ನೇಕಾರ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಲಿ

| Published : Apr 03 2025, 12:33 AM IST

ಸಾರಾಂಶ

ನೇಕಾರ ಸಮುದಾಯದವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿಯೂ ನೇಕಾರ ಸಮುದಾಯವನ್ನು ಬೇರು ಮಟ್ಟದಿಂದ ಸಂಘಟಿಸಲಾಗುವುದು. ಜನಾಂಗವು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರ ರಾಜ್ಯದಲ್ಲಿ ನೇಕಾರರ ಸಮುದಾಯದಲ್ಲಿ ೪೮ ಪಂಗಡಗಳಿದ್ದು, ೫೦ ಲಕ್ಷ ಜನಸಂಖ್ಯೆ ಇದ್ದಾರೆ, ಕೋಲಾರ ಜಿಲ್ಲೆಯಲ್ಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ಸಮುದಾಯದ ಜನತೆ ಇದ್ದಾರೆ, ಸಮುದಾಯವೂ ಸಮಾಜದ ಮುಖ್ಯ ವಾಹಿನಿಗೆ ಬರಲು ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಬೇಕು ಎಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಂ.ವಿ.ರವೀಂದ್ರ ಕಿವಿಮಾತು ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ದೇವರ ದಾಸಿಮಯ್ಯರ ೧೦೪೬ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೇಕಾರ ಸಮುದಾಯದವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿಯೂ ನೇಕಾರ ಸಮುದಾಯವನ್ನು ಬೇರು ಮಟ್ಟದಿಂದ ಸಂಘಟಿಸಲಾಗುವುದು ಎಂದರು.

ಜಾನಪದ ಜಗದ್ದುರು ಬಿರುದು

ದೇವರ ದಾಸಿಮಯ್ಯನವರು ೧೧ ನೇ ಶತಮಾನದಲ್ಲಿ ರಾಮನಾಥ ಎಂಬ ಅಂಕಿತ ನಾಮದಿಂದ ತಮ್ಮ ವಚನಗಳನ್ನು ರಚಿಸಿ ಪ್ರಸ್ತುತ ಪಡಿಸುತ್ತಿದ್ದರು, ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ದುರು ಎಂಬ ಬಿರುದುಗಳನ್ನು ಪಡೆದಿದ್ದರೆಂದು ವಿವರಿಸಿದರು.ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ತಮ್ಮ ಕುಟುಂಬ ಸಮೇತರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗ ಮಾತ್ರ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಾಗೂ ಯಶಸ್ಸು ಕಾಣಲು ಸಾಧ್ಯ, ಸರ್ಕಾರ ನಮಗೆ ವರ್ಷಕ್ಕೆ ಒಮ್ಮೆ ದೇವರ ದಾಸಿಮಯ್ಯರ ಜಯಂತಿ ಮಾಡಲು ಅವಕಾಶ ಕಲ್ಪಿಸಿದ್ದು ಸದುಪಯೋಗ ಪಡೆದು ಕೊಳ್ಳಬೇಕೆಂದು ತಿಳಿಸಿದರು.ದಾಸೀಮಯ್ಯ ಕುರಿತು ಉಪನ್ಯಾಸ

ಪ್ರಶಸ್ತಿ ಪುರಸ್ಕೃತರಾದ ಜ್ಞಾನ ಮೂರ್ತಿ ದೇವರ ದಾಸೀಮಯ್ಯನವರ ಬಗ್ಗೆ ಉಪನ್ಯಾಸ ನೀಡಿದರು. ತಹಸೀಲ್ದಾರ್ ಗ್ರೇಡ್ ೨ ಅನ್ಸಾ ಮರಿಯಾ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಸಮುದಾಯದ ಮುಖಂಡ ವೆಂಕಟರಮಣಪ್ಪ, ಕಲಾವಿದ ಶ್ರೀನಿವಾಸ್, ಸುಲ್ತಾನ್ ರವಿಕುಮಾರ್, ನವರತ್ನ ಕುಮಾರ್, ಕಲಾವಿದ ವೆಂಕಟಾಚಲಪತಿ ಇದ್ದರು.