ನೇಕಾರರ ಪತ್ತಿನ ಸಹಕಾರ ಸಂಘ ಪ್ರಗತಿಯೊಂದಿಗೆ ಮುನ್ನಡೆದಿದ್ದು 2025-26ನೇ ಸಾಲಿನಲ್ಲಿ 7 ಲಕ್ಷ 66 ಸಾವಿರಕ್ಕೂ ಹೆಚ್ಚು ಲಾಭವಾಗಿದ್ದು, ಷೇರುದಾರ ನೇಕಾರರಿಗೆ ಶೇ.10ರಷ್ಟು ಡಿವಿಡೆಂಟ್‌ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಗದಗ

ನೇಕಾರರ ಪತ್ತಿನ ಸಹಕಾರ ಸಂಘ ಪ್ರಗತಿಯೊಂದಿಗೆ ಮುನ್ನಡೆದಿದ್ದು 2025-26ನೇ ಸಾಲಿನಲ್ಲಿ 7 ಲಕ್ಷ 66 ಸಾವಿರಕ್ಕೂ ಹೆಚ್ಚು ಲಾಭವಾಗಿದ್ದು, ಷೇರುದಾರ ನೇಕಾರರಿಗೆ ಶೇ.10ರಷ್ಟು ಡಿವಿಡೆಂಟ್‌ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಹೇಳಿದರು.

ಬೆಟಗೇರಿಯ ಹೊಸ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಜರುಗಿದ ಸಂಘದ 15ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2011ರಲ್ಲಿ ಸ್ಥಾಪನೆಯಾದ ಸಂಘ ಕಳೆದ 15 ವರ್ಷಗಳಿಂದ ನೇಕಾರರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಶ್ರಮಿಸಿದೆ. ಆರಂಭದಲ್ಲಿ 380 ಸದಸ್ಯರನ್ನು ಹೊಂದಿದ್ದ ಸಂಘವು ಇದೀಗ 847 ಸದಸ್ಯರನ್ನು ಹೊಂದಿದೆ ಎಂದರು.

ನೇಕಾರರಿಗೆ ಸಾಲ, ಜಾಮೀನು ಸಾಲ, ವಾಹನ ಸಾಲ ನೀಡಲಾಗಿದ್ದು ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಮೂಲಕ ಸಂಘದ ಪ್ರಗತಿಗೆ ಎಲ್ಲ ನಿರ್ದೆಶಕರು ಕೈ ಜೋಡಿಸಿದ್ದಾರೆ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೆಶಕ ಅಜೀತ ನಾಯಕ, ಇಲಾಖೆಯಿಂದ ನೇಕಾರರಿಗೆ ಇರುವ ಸೌಲಭ್ಯಗಳನ್ನು ವಿವರಿಸಿದರು.

ಬೆಟಗೇರಿಯ ಹೆಸ್ಕಾಂ ಸಹಾಯಕ ಅಭಿಯಂತರ ಮುಸ್ತಫ ತಹಶೀಲ್ದಾರ, ಸಂಘದ ಉಪಾಧ್ಯಕ್ಷ ವಿಜಯಕುಮಾರ ಕಬಾಡಿ, ಹಿರಿಯ ನಿರ್ದೆಶಕ ಅಮರೇಶ ಚಾಗಿ ಹಾಗೂ ಅನಿಲ ಗಡ್ಡಿ ಮಾತನಾಡಿದರು.

ಈ ವೇಳೆ ಸಹಕಾರ ಸಂಘದೊಂದಿಗೆ ಉತ್ತಮ ವ್ಯವಹಾರ ಬಾಂಧವ್ಯ ಹೊಂದಿದ ಸದಸ್ಯರಾದ ಮಲ್ಲಿಕಾರ್ಜುನ ಕುದರಿ, ಮಹೇಶ ಮಿಟ್ಟಿ, ರಾಜೇಶ ತಾಡೂರ, ಮಂಜುನಾಥ ಆಮ್ರದ, ಹನಮಂತ ಐಲಿ, ಗಜಾನನಸಾ ಕಬಾಡಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಾದ ಸಿರಿ ಕುಣಗೇರಿ, ಸಚಿನ್ ಜನಿವಾರದ, ವೇದಾ ಢಾಣಿ, ಚರಣ ಶಿರಹಟ್ಟಿ, ಅಶ್ವಿನಿ ಗಂಜಿ, ಅವಿನಾಶ ಐಲಿ, ಸ್ಪೂರ್ತಿ ಗಂಜಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಿರ್ದೆಶಕರಾದ ನಾಮದೇವ ಸೊರೆ, ವಿಷ್ಣು ಪಾಸ್ತೆ, ವೀರಭದ್ರಪ್ಪ ಗಂಜಿ, ಮೋಹನಸಾ ರಾಯಬಾಗಿ, ಮೈಲಾರಪ್ಪ ಅರಣಿ, ಮಂಜುನಾಥ ಚನ್ನಪ್ಪನವರ, ವೀಣಾ ನೀಲಗುಂದ, ಶೈಲಾ ಹೆಬ್ಬಳ್ಳಿ ಇದ್ದರು. ವೀರೇಶ ಕುಂಬಾರ ಸ್ವಾಗತಿಸಿದರು. ಸುಭಾಸ ಗಂಜಿ ಅಡಾವೆ ಪತ್ರಿಕೆ ಓದಿದರು. ಪ್ರಭು ನೀಲಗುಂದ ನಿರೂಪಿಸಿದರು. ಅನಿಲ ಗಡ್ಡಿ ವಂದಿಸಿದರು.