ಸಾರಾಂಶ
-ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ
-ಮಾಜಿ ಸಂಸದರ ಸೊಸೆ ಮತ್ತು ಹಾಲಿ ಸಂಸದರ ಪತ್ನಿಯ ಭರ್ಜರಿ ಡ್ಯಾನ್ಸ್-ಖಡುವೈರಿಗಳಾಗಿದ್ದವರು ಈಗ ಜೊತೆಯಾಗಿ ಕುಣಿದಿದ್ದು ಮಾತ್ರ ಸೋಜಿಗ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಈಶ್ವರ ಪಾರ್ಕ್ ನಲ್ಲಿ ಸ್ಥಾಪಿಸಲಾಗಿದ್ದ ಹಿಂದೂ ಮಹಾಗಣಪತಿಯನ್ನು 13ನೇ ದಿನವಾದ ಗುರುವಾರ ವಿಸರ್ಜಿಸಲಾಯಿತು. ಭರ್ಜರಿ ಮೆರವಣಿಗೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಹೆಜ್ಜೆ ಹಾಕಿದರು. ಇನ್ನು ಅಚ್ಚರಿ ಎಂದರೇ ಹಾಲಿ ಸಂಸದ ರಾಜಶೇಖರ ಹಿಟ್ನಾಳರ ಪತ್ನಿ ರಶ್ಮಿ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಸೋಸೆ ಮಂಜುಳಾ ಕರಡಿ ಅವರಂತೂ ಭರ್ಜರಿ ಡ್ಯಾನ್ಸ್ ಮಾಡಿದರು.ಪ್ರತಿ ವರ್ಷವೂ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ನಗರದ ಬಹುತೇಕ ನಾಯಕರು ಹೆಜ್ಜೆ ಹಾಕುವುದು ಸಾಮಾನ್ಯ. ಆದರೆ, ಸುಮಾರು 30 ವರ್ಷಗಳ ಕಾಲ ರಾಜಕೀಯವಾಗಿ ವೈರಿಯಾಗಿ ಕಾದಾಡಿದ್ದ ಹಿಟ್ನಾಳ ಮತ್ತು ಕರಡಿ ಕುಟುಂಬ ಈಗ ಕಾಂಗ್ರೆಸ್‌ನದಲ್ಲಿಯೇ ಇರುವುದರಿಂದ ಜಂಟಿಯಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ನಗರದ ಈಶ್ವರ ಪಾರ್ಕ್ ನಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಪ್ರಾರಂಭದಿಂದಲೇ ಆಗಮಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಸೇರಿದಂತೆ ಸಾಲು ಸಾಲು ಕಾಂಗ್ರೆಸ್ ನಾಯಕರು ಮೆರವಣಿಗೆಯುದ್ದಕ್ಕೂ ಕುಣಿದರು.ರಶ್ಮಿ, ಮಂಜುಳಾ ಭರ್ಜರಿ ಡ್ಯಾನ್ಸ್:ಹಾಲಿ ಸಂಸದ ರಾಜಶೇಖರ ಹಿಟ್ನಾಳರ ಪತ್ನಿ ರಶ್ಮಿ ಹಿಟ್ನಾಳ ಹಾಗೂ ಮಾಜಿ ಸಂಸದರ ಸೊಸೆ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡಿರುವ(ಈಗ ಕಾಂಗ್ರೆಸ್‌ನಲ್ಲಿದ್ದಾರೆ) ಮಂಜುಳಾ ಕರಡಿ ಭರ್ಜರಿ ಡ್ಯಾನ್ಸ್ ಮಾಡಿದರು. ಇವರಿಗೆ ನೂರಾರು ಮಹಿಳಾ ನಾಯಕರು ಸಾಥ್ ನೀಡಿದರು.
ಅಬ್ಬರಿಸಿದ ಡಿಜೆ, ಮೌನವಾಗಿದ್ದ ಪೊಲೀಸರು:ಪ್ರಸಕ್ತ ವರ್ಷ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆಗೆ ಅನುಮತಿ ನೀಡಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಎಲ್. ರಾಮ ಅರಸಿದ್ದಿ ಖಡಕ್ ಸೂಚನೆ ನೀಡಿದ್ದರು. ಅಷ್ಟೇ ಅಲ್ಲ, ಜಿಲ್ಲೆಯೊಳಗೆ ಡಿಜೆ ಬಿಟ್ಟುಕೊಳ್ಳಲ್ಲ ಎಂದೆಲ್ಲಾ ಅಬ್ಬರಿಸಿದ್ದರು.
ಆದರೆ, 11ನೇ ದಿನ ಗಣೇಶ ವಿಸರ್ಜನಾ ಮೆರವಣಿಗೆ ತಡರಾತ್ರಿಯಲ್ಲಿಯೂ ನಡೆಸುತ್ತಿದ್ದಾಗ ಡಿಜೆ ಬಂದ್ ಮಾಡಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಎಂಟ್ರಿಯಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆಯಾಡಿ ಡಿಜೆ ಅಬ್ಬರಿಸುವಂತೆ ಮಾಡಿದ್ದರು.ಹಿಂದೂ ಮಹಾಗಣಪತಿಯ ಮೆರವಣಿಗೆಯ ನೇತೃತ್ವವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ರಾಜಶೇಖರ ಹಿಟ್ನಾಳ ವಹಿಸಿದ್ದರಿಂದ ಡಿಜೆ ಸದ್ದು ಅಡಗಿಸುವುದಕ್ಕೆ ಪೊಲೀಸರು ಮುಂದಾಗಲೇ ಇಲ್ಲ. ಹೀಗಾಗಿ, ಮೆರವಣಿಗೆಯುದ್ದಕ್ಕೂ ಡಿಜೆ ಅಬ್ಬರಿಸಿತು.