾರೆ. ಹೀಗಾಗಿ ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ವಾಹನ ಸವಾರರು ಜಾಗೃತಿ ವಹಿಸಬೇಕೆಂದು ಸಲಹೆ ನೀಡಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಶಿಸ್ತುಬದ್ಧವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಡೆಸಿ ಜನರ ಗಮನ ಸೆಳೆಯುವುದರ ಜತೆಗೆ ಸಂಚಾರಿ ನಿಯಮ ಪಾಲಿಸುವಂತೆ ಸಂದೇಶ ನೀಡಿದರು.

ಈ ವೇಳೆ ಪಟ್ಟಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗಳಾದ ಎಂ.ರವಿಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಬಿ.ಜಿ.ಮಹೇಶ್, ಪಿಎಸ್‌ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.