ಸಾರಾಂಶ
ನೆಲಮಂಗಲ: ನೇಕಾರ ಸಮುದಾಯದಿಂದ ಏ.2ರಂದು ದೇವರದಾಸಿಮಯ್ಯ ಜಯಂತಿ ಹಾಗು ಉಚಿತ ಸಾಮೂಹಿಕ ವಿವಾಹೋತ್ಸವ ಆಯೋಜಿಸಲಾಗಿದೆ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ತಿಳಿಸಿದರು.
ತಾಲೂಕಿನ ಕೆಂಪಲಿಂಗನಹಳ್ಳಿಯ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಸಮುದಾಯ ಭವನದಲ್ಲಿ ವಿಶ್ವ ವಿವಾಹ ವೇದಿಕೆ ಆಯೋಜಿಸಿದ್ದ ನೇಕಾರ ಸಮುದಾಯದ ವಧು-ವರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿಗೆ ನೇಕಾರ ಸಮುದಾಯದ ಕೊಡುಗೆ ಅಪಾರ. ನೇಕಾರ ಸಮುದಾಯದಲ್ಲಿ ವರರಿಗೆ ವಧು, ವಧುಗಳಿಗೆ ವರ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದರಿಂದ ರಾಜ್ಯಾದ್ಯಂತ ಸಮುದಾಯದ ಬಂಧುಗಳನ್ನು ಸಂಪರ್ಕಿಸಿ ಒಂದೇ ವೇದಿಕೆಯಲ್ಲಿ ವಧು-ವರರ ಮಾಹಿತಿ ಪಡೆಯುವ ಹಾಗೂ ಸಂಭಾಷಣೆಗೆ ಅವಕಾಶ ಕಲಿಸಿಕೊಡಲಾಗಿದೆ ಎಂದರು.ಕಳೆದ 25 ವರ್ಷ ಗಳಿಂದಲೂ ಸಮಾಜದ ಹಿತ ಕಾಯುವ ವಿಶ್ವ ವಿವಾಹ ವೇದಿಕೆ ಸಂಸ್ಥಾಪಕ ರಾಮಸ್ವಾಮಿ ನೇಕಾರರ ವಧು ವರರ ಸಮಾವೇಶ ನಡೆಸುತ್ತ ಬಂದಿರುವುದು ಉತ್ತಮ ಕೆಲಸ, ಸಮಾಜದ ಬಂಧುಗಳು ಅವಕಾಶ ಉಪಯೋಗಿಸಿಕೊಳ್ಳುವಂತೆ ಕನ್ನಡಪ್ರಭ ದಿನಪತ್ರಿಕೆ ಸಮನ್ವಯ ಸಂಪಾದಕ ಮಲ್ಲಿಕಾರ್ಜುನಯ್ಯ ತಿಳಿಸಿದರು.
310ಕ್ಕೂ ಹೆಚ್ಚು ವಧುವರರು ನೋಂದಣಿ:ನೇಕಾರ ಸಮುದಾಯದ ವಧು-ವರರ ಸಮಾವೇಶದಲ್ಲಿ ರಾಜ್ಯದ ಅನೇಕ ಜಿಲ್ಲೆಗಳ 150ಕ್ಕೂ ಹೆಚ್ಚು ವಧು, 160ಕ್ಕೂ ಹೆಚ್ಚು ವರರು ನೋಂದಣಿ ಮಾಡಿಕೊಂಡಿದ್ದಾರೆ. ವಧು-ವರರ ಮಾಹಿತಿ ಪಡೆದುಕೊಂಡ ಸಂಬಂಧಿಕರು ಪರಿಚಯ ಮಾಡಿಕೊಂಡು ಮುಂದಿನ ತೀರ್ಮಾನ ಮಾಡಲು ವೇದಿಕೆ ಕಲ್ಪಿಸಿಕೊಡಲಾಗಿದೆ. ವಿಶ್ವವಿವಾಹ ವೇದಿಕೆಯಿಂದ ಏ.2ರಂದು ಸಾಮೂಹಿಕ ವಿವಾಹೋತ್ಸವ ಹಮ್ಮಿಕೊಳ್ಳಲಾಗಿದೆ.
ದೋಷನಿವಾರಣೆ: ವಧು-ವರ ವಿವಾಹ ವಿಳಂಬ ಕಾರಣಗಳ ಜಾತಕದೋಷ ಪರಿಹಾರಕ್ಕಾಗಿ ಸಕಲ ದೋಷ ನಿವಾರಣ ಹೋಮ, ಹವನ, ಕಂಕಣಧಾರಣೆ ಕಾರ್ಯಕ್ರಮವನ್ನು ಕೊಳ್ಳೆಗಾಲದ ಶ್ರೀನಿವಾಸ್ ಶಾಸ್ತ್ರಿಗಳಿಂದ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ವಿಶ್ವ ವಿವಾಹ ವೇದಿಕೆ ಸಂಸ್ಥಾಪಕ ರಾಮಸ್ವಾಮಿ ಚಲನಚಿತ್ರ ಹಿರಿಯ ನಟ ಡಾ.ಚಿಕ್ಕಹೆಜ್ಜಾಜಿ ಮಹದೇವ, ರಾಜ್ಯ ದೇವಾಂಗ ನೌಕರರ ಸಂಘ ಅಧ್ಯಕ್ಷ ಭಾಸ್ಕರಯ್ಯ, ದೇವಾಂಗ ಸೇವಾ ಸಮಾಜ ಅಧ್ಯಕ್ಷ ಉಮಾಶಂಕರ್, ದೇವಾಂಗ ಸಂಘದ ಅಧ್ಯಕ್ಷ ಧನರಾಜ್, ವಿಶ್ವ ವಿವಾಹ ವೇದಿಕೆ ಮುಖಂಡರು ಉಪಸ್ಥಿತರಿದರು.
ಪೊಟೊ-26ಕೆಎನ್‌ಎಲ್‌ಎಮ್1-ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿಯ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಸಮುದಾಯ ಭವನದಲ್ಲಿ ವಿಶ್ವ ವಿವಾಹ ವೇದಿಕೆ ಆಯೋಜಿಸಿದ್ದ ನೇಕಾರ ಸಮುದಾಯದ ವಧು-ವರರ ಸಮಾವೇಶದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀ ನಾರಾಯಣ, ಕನ್ನಡಪ್ರಭ ದಿನಪತ್ರಿಕೆ ಸಮನ್ವಯ ಸಂಪಾದಕ ಮಲ್ಲಿಕಾರ್ಜುನಯ್ಯ, ಸಂಸ್ಥಾಪಕ ರಾಮಸ್ವಾಮಿ, ನಟ ಡಾ.ಚಿಕ್ಕಹೆಜ್ಜಾಜಿ ಮಹದೇವ, ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಅಧ್ಯಕ್ಷ ಭಾಸ್ಕರಯ್ಯ, ದೇವಾಂಗ ಸೇವಾ ಸಮಾಜ ಅಧ್ಯಕ್ಷ ಉಮಾಶಂಕರ್, ದೇವಾಂಗ ಸಂಘದ ಅಧ್ಯಕ್ಷ ಧನರಾಜ್ ಇತರರಿದ್ದರು.